FACT CHECK | ಇರಾನ್ ಮೇಲೆ ದಾಳಿ ನಡೆಸಲು ಇಸ್ರೇಲ್ ಯುದ್ಧ ವಿಮಾನಗಳು ಹೊರಟಿವೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ
ಇರಾನ್ ಮೇಲೆ ದಾಳಿ ನಡೆಸಲು ಇಸ್ರೇಲ್ ಯುದ್ಧ ವಿಮಾನಗಳು ಹೊರಟಿವೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಯುದ್ಧವಿಮಾನಗಳು ಗುಂಪಾಗಿ ಹಾರಾಡುತ್ತಿರುವ ದೃಶ್ಯಗಳನ್ನು ಫೇಸ್ಬುಕ್ ನಲ್ಲಿಹಂಚಿಕೊಳ್ಳುತ್ತಾ ಇರಾನ್ ಕಡೆ ಹೊರಟ ಇಸ್ರೇಲ್ ಫುಲ್ ಲೋಡೆಡ್ ಜೆಟ್ ಗಳು ಮುಗಿತು ಕಥೆ ಎಂಬ ಬರಹದೊಂದಿಗೆ ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್ ಗಳನ್ನ ಇಲ್ಲಿ, ಇಲ್ಲಿ ನೋಡಬಹುದು. ಇದೇ ರೀತಿಯ ಪ್ರತಿಪಾದನೆಯನ್ನು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡಿದ್ದು, ಈ ಪೋಸ್ಟ್ಗಳಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ಗಳಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಏಪ್ರಿಲ್ 9, 2025ರಂದು fatabyyano.net ಎಂಬ ವೆಬ್ ಸೈಟ್ ನಲ್ಲಿ ಫ್ಯಾಕ್ಟ್ ಚೆಕ್ ವರದಿಯೊಂದು ಕಂಡುಬಂದಿದೆ. ಈ ವರದಿಯಲ್ಲಿ ವಿಮಾನಗಳು ಈಜಿಪ್ಟಿನದ್ದಾಗಿದ್ದು ಕೈರೋದಲ್ಲಿ ನಡೆದ ಮಿಲಿಟರಿ ಅಕಾಡೆಮಿ ಪದವಿ ಪ್ರದಾನ ಸಮಾರಂಭದ ಸಂದರ್ಭ ಹಾರಾಟ ನಡೆಸಿವೆ ಎಂದಿದೆ. (ಅರೆಬಿಕ್ ಭಾಷೆಯಿಂದ ಭಾಷಾಂತರಿಸಲಾಗಿದೆ)
![]()
ಈ ವಿಮಾನ ಹಾರಾಟದ ವಿಡಿಯೋವನ್ನು ವಿವಿಧ ಸಂದರ್ಭಗಳಲ್ಲಿ ಬೇರೆ ಬೇರೆ ಹೇಳಿಕೆಗಳೊಂದಿಗೆ ಹಂಚಿಕೊಂಡಿರುವುದನ್ನು ವಿವಿಧ ಅರೆಬಿಕ್ ಫ್ಯಾಕ್ಟ್ ಚೆಕ್ ಸಂಸ್ಥೆಗಳು ಸತ್ಯಶೋಧನೆ ನಡೆಸಿದ್ದು ನಿಜಾಂಶವನ್ನು ತೆರೆದಿಟ್ಟಿವೆ. ಅವುಗಳ ವರದಿಯಲ್ಲಿ ಈ ವೀಡಿಯೋಗಳು ಈಜಿಪ್ಟ್ ಮಿಲಿಟರಿ ಅಕಾಡೆಮಿಯ ಪದವಿ ಪ್ರದಾನ ಸಮಾರಂಭದ ವೀಡಿಯೋಗಳು ಎಂದು ಹೇಳಿವೆ. ಈ ವರದಿಗಳನ್ನು ಇಲ್ಲಿ ಇಲ್ಲಿ ನೋಡಬಹುದು.
ಇದರೊಂದಿಗೆ ನಾವು ಈಜಿಪ್ಟ್ ಮಿಲಿಟರಿ ಅಕಾಡೆಮಿ ಪದವಿ ಪ್ರದಾನ ಸಮಾರಂಭದ ಕುರಿತಾಗಿ ಕೀವರ್ಡ್ ಸರ್ಚ್ ನಡೆಸಿದ್ದು, ಅದು ಅಕ್ಟೋಬರ್ 2024ರ ಹೊತ್ತಿಗೆ ನಡೆದಿದೆ ಎಂದು ಗೊತ್ತಾಗಿದೆ. ಈ ಕುರಿತು ಅಕ್ಟೋಬರ್ 3, 2024ರಂದು ಯೂಟ್ಯೂಬ್ ನಲ್ಲಿ ElMehwar Tv Channel ಎಂಬ ಬಳಕೆದಾರರು ವೀಡಿಯೋವನ್ನು ಪ್ರಕಟಿಸಿದ್ದು, ಇದರ ವಿವರಣೆಯಲ್ಲಿ, ‘ಮಿಲಿಟರಿ ಅಕಾಡೆಮಿಯ ಹೊಸ ಬ್ಯಾಚ್ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಈಜಿಪ್ಟ್ ವಾಯುಪಡೆಯ ಸ್ಕೈ ಈಗಲ್ಸ್ನಿಂದ ಭವ್ಯ ಪ್ರದರ್ಶನ.’ ಎಂದಿದೆ (ಅರೆಬಿಕ್ ನಿಂದ ಭಾಷಾಂತರಿಸಲಾಗಿದೆ)
ಫೇಸ್ಬುಕ್ ನಲ್ಲೂ ಅಕ್ಟೋಬರ್ 3, 2024ರಂದು Mehwar TV ಯಲ್ಲಿ ಈಜಿಪ್ಟ್ ಮಿಲಿಟರಿ ಅಕಾಡೆಮಿಯ ಪದವಿ ಪ್ರದಾನದ ದೃಶ್ಯಗಳನ್ನು ಅಪ್ಲೋಡ್ ಮಾಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಈಜಿಪ್ಟ್ ನ ಮಿಲಿಟರಿ ಅಕಾಡೆಮಿ ಸಮಾರಂಭದ ದೃಶ್ಯಗಳನ್ನು, ಇರಾನ್ ಮೇಲೆ ದಾಳಿ ನಡೆಸಲು ಇಸ್ರೇಲ್ ಯುದ್ಧ ವಿಮಾನಗಳು ಹೊರಟಿವೆ ಎಂಬ ಹೇಳಿಕೆ ಸುಳ್ಳು. ಹಾಗಾಗ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ ಎಂದು ನ್ಯೂಸ್ ಚೆಕ್ಕರ್ ತಿಳಿಸಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | G7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಕಡೆಗಣಿಸಲಾಗಿದೆಯೇ?

