FACT CHECK | ಹಿಂದೂ ಧರ್ಮವನ್ನು ಕೊಳಕು ಅಂದ್ರಾ ಮಮತಾ ಬ್ಯಾನರ್ಜಿ?
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಿಂದೂ ಧರ್ಮವನ್ನು ಕೊಳಕು ಧರ್ಮ ಎಂದು ಕರೆದಿದ್ದಾರೆ ಎಂದು ಹೇಳುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಮುಸ್ಲಿಂ ಸಮುದಾಯಕ್ಕೆ ಈದ್ ಶುಭಾಶಯ ಕೋರುತ್ತ, ಹಿಂದೂ ಧರ್ಮವನ್ನು ಕೊಳಕು ಧರ್ಮ ಎಂದು ಕರೆದಿದ್ದಾರೆ ಎಂದು ಹೇಳಲಾಗುತ್ತಿದೆ.
ममता बग़दादी के अनुसार हिंदू धर्म एक गंदा धर्म है , देख रहे हो ना बंगालियों pic.twitter.com/xCtgkyoEjD
— Arun Yadav (@ArunKosli) April 16, 2025
“ಮಮತಾ ಅವರ ಪ್ರಕಾರ, ಹಿಂದೂ ಧರ್ಮ ಕೊಳಕು, ಅದಕ್ಕಾಗಿಯೇ ಅವರು ಬಂಗಾಳದಲ್ಲಿ ಕೊಳಕು ಜನರನ್ನು ಕೊಲ್ಲುತ್ತಿದ್ದಾರೆ. ಅವರು ಮಾಡುವುದರಲ್ಲಿ ಏನು ತಪ್ಪಿದೆ? ನಿಜವಾಗಿ ತಪ್ಪು ಮಾಡುವವರು ತಮ್ಮನ್ನು ತಾವು ಹಿಂದೂಗಳು ಎಂದು ಕರೆದುಕೊಳ್ಳುವ, ಹಿಂದೂಗಳ ಮೇಲೆ ದೌರ್ಜನ್ಯ ನಡೆದಾಗ ಸುಮ್ಮನೆ ಕುಳಿತು ನೋಡುವ ಹಿಂದೂ ನಾಯಕರು” ಎಂಬ ಹೇಳಿಕೆಯೊಂದಿಗೆ ಎಕ್ಸ್ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
ಇದೇ ರೀತಿಯ ಹೇಳಿಕೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು , ಈ ಪೋಸ್ಟ್‌ಗಳಲ್ಲಿ ಮಾಡಿದ ಪ್ರತಿಪಾನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿಕೊಂಡು ಸರ್ಚ್ ಮಾಡಿದಾಗ, ಮಾರ್ಚ್ 31, 2025 ರಂದು ನ್ಯೂಸ್ 18 ಬಾಂಗ್ಲಾದ YouTube ಚಾನಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೋ ಲಭ್ಯವಾಗಿದೆ.
ಈ ವಿಡಿಯೋದ 06:38 ರಿಂದ 07:40 ರ ನಡುವಿನ ಟೈಮ್‌ಸ್ಟಾಂಪ್‌ನಲ್ಲಿ ಮಮತಾ ಬ್ಯಾನರ್ಜಿ ಅವರು ” ಸೈನ್ಯದಲ್ಲಿ ಕೆಲಸ ಮಾಡುವ ಜನರು ಹಿಂದೂ, ಮುಸ್ಲಿಂ, ಸಿಖ್ ಅಥವಾ ಕ್ರಿಶ್ಚಿಯನ್ ಆಗಿರಲಿ, ಒಂದೇ ಗುರುತನ್ನು ಹೊಂದಿರುತ್ತಾರೆ. ರಾಮಕೃಷ್ಣರು ಏನು ಹೇಳಿದರು ಎಂಬುದನ್ನು ನೋಡಿ. ಸ್ವಾಮಿ ವಿವೇಕಾನಂದರು ಏನು ಹೇಳಿದರು ಎಂಬುದನ್ನು ನೋಡಿ. ನಾವು ರಾಮಕೃಷ್ಣರ ಧರ್ಮವನ್ನು ಅನುಸರಿಸುತ್ತೇವೆ, ನಾವು ಸ್ವಾಮಿ ವಿವೇಕಾನಂದರ ಧರ್ಮವನ್ನು ಅನುಸರಿಸುತ್ತೇವೆ, ಆದರೆ ನಾವು ‘ಜುಮ್ಲಾ’ ಪಕ್ಷದಿಂದ ಸೃಷ್ಟಿಸಲ್ಪಟ್ಟ ಕೊಳಕು ಧರ್ಮವನ್ನು ಅನುಸರಿಸುವುದಿಲ್ಲ. ಆ ಧರ್ಮವು ವಾಸ್ತವವಾಗಿ ಹಿಂದೂ ಧರ್ಮಕ್ಕೆ ವಿರುದ್ಧವಾಗಿದೆ. ಮತ್ತು ಹಿಂದೂ ಧರ್ಮವು ನಿಮ್ಮ ವಿರುದ್ಧವಲ್ಲ, ಕ್ರಿಶ್ಚಿಯನ್ ಧರ್ಮವು ನಿಮ್ಮ ವಿರುದ್ಧವಲ್ಲ. ಧರ್ಮದ ಹೆಸರಿನಲ್ಲಿ ವ್ಯಾಪಾರ ಮಾಡುವ ಕೆಲವು ರಾಜಕೀಯ ನಾಯಕರಿದ್ದಾರೆ. ಅವರು ಅದನ್ನು ವ್ಯಾಪಾರ ಮಾಡುತ್ತಾರೆ. ನಾವು ಅವರ ಧಾರ್ಮಿಕ ವ್ಯಾಪಾರದ ಅಂಗಡಿಯನ್ನು ಮುಚ್ಚುತ್ತೇವೆ.” ಎಂದು ಹೇಳಿರುವುದು ಕಂಡು ಬಂದಿದೆ. ಇನ್ನೂ ಹಲವು ವರದಿಗಳನ್ನು ಪರಿಶೀಲಿಸಿದಾಗ ಮಮತಾ ಬ್ಯಾನರ್ಜಿ ಅವರು ಇದೇ ಹೇಳಿಕೆಯನ್ನು ನೀಡಿರುವುದು ಕಂಡು ಬಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಮಮತಾ ಬ್ಯಾನರ್ಜಿ ಅವರು ಹಿಂದೂ ಧರ್ಮವನ್ನು ಕೊಳಕು ಧರ್ಮವೆಂದು ಹೇಳಿಕೆ ನೀಡಿದ್ದಾರೆ ಎಂಬುದು ಸುಳ್ಳು, ವೈರಲ್ ವಿಡಿಯೋವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ. ಮೂಲ ವಿಡಿಯೋದಲ್ಲಿ ಮಮತಾ ಬ್ಯಾನರ್ಜಿ ಕೋಮು ಸಾಮಾರಸ್ಯದ ಬಗ್ಗೆ ಮಾತನಾಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮುಸ್ಲಿಂ ಯುವತಿಗೆ ಕಿರುಕುಳ ನೀಡಿದ ವ್ಯಕ್ತಿ ಹಿಂದೂ ಅಲ್ಲ, ಮತ್ತ್ಯಾರು?

