ಬಿಬಿಎಂಪಿ ಮಹಾಪೌರರ ರೇಸ್ ನ ಮುಂಚೂಣಿಯಲ್ಲಿ ಐವರು : ಯಾರು ತೊಡಲಿದ್ದಾರೆ ಮೇಯರ್ ಗೌನ್..?

ಇನ್ನೇನು ಕೆಲವೇ ದಿನಗಳಲ್ಲಿ ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಒಂದು ವರ್ಷದ ಅಧಿಕಾರದ ಅವಧಿ ಪೂರ್ಣಗೊಳ್ಳುತ್ತದೆ. ಮೇಯರ್ ಪಟ್ಟಕ್ಕೆ ಬಿಜೆಪಿ ಪಕ್ಷದಲ್ಲೇ ಸಾಕಷ್ಟು ಪೈಪೋಟಿ ಸೃಷ್ಟಿಯಾಗಿದೆ.

ಹೌದು.. ಪಾಲಿಕೆಯಲ್ಲಿನ ವಿರೋಧ ಪಕ್ಷದ ನಾಯಕರಾಗಿರುವ ಪದ್ಮನಾಭರೆಡ್ಡಿ, ಮಾಜಿ ಉಪಮೇಯರ್ ಎಲ್, ಶ್ರೀನಿವಾಸ್, ಗೋವಿಂದರಾಜನಗರ ವಾರ್ಡ್ ನ ಪಾಲಿಕೆ ಸದಸ್ಯೆ ಉಮೇಶ್ ಶೆಟ್ಟಿ, ಕಾಡುಮಲ್ಲೇಶ್ವರ ವಾರ್ಡ್ ನ ಪಾಲಿಕೆ ಸದಸ್ಯ ಮಂಜುನಾಥ ರಾಜು ಅವರುಗಳ ನಡುವೆ ತೀವ್ರ ಹಣಾಹಣಿಯೇ ಇದೆ. ಇವರಲ್ಲಿ ಒಬ್ಬರು ಮೇಯರ್ ಆಗುವುದು ಖಚಿತವೆಂದು ಹೇಳಲಾಗುತ್ತಿದೆ. ಆದರೆ ಹೇಮಲತಾ ಗೋಪಾಲಯ್ಯ ಅವರಿ ಅಂತಿಮವಾಗಿ ಮೇಯರ್ ಗೌನ್ ತೊಟ್ಟರು ಅಚ್ಚರಿಯಿಲ್ಲ.

ಹೌದು… ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ನ ಅನರ್ಹ ಶಾಸಕ ಕೆ. ಗೋಪಾಲಯ್ಯ  ಅವರ ಪತ್ನಿಯಾಗಿರುವ ಹೇಮಾಲತಾ ಅವರಿಗೆ ಮೇಯರ್ ಪಟ್ಟ ನೀಡಬೇಕೆಂದು ಹಠ ಹಿಡಿದಿದ್ದಾರೆಂಬ ಮಾತುಗಳುಕೇಳಿ ಬರುತ್ತಿವೆ.

ಇನ್ನೂ ನಗರದಲ್ಲಿ ಒಕ್ಕಲಿಗರ ಸಂಖ್ಯೆ ಹೆಚ್ಚಿದ್ದು, ಈ ಸಮುದಾಯಕ್ಕೆ ಸೇರಿದ ಹಲವು ಪಾಲಿಕೆ ಸದಸ್ಯರಿದ್ದರೂ 2015ರ  ನಂತರ ಯಾರೊಬ್ಬರಿಗೂ ಮೇಯರ್ ಆಗುವ ಅವಕಾಶ ನೀಡಿಲ್ಲವೆಂಬ ಕೊರಗು ಇದೆ.

ಹೀಗಾಗಿ ಒಕ್ಕಲಿಗ ಸಮುದಾಯಕ್ಕೆ ಸೇರಿದವರೇ ಮೇಯರ್ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದನ್ನ ಅರಿತು ಕುಮಾರಸ್ವಾಮಿ ಲೇಔಟ್ ವಾರ್ಡ್ನ ಪಾಲಿಕೆ ಸದಸ್ಯರಾದ ಎಲ್. ಶ್ರೀನಿವಾಸ್ ಅವರು ಕಣಕ್ಕೆ ಇಳಿದಿದ್ದಾರೆ. ಒಕ್ಕಲಿಗ ಸಮುದಾಯದವರೊಂದಿಗೆ ಕಂದಾಯ ಸಚಿವ ಆರ್. ಅಶೋಕ್ ,ಮೂಲಕ ಲಾಬಿ ನಡೆಸುತ್ತಿದ್ದಾರೆಂಬ ಮಾತುಗಳಿವೆ.

ಇತ್ತ ಕಾಂಗ್ರೆಸ್ ಹಾಗೂ ಜೆಡಿಎಎಸ್ ಮೈತ್ರಿಕೂಟವು ಚುನಾವಣೆಗೆ ಮುನ್ನವೇ ಶಸ್ತ್ರತ್ಯಾಗ ಮಾಡಿಶರಣಾದಂತೆ ಕಾಣಿಸುತ್ತಿದೆ. ಅವರ ನಿರುತ್ಸಾಹಕ್ಕೆ ಸಂಖ್ಯಾಬಲವೂ ಕಾರಣ ಇದೆ. ಅನರ್ಹ ಶಾಸಕರಾದ ಯಶವಂತಪುರದ ಎಸ್.ಟಿ. ಸೋಮಶೇಖರ್, ಆರ್.ಆರ್ ನಗರದ ಮುನಿರತ್ನ, ಕೆ.ಆರ್.ಪುರದ ಭೈರತಿ ಬಸವರಾಜ್, ಶಿವಾಜಿನಗರದ ಆರ್.ರೋಷನ್ ಬೇಗ್ ಮತ್ತು ಮಹಾಲಕ್ಷ್ಮೀ ಲೇಔಟ್ ಶಾಸಕ ಕೆ.ಗೋಪಾಲಯ್ಯ ಅವರು ಮೇಯರ್ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಪಾಲಿಕೆಯಲ್ಲಿ ಮತದಾನದ ಹಕ್ಕು ಹೊಂದಿರುವ ಸದಸ್ಯರ ಬಲವು 258ಕ್ಕೆ ಕುಸಿದಿದೆ. ಇತ್ತೀಚೆಗೆ ವಿಧಾನಪರಿಷತ್ ಸದಸ್ಯರಾದ ನಾಸಿರ್ ಹುಸೇನ್ ಮತ್ತು ಪ್ರಕಾಶ್ ರಾಥೋಡ್ ಅವರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ.

ಸದ್ಯ ಬಿಜೆಪಿಯು ಪಕ್ಷೇತರ ಸದಸ್ಯ ರಮೇಶ್ ಸೇರಿ 127 ಸದಸ್ಯರ ಬಲವನ್ನು ಹೊಂದಿದೆ. ಜೆಡಿಎಎಸ್ ಸದಸ್ಯರಾದ ಮಂಜುಳಾ ವಿ. ನಾರಾಯಣಸ್ವಾಮಿ ಮತ್ತು ಕೆ. ದೇವದಾಸ್ ಅವರು ಬಿಜೆಪಿ ಜತೆ ಗುರುತಿಸಿಕೊಂಡಿದ್ದು, ಇದರಿಂದ ಬಿಜೆಪಿಯ ಸಂಖ್ಯಾಬಲ 129ಕ್ಕೇರಿದೆ. ಕಾಂಗ್ರೆಸ್-ಜೆಡಿಎಸ್ ಸದಸ್ಯರ ಸಂಖ್ಯೆ 129 ಇದೆ. ನಾಸಿರ್ ಹುಸೇನ್ ಮತ್ತು ಪ್ರಕಾಶ್ ರಾಥೋಡ್ ಹೆಸರು ಸೇರಿದರೆ ಮೈತ್ರಿ ಪಕ್ಷದ ಬಲ 131ಕ್ಕೆ ಹೆಚ್ಚಾಗಲಿದೆ. ಈ ಲೆಕ್ಕಾಚಾರದಂತೆ ಬಿಜೆಪಿಗೆ ಆಡಳಿತದ ಚುಕ್ಕಾಣಿ ಹಿಡಿಯಲು ಆಗುವುದಿಲ್ಲ. ಆದರೆ ಅನರ್ಹ ಶಾಸಕರ ಬೆಂಬಲಿಗ ಕಾರ್ಪೋರೇಟರ್ ಗಳಲ್ಲಿ ಕೆಲವರು ಚುನಾವಣಾ ದಿನ ಗೈರಾಗಿ, ಕಮಲ ಪಾಳಯದ ಗೆಲುವಿಗೆ ಸಹಕರಿಸುವ ಸಾಧ್ಯತೆಗಳು ದಟ್ಟವಾಗಿವೆ.

ಪದ್ಮನಾಭರೆಡ್ಡಿ, ಎಲ್, ಶ್ರೀನಿವಾಸ್, ಹೇಮಲತಾ ಗೋಪಾಲಯ್ಯ ಅವರ ನಡುವೆ ತೀವ್ರ ಪೈಪೋಟಿ ಇದ್ದು, ಅಂತಿಮವಾಗಿ ವಿಜಯ ಲಕ್ಷ್ಮೀ ಯಾರ ಕೊರಳಿಗೆ ಮಾಲೆ ಹಾಕುವಳೆಂಬುದನ್ನು ತಿಳಿಯಲು ಇನ್ನೂ ಕೆಲವೇ ದಿನಗಳು ಸಾಕು. ಅಲ್ಲಿವರೆಗೂ ಕಾದು ನೋಡಲೇಬೇಕು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights