ವಾರಣಾಸಿ ಶಿವಲಿಂಗಕ್ಕೂ, ಕಾಮಣ್ಣನಿಗೂ ಮಾಸ್ಕ್ : ಕೆಮ್ಮಿದ್ದರೆ ದರ್ಶನ ಕೊಡಲ್ಲ ಎಂದ ತಿಮ್ಮಪ್ಪ

ಕೊರೊನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ರಾಜ್ಯದ ಜನ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಅದರಲ್ಲೂ ವಯಸ್ಕರು, ಮಕ್ಕಳನ್ನು ಮನೆ ಬಿಟ್ಟು ಹೊರಗಡೆ ಕಳುಹಿಸುವುದೇ ಬೇಡ ಎನ್ನುವ ನಿರ್ಧಾರಕ್ಕೆ ಬಂದುಬಿಟ್ಟಿದ್ದಾರೆ. ಹೀಗಾಗಿ ಶಾಲೆಗಳಿಗೆ 5ನೇ ತರಗತಿಯವರೆಗೆ ರಜೆ ಘೋಷಿಸಲಾಗಿದೆ. ಮಾರುಕಟ್ಟೆ, ಐಟಿ-ಬಿಟಿ ಕಂಪಿನಗಳು, ಮಾರುಕಟ್ಟೆ ಎಲ್ಲವೂ ಜನರಿಲ್ಲದೇ ಬಿಕೋ ಎನ್ನುತ್ತಿವೆ. ಜನ ಪರಸ್ಪರ ಭೇಟಿಯಾಗಲು ಹೆದರುತ್ತಿದ್ದಾರೆ. ಇನ್ನೂ ದೇವಸ್ಥಾನಗಳ ವಿಚಾರ ಹೇಳೋ ಹಾಗೇ ಇಲ್ಲ. ಕೆಲವು ದೇವಸ್ಥಾನಗಳಿಗೆ ಜನ ಹೋಗಲು ಹಿಂದೇಟು ಹಾಕಿದರೆ. ಇನ್ನೂ ಕೆಲವೆಡೆ ದೇವಸ್ಥಾನಗಳಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದೆ.

ವಾರಾಣಸಿಯ ವಿಶ್ವನಾಥ ದೇವಾಲಯದಲ್ಲಿ ವೈರಸ್​ನಿಂದ ದೇವರನ್ನು ರಕ್ಷಿಸಲು ಅದರ ಜತೆಯಲ್ಲಿ ವೈರಸ್​ನ ಕುರಿತಾಗಿ ಜನ ಜಾಗೃತಿ ಮೂಡಿಸಲು ಅಲ್ಲಿನ ಅರ್ಚಕರು ಮುಂದಾಗಿದ್ದು, ಶಿವಲಿಂಗಕ್ಕೂ ಸಹ ಮಾಸ್ಕ್​ ಹಾಕಿದ್ದಾರೆ. ಹೌದು..  ವಾರಾಣಸಿಯ ವಿಶ್ವನಾಥ ದೇವಾಲಯದ ಶಿವಲಿಂಗಕ್ಕೆ ಬೇಸಿಗೆಯಲ್ಲಿ ಫ್ಯಾನ್​, ಎಸಿ ವ್ಯವಸ್ಥೆ ಮಾಡಲಾಗುತ್ತದೆ. ಚಳಿಗಾಲದಲ್ಲಿ ಸ್ವೆಟರ್​, ಹೊದಿಕೆಯ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಅದೇ ರೀತಿಯಲ್ಲಿ ಈಗ ದೇಶದಲ್ಲಿ ಕಾಡಲಾರಂಭಿಸಿರುವ ಕೊರೊನಾ ವೈರಸ್​ನಿಂದ ಕಾಪಾಡುವುದಕ್ಕಾಗಿ ಮಾಸ್ಕ್​ ಹಾಕಲಾಗಿದೆ. ಇದರಿಂದಾಗಿ ಜನರಲ್ಲಿ ವೈರಸ್​ನ ಕುರಿತಾಗಿ ಅರಿವು ಮೂಡಲಿದೆ ಎಂದು ಅಲ್ಲಿನ ಅರ್ಚಕರು ತಿಳಿಸಿದ್ದಾರೆ.

ಇನ್ನೂ ಧಾರವಾಡದಲ್ಲಿ ಮುಂಜಾಗೃತ ಕ್ರಮವಹಿಸಿದ ಜನರು ಬಣ್ಣಕ್ಕೆ ಔಷಧಿ ಗುಣಹೊಂದಿದ ಅರಿಶಿನ ಬಳಕೆ ಮಾಡಿ ಓಕುಳಿ ಎರಚಿ ಖುಷಿ ಪಟ್ಟಿದ್ದಾರೆ. ಇದೇ ವೇಳೆ ಕರೋನಾ ಬಗ್ಗೆ ಜಾಗೃತಿ ಮೂಡಿಸಿದ ಇಲ್ಲಿನ ನಿವಾಸಿಗಳು ಕಾಮಣ್ಣನಿಗೂ ಮಾಸ್ಕ್​ ಹಾಕಿದ್ದಾರೆ. ನಗರದ ವಿಜಯಾನಂದ ನಗರದ ಸರ್ಕಲ್​ನಲ್ಲಿ ಪ್ರತಿಷ್ಠಾಪಿಸಿರುವ ಕಾಮಣ್ಣನ ಮುಖಕ್ಕೆ ಮಾಸ್ಕ್​ ಹಾಕಿರುವುದು ಕಂಡು ಬಂದಿದೆ. ಮಾಸ್ಕ್​ನೊಂದಿಗೆ ಕಾಮಣ್ಣನನ್ನು ಸುಡುವ ಮೂಲಕ ಕಾಮನೊಂದಿಗೆ ಕರೋನಾವೂ ದಹಿಸಿ ಹೋಗಲಿ ಎಂದು ಪ್ರಾರ್ಥಿಸಿದ್ದಾರೆ.

ಜೊತೆಗೆ ತಿರುಪತಿ ತಿಮ್ಮಪ್ಪ ಕೆಮ್ಮಿದ್ದವರಿಗೆ ದರ್ಶನ ಕೊಡಲ್ಲಾ ಎಂದು ಹೇಳಿಬಿಟ್ಟಿದ್ದಾನೆ. ಹೌದು.. ಕೆಮ್ಮು, ಜ್ವರ, ನೆಗಡಿ ಹಾಗೂ ಉಸಿರಾಟದಂತಹ ಸಮಸ್ಯೆಇದ್ದರೆ, ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ದಯವಿಟ್ಟು ಬರಬೇಡಿ ಎಂದು ಟಿಟಿಡಿ ಆಡಳಿತ ಮಂಡಳಿ ಭಕ್ತರಲ್ಲಿ ಮನವಿ ಮಾಡಿದೆ.ಕೊರೋನಾ ವೈರಸ್ ತಡೆಯಲು ತಿರುಮಲ ವೆಂಕಟೇಶ್ವರ ದೇವಸ್ಥಾನ ಮಂಡಳಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ.

ಒಟ್ಟಿನಲ್ಲಿ ವೇಗವಾಗಿ ಹರಡುತ್ತಿರುವ ಕೊರೊನಾ ಬಗ್ಗೆ ದೇವಸ್ಥಾನಗಳಲ್ಲಿ ಜನಜಾಗೃತಿ ಮೂಡಿಸುತ್ತಿರುವುದು ಖುಷಿ ವಿಚಾರ. ಇದರ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights