ಕೋಮು ಗಲಬೆಗಳಲ್ಲಿ ಭಾಗಿಯಾಗಿದ್ದ ಹಿಂದೂ ಕಾರ್ಯಕರ್ತನ ಮೇಲಿನ ಕೇಸ್ಗಳನ್ನು ಹಿಂಪಡೆಯುವುದಿಲ್ಲ: ಬಸವರಾಜ್ ಬೊಮ್ಮಾಯಿ
ಉಡುಪಿಯ ವಿಹೆಚ್ಪಿ ಸಂಘಟನೆಯ ಮುಖಂಡ ಶರಣ್ ಪಂಪ್ವೆಲ್ ಎಂಬಾತನ ಮೇಲಿನ ಎಲ್ಲಾ ಕೇಸುಗಳನ್ನು ತೆಗೆದುಹಾಕುವುದಾಗಿ ಆತನಿಗೆ ಭರವಸೆ ಕೊಟ್ಟು ಗೃಹ ಸಚಿವ ಸಚಿವ ಬಸವರಾಜ್ ಬೊಮ್ಮಾಯಿಯವರು ವಿವಾದಕ್ಕೆ ಸಿಲುಕಿದ್ದರು. ಇಂದು ಆ ವಿಚಾರವಾಗಿ ಮಾತನಾಡಿರುವ ಗೃಹ ಸಚಿವ ವಿಶ್ವ ಹಿಂದೂ ಪರಿಷತ್ ಮುಖಂಡರ ಮೇಲಿನ ಕೇಸುಗಳನ್ನು ಹಿಂಪಡೆಯುವುದಿಲ್ಲ ಎಂದು ಹೇಳಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ವಿಶ್ವ ಹಿಂದೂ ಪರಿಷತ್ ಮುಖಂಡರ ಮೇಲಿನ ಯಾವುದೇ ಕೇಸ್ ಇದ್ದರೂ ತೆಗೆದುಹಾಕ್ತೀವಿ ಎಂದು ನಾನು ಹೇಳಿಲ್ಲ. ಅವರು ಮನವಿ ಕೊಟ್ಟು ಅನ್ಯಾಯ ಸರಿಪಡಿಸಿ ಎಂದು ಹೇಳಿದ್ದಾರೆ. ಹಾಗಾಗಿ ಯಾರಿಗೆ ಅನ್ಯಾಯವಾದರೂ ಅದನ್ನು ಸರಿಪಡಿಸುವ ಕೆಲಸ ನನ್ನದು” ಎಂದಿದ್ದಾರೆ.
ಪ್ರವಾಹ ಪರಿಸ್ಥಿತಿ ಬಗ್ಗೆ ಪರಿಶೀಲಿಸಲು ಗೃಹಸಚಿವ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿಯವರು ಉಡುಪಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹಲವು ಗಲಭೆಗಳಲ್ಲಿ ಭಾಗಿಯಾಗಿ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಎದುರು ‘ನೋಡ್ರಿ ನಿಮ್ಮ ಮೇಲೆ ಯಾವುದೇ ಕೇಸು ಇದ್ದರೂ ತೆಗೆದು ಹಾಕುತ್ತೇವೆ’ ಎಂದು ಹೇಳಿದ್ದರು.
ಗಲಬೆಕೋರ ಆರೋಪಹೊತ್ತಿರುವ ವಿಹೆಚ್ಪಿ ಮುಖಂಡನ ಮೇಲಿನ ಕೇಸ್ಗಳನ್ನು ಕೈಬಿಡುತ್ತೇವೆ ಎಂದ ಗೃಹ ಸಚಿವ ಬೊಮ್ಮಾಯಿ
ಗಲಬೆಕೋರ ಆರೋಪಹೊತ್ತಿರುವ ವಿಹೆಚ್ಪಿ ಮುಖಂಡನ ಮೇಲಿನ ಕೇಸ್ಗಳನ್ನು ಕೈಬಿಡುತ್ತೇವೆ ಎಂದ ಗೃಹ ಸಚಿವ ಬೊಮ್ಮಾಯಿ
Posted by EnSuddi on Friday, August 14, 2020
ಆ ವಿವಾದಾತ್ಮಕ ವಿಡಿಯೋವೊಂದನ್ನು ಗೃಹ ಸಚಿವರಿಗೆ ಮನವಿ ಕೊಟ್ಟಿದ್ದ ಅದೇ ಆರೋಪಿ ಶರಣ್ ಪಂಪ್ವೆಲ್ ಅಕಸ್ಮಾತ್ತಾಗಿ ಟ್ವಿಟ್ಟರ್ನಲ್ಲಿ ಹಂಚಿಕೊಂಡಾಗ ಪ್ರಕರಣ ಬೆಳಕಿಗೆ ಬಂದಿತ್ತು.
ಒಂದು ಕಡೆ ಎಸ್ಡಿಪಿಐ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಕೈಬಿಟ್ಟ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಸದಾ ಟೀಕಿಸುವ ಬಿಜೆಪಿ ಸರ್ಕಾರ ಮತ್ತು ಅದರ ಸದಸ್ಯರು ಈಗ ಬಲಪಂಥೀಯ ಕಾರ್ಯಕರ್ತರು ಭಾಗಿಯಾದ ಪ್ರಕರಣಗಳನ್ನು ವಾಪಸ್ ಪಡೆಯುವುದಾಗಿ ಅದೇ ಪಕ್ಷಕ್ಕೆ ಸೇರಿದ ಗೃಹ ಸಚಿವರೇ ಹೇಳುತ್ತಿದ್ದಾರೆ. ಹಾಗಾಗಿ ಈ ವಿಡಿಯೋಗೆ ವಿಶೇಷ ಮಹತ್ವ ಬಂದಿತ್ತು.
ಈ ಹಿನ್ನೆಲೆಯಲ್ಲಿ ನಿನ್ನೆ ರಾಜ್ಯ ಗೃಹಸಚಿವ ಬಸವರಾಜ ಬೊಮ್ಮಾಯಿಯವರ ಈ ಹೇಳಿಕೆ ಖಂಡಿಸಿ ಅವರು ರಾಜಿನಾಮೆ ನೀಡುವಂತೆ ಆಗ್ರಹಿಸಿ ಟ್ವಿಟ್ಟರ್ನಲ್ಲಿ #ResignBSBommai ಟ್ರಂಡ್ ಆಗಿತ್ತು.
“ಅತ್ಯಂತ ಸಮರ್ಥ ಗೃಹಸಚಿವರುಗಳನ್ನು ಕಂಡ ಕರ್ನಾಟಕ ರಾಜ್ಯಕ್ಕೆ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವ ಗೃಹ ಸಚಿವರು ಸಿಕ್ಕಿರುವುದು ದುರಾದೃಷ್ಟಕರ. ತಕ್ಷಣ ರಾಜೀನಾಮೆ ನೀಡಿ” ಎಂದು ಹಲವರು ಆಗ್ರಹಿಸಿದ್ದರು.
ಇದನ್ನೂ ಓದಿ: ವಿಹೆಚ್ಪಿ ಮುಖಂಡನ ಮೇಲಿನ ಗಲಬೆ ಕೇಸ್ಗಳನ್ನು ಕೈಬಿಡುತ್ತೇವೆ ಎಂದ ಗೃಹ ಸಚಿವ; ವಿಡಿಯೋ ವೈರಲ್

