FACT CHECK | ಬಾಂಗ್ಲಾದಲ್ಲಿ ಹಿಂದೂ ಮಹಿಳೆಯನ್ನು ಅಪಹರಿಸುವ ದೃಶ್ಯ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ

ಕೆಲವರು ಮಹಿಳೆಯನ್ನು ಬಲವಂತವಾಗಿ ಎತ್ತಿಕೊಂಡು ವಾಹನದಲ್ಲಿ ಕರೆದೊಯ್ಯುತ್ತಿರುವ ಮನಕಲಕುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಬಾಂಗ್ಲಾದೇಶದಲ್ಲಿ ಮುಸ್ಲಿಮರು ಹಿಂದೂ ಕುಟುಂಬದ ಮಗಳನ್ನು ಅಪಹರಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಕುಮಾರ್ ಅಭಿನಯ್ ಎಂಬವರು ಆಗಸ್ಟ್ 9, 2024 ರಂದು ತಮ್ಮ ಫೇಸ್​ಬುಕ್ ಖಾತೆಯಲ್ಲಿ ಈ ವೀಡಿಯೊ ಹಂಚಿಕೊಂಡಿದ್ದು, ‘ಬಾಂಗ್ಲಾದೇಶ: ಹಾಡಹಗಲೇ ಅಪ್ರಾಪ್ತ ಹಿಂದೂ ಹುಡುಗಿಯನ್ನ ಅಪಹರಿಸಿದ ಮುಸಲ್ಮಾನರು. ಬಾಂಗ್ಲಾದೇಶದ ಹಿಂದೂಗಳ ಸ್ಥಿತಿ ಶೋಚನೀಯ.’ ಎಂದು ಬರೆದುಕೊಂಡಿದ್ದಾರೆ.

ಹಾಗೆಯೆ  ಸಲ್ಮಾನ್ ಸಿಮಾ ಎಂಬ ಎಕ್ಸ್‌ ಬಳಕೆದಾರರು ಇದೇ ವಿಡಿಯೋವನ್ನು ಶೇರ್ ಮಾಡಿ, ‘ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯನ್ನು ಹಗಲು ಹೊತ್ತಿನಲ್ಲಿ ಇಸ್ಲಾಮಿಗಳು ಅಪಹರಿಸಿದ್ದಾರೆ. ಇದೇ ರೀತಿಯ ದೃಶ್ಯಗಳನ್ನು ನಾವು ಬೇರೆಲ್ಲಿ ನೋಡಿದ್ದೇವೆ?. IRGC ಭಯೋತ್ಪಾದಕರು ಕೆಚ್ಚೆದೆಯ ಇರಾನಿನ ಮಹಿಳೆಯರ ಮೇಲೆ ದಾಳಿ ಮಾಡಿದಾಗ ಈ ರೀತಿಯ ಘಟನೆ ಕಂಡಿದ್ದೇವೆ. ಹಮಾಸ್, ಐಆರ್‌ಜಿಸಿ, ಐಸಿಸ್, ಹಿಜ್ಬುಲ್ಲಾ, ಹೌತಿಗಳು, ಬಾಂಗ್ಲಾದೇಶದ ಇಸ್ಲಾಮಿಸ್ಟ್‌ಗಳು, ನೈಜೀರಿಯಾದ ಬೊಕೊ ಹರಾಮ್ ಮತ್ತು ಅಲ್ ಖೈದಾ ಇವೆಲ್ಲವೂ ಒಂದೇ ಬೇರುಗಳು. ಸಿಸಿಪಿ ಮತ್ತು ಇಸ್ಲಾಮಿಕ್ ರಿಪಬ್ಲಿಕ್ ಪಾಕಿಸ್ತಾನದಿಂದ ಬೆಂಬಲಿತವಾಗಿರುವ ಈ ರೀತಿಯ ದಾಳಿಗಳು ಬಾಂಗ್ಲಾದೇಶದ ಭವಿಷ್ಯವನ್ನು ನಾಶಮಾಡುತ್ತವೆ. ಬಾಂಗ್ಲಾದೇಶಿ ಹಿಂದೂಗಳನ್ನು ಉಳಿಸಿ’ ಎಂದು ಹೇಳಿದ್ದಾರೆ.

ಇದೇ ರೀತಿಯ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದ್ದು ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,  ಬಾಂಗ್ಲಾದೇಶದ Prothomalo ಡಿಜಿಟಲ್ ಮಾಧ್ಯಮ ಆಗಸ್ಟ್ 9, 2024 ರಂದು ಈ ಬಗ್ಗೆ ‘ಕೌಟುಂಬಿಕ ಕಲಹದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ‘ಕೋಮುಗಲಭೆ’ ಎಂದು ತಪ್ಪಾಗಿ ಬಿಂಬಿಸಲಾಗಿದೆ’ ಎಂಬ ಶೀರ್ಷಿಕೆಯೊಂದಿಗೆ ವಿಸ್ತಾರವಾಗಿ ಮಾಡಿದ ವರದಿಯೊಂದು ಲಭ್ಯವಾಗಿದೆ.

ವರದಿಯ ಪ್ರಕಾರ, ‘ನೊವಾಖಾಲಿಯ ಸೆನ್‌ಬಾಗ್‌ನಲ್ಲಿ ಆಗಸ್ಟ್ 8 ರಂದು ಈ ಘಟನೆ ನಡೆದಿದ್ದು, ಹಿಂದೂ ವ್ಯಕ್ತಿಯೊಬ್ಬ ತನ್ನ ವಿಚ್ಛೇದಿತ ಹೆಂಡತಿಯನ್ನು ಅಪಹರಿಸಲು ಸಂಚು ಹೂಡಿದ್ದಾನೆ. ಆದರೆ, ಇದು ಯಶಸ್ವಿಯಾಗಲಿಲ್ಲ. ಆಕೆಯ ಪತಿ ಕೆಲವು ಸಹಚರರೊಂದಿಗೆ ಬಲವಂತವಾಗಿ ಮೈಕ್ರೋಬಸ್‌ನಲ್ಲಿ ಕರೆದೊಯ್ಯಲು ಪ್ರಯತ್ನಿಸುತ್ತಿದ್ದಾರೆ. ಮಹಿಳೆ ಸಹಾಯಕ್ಕಾಗಿ ಕೂಗುತ್ತಿದ್ದಂತೆ, ಸ್ಥಳೀಯರು ದಾವಿಸಿ ಬಂದು ಮೈಕ್ರೋಬಸ್ ಅನ್ನು ಧ್ವಂಸಗೊಳಿಸಿದರು. ಬಳಿಕ ಮೂವರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ ಉಳಿದವರು ಪರಾರಿಯಾಗಿದ್ದಾರೆ’ ಎಂದು ಉಲ್ಲೇಖಿಸಲಾಗಿದೆ.

Prothomalo ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿ.

ಹಾಗೆಯೆ ಬಾಂಗ್ಲಾದೇಶದ ನಿವಾಸಿ ಸಂಕರ್ ದಾಸ್ ಎಂಬವರು ತಮ್ಮ ಫೇಸ್​ಬುಕ್ ಖಾತೆಯಲ್ಲಿ ಈ ಘಟನೆಯ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದಾರೆ. ‘ಬಕ್ಸ್‌ಗಂಜ್ ಪಕ್ಕದಲ್ಲಿರುವ ಮೈಶೈ ಕುಮೋ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಮಾಜಿ ಪತಿ ಕೆಲವು ಜನರೊಂದಿಗೆ ಕಾರ್‌ನಲ್ಲಿ ಬಂದು ಹಿಂದೂ ಕುಟುಂಬದ ಮಗಳನ್ನು ಬಲವಂತವಾಗಿ ಕರೆದುಕೊಂಡು ಹೋಗಲು ಪ್ರಯತ್ನಿಸಿದಾಗ, ಆ ಪ್ರದೇಶದ ಜನರು ಅವರನ್ನು ವಶಪಡಿಸಿಕೊಂಡು ಸೇನೆಗೆ ಹಸ್ತಾಂತರಿಸಿದರು. ಗಮನಿಸಿ: ಇಲ್ಲಿ ಯಾವುದೇ ಮುಸ್ಲಿಂ/ಇತರ ರಾಜಕೀಯ ಪಕ್ಷದ ಪಾಲ್ಗೊಳ್ಳುವಿಕೆ ಇಲ್ಲ.’ ಎಂದು ಬರೆದುಕೊಂಡಿದ್ದಾರೆ.

“ಹೌದು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ಮಾಡಿದ ಹಲವಾರು ಘಟನೆಗಳಿವೆ ಆದರೆ ಈ ನಿರ್ದಿಷ್ಟ ವಿಡಿಯೋವನ್ನು @ಸಾಲ್ವಾನ್_ಮೋಮಿಕಾ1 ಮತ್ತು ಒಪಿಂಡಿಯಾ ಸಂಪಾದಕ @UnSubtleDesi ಅವರು ಶೇರ್‌ ಮಾಡಿದ್ದಾರೆ. ಈ ಘಟನೆ ಹಿಂದೂ-ಮುಸ್ಲಿಂ ಸಮುದಾಯಕ್ಕೆ ಯಾವುದೇ ರೀತಿಯಾದ ಸಂಬಂಧವಿಲ್ಲ. ಹಿಂದೂ ಮಹಿಳೆಯನ್ನು ಅಪಹರಿಸಿದ ವ್ಯಕ್ತಿ ಆಕೆಯ ಮಾದಕ ವ್ಯಸನಿ ಹಿಂದೂ ಪತಿಯಾಗಿದ್ದು, 6 ತಿಂಗಳ ಹಿಂದೆ ಆಕೆಯಿಂದ ಬೇರ್ಪಟ್ಟಿದ್ದಾನೆ.” ಎಂದು ಮೊಹಮ್ಮದ್ ಜುಬೇರ್ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಮುಸ್ಲಿಂ ಯುವಕರು ಹಿಂದೂ ಮಹಿಳೆಯನ್ನು ಅಪಹರಿಸಿ ಅತ್ಯಾಚಾರ ಮಾಡಿ ಕೊಂದಿದ್ದಾರೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ. ಈ ಕುರಿತು ಯಾವುದೇ ವರದಿಗಳು ಕಂಡು ಬಂದಿಲ್ಲ. ಬಾಂಗ್ಲಾದೇಶದಲ್ಲಿ ಈ ರೀತಿಯ ಪ್ರಕರಣ ನಡೆದಿರುವುದಕ್ಕೆ ಯಾವುದೇ ರೀತಿಯಾದ ಪುರಾವೆಗಳು ಸಿಕ್ಕಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ  ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ‘ಭಾರತ್ ಮಾತಾ ಕೀ ಜೈ’ ಎಂದಿದ್ದಕ್ಕೆ ಮುಸ್ಲಿಮರಿಂದ ವೃದ್ದನ ಮೇಲೆ ಹಲ್ಲೆ! ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights