ಫ್ಯಾಕ್ಟ್‌ಚೆಕ್ : ಇಸ್ರೇಲ್ ಜನವರಿ 22ಅನ್ನು ರಾಷ್ಟ್ರೀಯ ರಜಾದಿನವನ್ನಾಗಿ ಘೋಷಿಸಿದೆಯೇ?

ಜನವರಿ 22,2024ರಂದು ಅಯೋಧ್ಯೆ ರಾಮ ಮಂದಿರದಲ್ಲಿ ರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆ, ಇಸ್ರೇಲ್ ಸರ್ಕಾರ ಅಂದಿನ ದಿನವನ್ನು ರಾಷ್ಟ್ರೀಯ ರಜಾದಿನವನ್ನಾಗಿ ಘೋಷಣೆ ಮಾಡಿದೆ ಎಂಬ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳು ಹರಿದಾಡುತ್ತಿವೆ.

ಹಲವು ಫೇಸ್‌ಬುಕ್ ಬಳಕೆದಾರರು ಜನವರಿ 22ರಂದು ರಾಮ ಮಂದಿರ ಉದ್ಘಾಟನೆ ಪ್ರಯುಕ್ತ ಭಾರತದ ಮಿತ್ರ ರಾಷ್ಟ್ರ ಇಸ್ರೇಲ್ ರಾಷ್ಟ್ರೀಯ ರಜಾದಿನ ಘೋಷಣೆ ಮಾಡಿದೆ ಎಂದು ಹಂಚಿಕೊಳ್ಳುತ್ತಿದ್ದಾರೆ.

‘Manohar Manohar’ಎಂಬ ಫೇಸ್‌ಬುಕ್ ಬಳಕೆದಾರ ತಮ್ಮ ಖಾತೆಯಲ್ಲಿ “ಇಸ್ರೇಲ್ ಜನವರಿ 22 ಅನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸಿದೆ. ಜೈ ಇಸ್ರೇಲ್, ಜೈ ಶ್ರೀರಾಮ್” ಎಂದು ಬರೆದುಕೊಂಡಿದ್ದಾರೆ.

‘Siddu Adin’ಎಂಬ ಮತ್ತೋರ್ವ ಫೇಸ್‌ಬುಕ್ ಬಳಕೆದಾರ ” ಇಸ್ರೇಲ್ ಜನವರಿ 22ನೇ ತಾರೀಖು ರಾಷ್ಟ್ರೀಯ ರಜಾ ದಿನವೆಂದು ಘೋಷಿಸಿದೆ. ಜೈಶ್ರೀರಾಮ್, ಜೈ ಇಸ್ರೇಲ್” ಎಂದು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

 

ಸತ್ಯ ಸನಾತನಿ‘ ಎಂಬ ಮತ್ತೊಂದು ಫೇಸ್‌ಬುಕ್ ಖಾತೆಯಲ್ಲೂ ” ಇಸ್ರೇಲ್ ಜನವರಿ 22ರಂದು ರಾಷ್ಟ್ರೀಯ ರಜಾದಿನವೆಂದು ಘೋಷಿಸಿದೆ. ಒಂದು ದೇಶ ತನ್ನ ಮಿತ್ರ ದೇಶಕ್ಕೆ ಇದಕ್ಕಿಂತಲೂ ಸ್ಪಷ್ಟವಾಗಿ ಇನ್ನು ಹೇಗೆ ತಾನೆ ಬೆಂಬಲ ಸೂಚಿಸಲು ಸಾಧ್ಯ? ಇಸ್ರೇಲ್‌ನ ಹೃದಯದಲ್ಲಿ ಭಾರತ ಇದೆ” ಎಂದು ಬರೆದುಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ಗಳಲ್ಲಿ ಪ್ರತಿಪಾದಿಸಿದಂತೆ ಜನವರ 22ರನ್ನು ರಾಷ್ಟ್ರೀಯ ರಜಾದಿನವನ್ನಾಗಿ ಇಸ್ರೇಲ್ ಘೋಷಿಸಿದೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಜನವರಿ 22,2024ರಂದು ಅಯೋಧ್ಯೆ ರಾಮ ಮಂದಿರದಲ್ಲಿ ರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ನಡೆಯುತ್ತಿರುವ ಕಾರಣಕ್ಕೆ ಮಿತ್ರ ರಾಷ್ಟ್ರವಾದ ಇಸ್ರೇಲ್ ಬೆಂಬಲ ಸೂಚಕವಾಗಿ ಜನವರಿ 22ರಂದು ರಜಾದಿನವನ್ನಾಗಿ ಘೋಷಿಸಿದೆಯೇ ಎಂದು ಪರಿಶೀಲಿಸಲು  ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಇಸ್ರೇಲ್‌ನ ರಜಾದಿನಗಳ ಪಟ್ಟಿಯನ್ನು ಸರ್ಚ್ ಮಾಡಿದಾಗ ಅನೇಕ ಅಂತಾರಾಷ್ಟ್ರೀಯ ವೆಬ್‌ಸೈಟ್‌ಗಳಲ್ಲಿ ರಜಾದಿನಗಳ ಪಟ್ಟಿ ಲಭ್ಯವಾಗಿದೆ.

ಜಾಗತಿಕ ಮಾಹಿತಿಗಳನ್ನು ತಿಳಿಸುವ worlddata.info ಎಂಬ ವೆಬ್‌ಸೈಟ್‌ನಲ್ಲಿ ಇಸ್ರೇಲ್‌ನ 2024ರ ರಜಾದಿನಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಅದರಲ್ಲಿ ಜನವರಿ 25, 2022ರಂದು New year festival of trees and bushes (ಮರಗಳು ಮತ್ತು ಪೊದೆಗಳ ಹೊಸ ವರ್ಷದ ಹಬ್ಬ) ಎಂಬ ಹೆಸರಿನಲ್ಲಿ ರಜಾದಿನ ಕಂಡು ಬಂದಿದೆ. ಜನವರಿ 22ರಂದು ಯಾವುದೇ ರಜೆ ಇರುವುದಾಗಿ ಉಲ್ಲೇಖಿಸಿಲ್ಲ.

ವಿವಿಧ ದೇಶಗಳ ಮಾಹಿತಿ ತಿಳಿಸುವ timeanddate.com ಎಂಬ ಮತ್ತೊಂದು ವೆಬ್‌ಸೈಟ್‌ನಲ್ಲಿಯೂ ಜನವರಿ 25, 2024ರಂದು ಇಸ್ರೇಲ್‌ನಲ್ಲಿ ರಜಾದಿನ ಇರುವುದಾಗಿ ಹೇಳಲಾಗಿದೆ. ಜನವರಿ 22ರ ರಜೆಯ ಕುರಿತು ಉಲ್ಲೇಖಿಸಿಲ್ಲ.

ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕೃತ ವೆಬ್‌ಸೈಟ್‌ನಲ್ಲಿ 2024 ಇಸ್ರೇಲ್‌ ಮತ್ತು ಭಾರತದ ರಜಾದಿನಗಳ ಮಾಹಿತಿ ನೀಡಲಾಗಿದೆ. ಅದರಲ್ಲಿ ಜನವರಿ 26 ಭಾರತ ಗಣರಾಜ್ಯೋತ್ಸವದಂದು ಇಸ್ರೇಲ್‌ನಲ್ಲಿರುವ ರಾಯಭಾರ ಕಚೇರಿಗೆ ರಜೆ ಇರುವುದಾಗಿ ಹೇಳಲಾಗಿದೆ. ಆದರೆ, ಜನವರಿ 22ರಂದು ರಾಮ ಮಂದಿರ ಉದ್ಘಾಟನೆ ಪ್ರಯುಕ್ತ ರಾಯಭಾರ ಕಚೇರಿಗಾಗಲಿ, ಇಸ್ರೇಲ್ ದೇಶದಲ್ಲಾಗಲಿ ಯಾವುದೇ ರಜೆ ಇರುವ ಬಗ್ಗೆ ಉಲ್ಲೇಖಿಸಿಲ್ಲ.

ಇಸ್ರೇಲ್‌ ಇರಲಿ ಇನ್ನು ಭಾರತದಲ್ಲೇ ಜನವರಿ 22ರಂದು ಯಾವುದೇ ರಾಷ್ಟ್ರೀಯ ರಜೆ ಇರುವುದಾಗಿ ಸರ್ಕಾರ ಘೋಷಣೆ ಮಾಡಿಲ್ಲ. ಉತ್ತರ ಪ್ರದೇಶ ಸರ್ಕಾರ ಅಂದು ಉತ್ತರ ಪ್ರದೇಶ ರಾಜ್ಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ.

ಭಾರತದ ಯಾವುದೇ ಮುಖ್ಯವಾಹಿನಿ ಮಾಧ್ಯಮಗಳು ಜನವರಿ 22ರಂದು ರಾಮ ಮಂದಿರ ಉದ್ಘಾಟನೆ ಪ್ರಯುಕ್ತ ಇಸ್ರೇಲ್ ರಾಷ್ಟ್ರೀಯ ರಜಾದಿನ ಘೋಷಣೆ ಮಾಡಿದೆ ಎಂದು ಎಲ್ಲೂ ಸುದ್ದಿ ಪ್ರಕಟಿಸಿಲ್ಲ.

ಭಾರತದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಜನವರಿ 22ರಂದು ಇಸ್ರೇಲ್‌ನಲ್ಲಿ ರಜೆ ಇರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ರಾಯಭಾರ ಕಚೇರಿಯ ವೆಬ್‌ಸೈಟ್‌ನಲ್ಲಿ 2024ರ ರಜಾದಿನಗಳ ಪಟ್ಟಿ ಇನ್ನೂ ಅಪ್ಡೇಟ್ ಆಗಿಲ್ಲ. ಹಳೆಯ 2023ರ ಪಟ್ಟಿಯೇ ಇದೆ.

ಒಟ್ಟಾರೆಯಾಗಿ ಹೇಳುವುದಾದರೆ, ಜನವರಿ 22,2024ರಂದು ಅಯೋಧ್ಯೆ ರಾಮ ಮಂದಿರದಲ್ಲಿ ರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಅದೇ ದಿನವನ್ನು ಇಸ್ರೇಲ್ ಸರ್ಕಾರ ರಾಷ್ಟ್ರೀಯ ರಜಾದಿನವನ್ನಾಗಿ ಘೋಷಣೆ ಮಾಡಿದೆ ಎಂಬುದು ಸುಳ್ಳು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಗಲ್ಫ್‌ ನ್ಯೂಸ್ ಪತ್ರಿಕೆ ರಾಹುಲ್ ಗಾಂಧಿಯನ್ನು ಪಪ್ಪು ಎಂದು ಕರೆದಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights