ಸಂಪುಟ ವಿಸ್ತರಣೆಗೆ ಬಿಜೆಪಿಯಲ್ಲಿ ಭಿನ್ನಮತ: ಮಂಡಳಿ ಅಧ್ಯಕ್ಷಗಿರಿಗೆ ಬಿಜೆಪಿ ಶಾಸಕರ ನಕಾರ
ಸಿಎಂ ಬಿಎಸ್ವೈ ಮಾತಿಗೂ ಬಿಜೆಪಿ ಶಾಸಕರು ಡೋಂಟ್ ಕೇರ್ ಅನ್ನುತ್ತಿದ್ದಾರೆ. ಬಿಜೆಪಿ ಸರ್ಕಾರ ಒಂದು ವರ್ಷದ ವರ್ಷಾಚರಣೆ ಸಂದರ್ಭದಲ್ಲಿ ಕೊಟ್ಟ ಬೋರ್ಡು ಹಾಕಿಕೊಳ್ಳಲು ಬಿಜೆಪಿ ಶಾಸಕರ ನಕಾರ ತೋರುತ್ತಿದ್ದು, ನೇಮಕಗೊಂಡು ಎರಡು ವಾರಗಳೇ ಕಳೆದರೂ ತಮಗೆ ನೀಡಲಾಗಿರುವ ಬೋರ್ಡುಗಳನ್ನು ಹಾಕಿಕೊಳ್ಳಲು ಬಿಜೆಪಿ ಶಾಸಕರು ನಿರಾಕರಿಸಿದ್ದಾರೆ. ಇದರಿಂದಾಗಿ ವಿವಿಧ ಮಂಡಳಿಗಳ ಚೇರ್ಮನ್ಗಿರಿ ನೆನೆಗುದಿಗೆ ಬಿದ್ದಿದೆ.
ಸಚಿವ ಸಂಪುಟ ವಿಸ್ತರಣೆಗೆ ಪೂರ್ವಭಾವಿಯಾಗಿ ಸಂಭಾವ್ಯ ಬಂಡಾಯ ಶಮನ ದೃಷ್ಟಿಯಿಂದ ಮುಖ್ಯಮಂತ್ರಿ ಯಡಿಯೂರಪ್ಪ ಕಳೆದ ಮಾಸಾಂತ್ಯ ಸುಮಾರು 20 ಮಂದಿ ಶಾಸಕರನ್ನು ವಿವಿಧ ಬೋರ್ಡು, ನಿಗಮಗಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಈ ಪಟ್ಟಿಯಲ್ಲಿ ಸಂಪುಟ ಆಕಾಂಕ್ಷಿಗಳೇ ಹೆಚ್ಚಿದ್ದರು. ಇವರ ಜೊತೆಗೆ ಹೆಸರಿಲ್ಲದ ಬೋರ್ಡುಗಳನ್ನು ಪಡೆಯಲು ಕೆಲವರಿಗೆ ಇಷ್ಟವಿರಲಿಲ್ಲ.
ಇದೆಲ್ಲ ಕಾರಣಗಳಿಂದಾಗಿ ನೇಮಕಗೊಂಡವರ ಪೈಕಿ ಕೇವಲ ಬೆರಳೆಣಿಕೆಯ ಶಾಸಕರಷ್ಟೇ ಪಾಲಿಗೆ ಬಂದದ್ದು ಪಂಚಾಮೃತ ಎಂಬಂತೆ ಸಿಕ್ಕಿದ್ದನ್ನು ಸ್ವೀಕರಿಸಿದ್ದಾರೆ. ಯಾವುದೇ ಕಾರಣಕ್ಕೂ ಈ ಪಟ್ಟಿಲ್ಲಿ ಬದಲಾವಣೆ ಮಾಡುವುವದಿಲ್ಲ. ಯಾರನ್ನೂ ಓಲೈಸುವುದೂ ಇಲ್ಲ. ಇಷ್ಟವಿದ್ದರೇ ತೆಗೆದುಕೊಳ್ಳಿ ಇಲ್ಲವಾದರೇ ಬಿಡಿ ಎಂದು ಕೋವಿಡ್ ಕಾರಣ ಆಸ್ಪತ್ರೆ ಸೇರುವ ಮುನ್ನ ಯಡಿಯೂರಪ್ಪ ಖಡಕ್ ಎಚ್ಚರಿಕೆ ನೀಡಿದ್ದರು.
ಆದರೆ ಸಿಎಂ ಆಸ್ಪತ್ರೆ ಸೇರಿದ್ದು ಮತ್ತು ಸಂಪುಟ ವಿಸ್ತರಣೆ ಬಹುತೇಕ ಮುಂದಿನ ತಿಂಗಳಿಗೆ ಮುಂಡೂಡಿಕೆ ಆಗಬಹುದಾದ ಲೆಕ್ಕಾಚಾರದಲ್ಲಿ ಅತೃಪ್ತ ಶಾಸಕರು ಅಧಿಕಾರ ವಹಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಸ್ವತಃ ಸಿಎಂ ಅವರ ಎಚ್ಚರಿಕೆಯನ್ನೇ ಕಡೆಗಣಿಸುವ ಮೂಲಕ ಈ ಶಾಸಕರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ಹೊರಹಾಕಿದ್ದಾರೆ.
ಇನ್ನು ಸಿಎಂ ಯಡಿಯೂರಪ್ಪ ಕೋವಿಡ್ ಕಳೆದುಕೊಂಡು ಆಸ್ಪತ್ರೆಯಿಂದ ಮನೆಗೆ ಬಂದಿದ್ದರೂ ಇನ್ನಷ್ಟು ದಿನ ಮನೆಯಲ್ಲಿಯೇ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ. ಸಂಪುಟ ವಿಸ್ತರಣೆ ಅಥವಾ ಪುನರ್ರಚನೆ ಸಂಬಂಧ ದಿಲ್ಲಿಗೆ ತೆರಳುವ ಅವರ ಕಾರ್ಯಕ್ರಮವೂ ಮಾಸಾಂತ್ಯದವರೆಗೆ ನಿಗದಿಯಾಗುವುದು ಅನುಮಾನ.
ಅಲ್ಲದೇ ಮುಂದಿನ ಮಾಸದ ಆರಂಭದಲ್ಲಿಯೇ ಪಿತೃಪಕ್ಷವೂ ಇರುವುದರಿಂದ ಸಂಪುಟ ಸರ್ಕಸ್ಗೆ ಸದ್ಯ ಮುಹೂರ್ತ ನಿಗದಿ ಸಾಧ್ಯವಿಲ್ಲ ಎನ್ನಲಾಗುತ್ತಿದೆ. ತೀರಾ ಯಡಿಯೂರಪ್ಪನವರ ಮಾತು ಮೀರಲಾಗದ ಕೆಲೇ ಕೆಲವು ಶಾಸಕರು ಮಾತ್ರ ತಮಗೆ ನೀಡಲಾಗಿರುವ ಮಂಡಳಿ ನಿಗಮಗಳಲ್ಲಿ ಅಧ್ಯಕ್ಷರಾಗಿ ವಿರಾಜಮಾನರಾಗಿದ್ದಾರೆ.
ಉಳಿದಂತೆ ಬಹುತೇಕ ನೇಮಕಾತಿಗಳು ಕಾರ್ಯರೂಪಕ್ಕೆ ಬಂದಿಲ್ಲ. ಈ ಬಗ್ಗೆ ಶಾಸಕರು ಸಾರ್ವಜನಿಕವಾಗಿ ಏನೂ ಹೇಳದಿದ್ದರೂ ಅವರ ಉದ್ದೇಶ ಮಾತ್ರ ಸ್ಪಷ್ಟವಾಗಿದೆ. ನಿಮ ಸ್ಥಾಣ ಒಪ್ಪಿಕೊಂಡರೇ ಈ ಅವಧಿಗೆ ಮತ್ತೆ ಮಂತ್ರಿ ಆಸೆ ಕೈಬಿಟ್ಟಂತೆಯೇ ಸರಿ ಎಂಬುದು ಅವರಿಗೇ ವೇದ್ಯವಾಗಿದೆ. ಹೀಗಾಗಿಯೇ ಅವರೂ ಕೂಡ ಬಡ ಪೆಟ್ಟಿಗೆ ಜಗ್ಗದಿರಲು ತೀರ್ಮಾನ ಕೈಗೊಂಡಂತಿದೆ.
ಇದನ್ನೂ ಓದಿ: ಕಾಂಗ್ರೆಸ್-ಜೆಡಿಎಸ್ ಭದ್ರಕೋಟೆ ಭೇದಿಸಲು ಬಿಜೆಪಿ ಕಾರ್ಯತಂತ್ರ!

