FACT CHECK | ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ವಿರೋಧಿಸಿ ಕೇಸರಿ ಬಟ್ಟೆ ಧರಿಸಿ ಪ್ರತಿಭಟನೆ ನಡೆಸಲಾಗಿದೆಯೇ?

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಹಿಂದೂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗುತ್ತಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಮುಂದುವರೆದು ಅಗಸ್ತ್ಯ ಟೈಮ್ಸ್‌ ಎಂಬ ಸುದ್ದಿ ವಾಹಿನಿಯ ಫೇಸ್‌ಬುಕ್ ಪುಟದಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದ್ದು, ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ನಿಲ್ಲಬೇಕೆಂದು ಕೇಸರಿ ಬಟ್ಟೆ ಧರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.


#ಢಾಕಾ
 ಬೀದಿಗಳಲ್ಲಿ ಕೇಸರಿ ಪ್ರವಾಹ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ವಿರೋಧಿಸಿ ಬಾಂಗ್ಲಾದೇಶದ ಹಿಂದೂಗಳು ಬೀದಿಗಿಳಿದಿದ್ದಾರೆ ಎಂಬ ಹೇಳಿಕೆಯೊಂದಿಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾತ್ಮಕ ದಾಳಿಯ ವಿರುದ್ಧ ಪ್ರತಿಭಟಿಸಲು ಬಾಂಗ್ಲಾದೇಶದ ಹಿಂದೂಗಳು ಬೀದಿಗಿಳಿದಿದ್ದಾರೆ ಎಂದು ಹೇಳುವ ಮೂಲಕ ಬೃಹತ್ ಜನಸಮೂಹವು ಕೇಸರಿ ಟೀ ಶರ್ಟ್‌ಗಳನ್ನು ಧರಿಸಿರುವುದನ್ನು ತೋರಿಸುವ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 1 ಸೆಪ್ಟಂಬರ್ 2023ರಂದು ಬಾಂಗ್ಲಾದೇಶದ ಫೇಸ್‌ಬುಕ್ ಖಾತೆಯಲ್ಲಿ ಅಪ್‌ಲೋಡ್ ಮಾಡಲಾದ ಪೋಸ್ಟ್‌ವೊಂದು ಲಭ್ಯವಾಗಿದೆ. ಪೋಸ್ಟ್ ಪ್ರಕಾರ, ಈ ವಿಡಿಯೋವು ಫಹ್ಮಿ ಗುಲಾಂದಾಜ್ ಬಾಬೆಲ್ ನೇತೃತ್ವದಲ್ಲಿ ಛತ್ರ ಲೀಗ್‌ನ ಸದಸ್ಯರು ಆಯೋಜಿಸಿದ ರ್‍ಯಾಲಿಯದ್ದು ಎಂಬ ಒಕ್ಕಣೆಯೊಂದಿಗೆ ಹಂಚಿಕೊಳ್ಳಲಾಗಿದೆ.

“ರಾಷ್ಟ್ರಪಿತ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಮತ್ತು ಬಂಗಮಾತಾ ಶೇಖ್ ಫಜಿಲತುನ್ ನೆಚಾ ಮುಜಿಬ್” ಸ್ಮರಣಾರ್ಥ ಬಾಂಗ್ಲಾದೇಶ ಛಾತ್ರ ಲೀಗ್ ಆಯೋಜಿಸಿದ ಗಫರ್ಗಾಂವ್ ಉಪಜಿಲಾ ಛತ್ರ ಲೀಗ್ ಮತ್ತು ಮುನ್ಸಿಪಲ್ ಛಾತ್ರ ಲೀಗ್ ರ್‍ಯಾಲಿ. ಹಾಗಾಗಿ ಈ ವೈರಲ್ ವಿಡಿಯೋ  ಇತ್ತೀಚಿನದಲ್ಲ ಮತ್ತು ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.

ಬಾಂಗ್ಲಾದೇಶ ಛಾತ್ರ ಲೀಗ್, ಗಫರ್ಗಾಂವ್ ಉಪಜಿಲಾ ಛತ್ರ ಲೀಗ್ ಮತ್ತು ಮುನ್ಸಿಪಲ್ ಛಾತ್ರ ಲೀಗ್ “ರಾಷ್ಟ್ರದ ಪಿತಾಮಹ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಮತ್ತು ಬಂಗಮಾತಾ ಶೇಖ್ ಫಜಿಲತುನ್ ನೆಚಾ ಮುಜಿಬ್” ಸ್ಮರಣಾರ್ಥ ಆಯೋಜಿಸಿದೆ. ಅಂದರೆ ಹಿಂದೂ ಸಮುದಾಯ ನಡೆಸುತ್ತಿರುವ ಪ್ರತಿಭಟನೆಗೂ ಈ ವಿಡಿಯೋಗೂ ಯಾವುದೇ ಸಂಬಂಧವಿಲ್ಲ. ಇದಲ್ಲದೆ, ಬಾಂಗ್ಲಾದೇಶ ಛತ್ರ ಲೀಗ್ ಹೊರಡಿಸಿದ ಸುತ್ತೋಲೆಯನ್ನು ಸಹ ನಾವು ಈ ಪುಟದಲ್ಲಿ ಕಂಡುಕೊಂಡಿದ್ದೇವೆ.

ಈ ಸಂದರ್ಭದಲ್ಲಿ ಅವರು ರ್ಯಾಲಿಯನ್ನು ಯಶಸ್ವಿಗೊಳಿಸಿದ ಲೀಗ್‌ನ ಮುಖಂಡರು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ಅಲ್ಲದೆ, ಸುಹ್ರವರ್ದಿ ಉದ್ಯಾನದಲ್ಲಿ ಆಯೋಜಿಸಲಾದ ಸಭೆಯ ಉಲ್ಲೇಖವೂ ಇತ್ತು, ಇದರಲ್ಲಿ ಶೇಖ್ ಹಸೀನಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವೈರಲ್ ವೀಡಿಯೊದ ದೃಶ್ಯಗಳು ಮತ್ತು ಛಾತ್ರ ಲೀಗ್‌ನ ಫೇಸ್‌ಬುಕ್‌ನ ದೃಶ್ಯಗಳ ನಡುವಿನ ಹೋಲಿಕೆಯನ್ನು ಕೆಳಗೆ ನೀಡಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2023ರಲ್ಲಿ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಮತ್ತು ಬಂಗಮಾತಾ ಶೇಖ್ ಫಜಿಲತುನ್ ನೆಚಾ ಮುಜಿಬ್” ಸ್ಮರಣಾರ್ಥ ಆಯೋಜಿಸಿದ್ದ ರ್‍ಯಾಲಿಯ ವಿಡಿಯೋವನ್ನು ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ನಿಲ್ಲಬೇಕೆಂದು ಕೇಸರಿ ಬಟ್ಟೆ ಧರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ  ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಬಾಂಗ್ಲಾದಲ್ಲಿ ಹಿಂದೂ ಶಿಬಿರದ ಮೇಲೆ ಮುಸ್ಲಿಮರಿಂದ ಬಾಂಬ್ ದಾಳಿ ಎಂದು ಸುಳ್ಳು ಸುದ್ದಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights