FACT CHECK | ಕನ್ಹಯ್ಯಾ ಕುಮಾರ್ ರಾಹುಲ್ ಗಾಂಧಿ ಅವರನ್ನು ನಿಂದಿಸಿದ್ದಾರೆ ಎಂದು ಸುಳ್ಳು ಪೋಸ್ಟ್ ಹಂಚಿಕೆ
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ತಮ್ಮದೆ ಪಕ್ಷದ ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ ನಿಂದಿಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ. ವಿಡಿಯೋದಲ್ಲಿ, ರಾಜನ ಮಗ ರಾಜನಾಗುವುದಿಲ್ಲ ಎಂದು ಕನ್ಹಯ್ಯಾ ಕುಮಾರ್ ಹೇಳುವುದನ್ನು ಕೇಳಬಹುದು. ಪ್ರಜಾಪ್ರಭುತ್ವದಲ್ಲಿ ಮತಗಳು ನಿರ್ಧರಿಸುತ್ತವೆ. ಬಿಹಾರ ಬಂದ್ ಸಮಯದಲ್ಲಿ ವೇದಿಕೆ ಏರಲು ಅವಕಾಶ ನೀಡದ ಕಾರಣಕ್ಕೆ ರಾಹುಲ್ ಗಾಂಧಿ ವಿರುದ್ಧ ಕನ್ಹಯ್ಯಾ ಕುಮಾರ್ ಈ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಫೇಸ್ಬುಕ್ ಬಳಕೆದಾರ ‘ಬಿಹಾರ್ ವಾಲೆ’ ಜುಲೈ 15, 2025 ರಂದು ವೈರಲ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು “ಕನ್ಹಯ್ಯಾ ಕುಮಾರ್ ರಾಹುಲ್ ಗಾಂಧಿಯನ್ನು ಏಕೆ ಶಪಿಸುತ್ತಿದ್ದಾರೆ?? ಅವರು ಪಕ್ಷ ಬದಲಾಯಿಸಲಿದ್ದಾರೆಯೇ?? ಈಗ ರಾಹುಲ್ ಗಾಂಧಿ ಅರ್ಥಮಾಡಿಕೊಂಡಿರಬೇಕು… ಕೆಂಪು ಬಾವುಟ ಹೊಂದಿರುವ ಎಲ್ಲರೂ ನಿಷ್ಠಾವಂತರಲ್ಲ!” ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಹೇಳಿಕೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದು, ಈ ಪೋಸ್ಟ್ಗಳಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ರಾಹುಲ್ ಗಾಂಧಿ ಕುರಿತು ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ ಹೇಳಿಕೆಯನ್ನು ನೀಡಿದ್ದಾರೆಯೇ ಎಂದು ಪರಿಶೀಲಿಸಲು, ಕೀ ವರ್ಡ್ಗಳನ್ನು ಬಳಕಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ವೈರಲ್ ವಿಡಿಯೋ ಕುರಿತು ಒನ್ ಇಂಡಿಯಾ ಹಿಂದಿ ವಿಭಾಗದ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೋದ ದೀರ್ಘ ಆವೃತ್ತಿ ಲಭ್ಯವಾಗಿದೆ. ಈ ವಿಡಿಯೋವನ್ನು ಜುಲೈ 28, 2023 ರಂದು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ 26.47 ನಿಮಿಷಗಳವರೆಗೆ, ಅವರು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಬಗ್ಗೆ ಮಾತನಾಡುವುದನ್ನು ಕೇಳಬಹುದು.
ಭಾರತೀಯ ಯುವ ಕಾಂಗ್ರೆಸ್ನ ಅಧಿಕೃತ ಫೇಸ್ಬುಕ್ ಪೇಜ್ನಲ್ಲಿ ವೈರಲ್ ವಿಡಿಯೋವನ್ನು ನಾವು ಕಂಡುಕೊಂಡಿದ್ದೇವೆ . ಇದನ್ನು ಜುಲೈ 27, 2023 ರಂದು ಹಂಚಿಕೊಳ್ಳಲಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಈ ವಿಡಿಯೋ ಬೆಂಗಳೂರಿನಲ್ಲಿ ನಡೆದ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕ್ರಮದಿಂದ ಬಂದಿದೆ. ವಿಡಿಯೋ ನೋಡಿದಾಗ, ಇಂಡಿಯಾ ಮೈತ್ರಿಕೂಟದ ಹೆಸರಿನ ಬಗ್ಗೆ ಪ್ರಧಾನಿ ಮೋದಿ ಮಾಡಿದ ಟೀಕೆಗೆ ಕನ್ಹಯ್ಯಾ ಕುಮಾರ್ ಕೂಡ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದುಬಂದಿದೆ. ವಿಡಿಯೋದಲ್ಲಿ ಎಲ್ಲಿಯೂ ರಾಹುಲ್ ಗಾಂಧಿ ವಿರುದ್ಧ ಕನ್ಹಯ್ಯಾ ಕುಮಾರ್ ಯಾವುದೇ ಹೇಳಿಕೆ ನೀಡಿಲ್ಲ. ಹಾಗಾಗಿ ಪೋಸ್ಟ್ನಲ್ಲಿ ಹಂಚಿಕೊಂಡಿರುವುದು ಸುಳ್ಳು ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ ಅವರು ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂಬುದು ಸುಳ್ಳು. ವೈರಲ್ ವಿಡಿಯೋವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಪೊದೆಗಳ ಮಧ್ಯೆ ಮಹಿಳೆಯ ಶವ ಎಂದು ಚಿತ್ರೀಕರಣದ ವಿಡಿಯೋ ಹಂಚಿಕೆ

