ಗಿರ್ ಅಭಯಾರಣ್ಯದಲ್ಲಿ ಸಿಂಹಗಳ ಸಂಖ್ಯೆ ಹೆಚ್ಚಳ; ಅಭಿನಂದಿಸಿದ ಮೋದಿ

ಗುಜರಾತಿನ ಸೌರಾಷ್ಟ್ರದ ಗಿರ್ ಅಭಯಾರಣ್ಯದಲ್ಲಿ ಏಷಿಯಾಟಿಕ್ ಸಿಂಹಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ. ಭಾರತದಲ್ಲಿ ಸಿಂಹಗಳು ಕಂಡು ಬರುವ ಒಂದೇ ಪ್ರದೇಶ ಅದಾಗಿದೆ.

ಈಗ ಈ ಅಭಯಾರಣ್ಯದಲ್ಲಿ ಸಿಂಹಗಳ ಸಂಖ್ಯೆ 29% ಹೆಚ್ಚಳಗೊಂಡಿದ್ದು ಒಟ್ಟು 674 ಸಿಂಹಗಳಿವೆ ಎಂದು ಗುಜರಾತ್ ಅರಣ್ಯ ಇಲಾಖೆ ಬುಧವಾರ ಹೇಳಿದೆ. ಜೂನ್ 5 ಮತ್ತು ಜೂನ್ 6 ರ ರಾತ್ರಿ ಹುಣ್ಣಿಮೆಯಲ್ಲಿ ಸಿಂಹಗಳ ಎಣಿಕೆ ಕಾರ್ಯವನ್ನು ಅರಣ್ಯ ಇಲಾಖೆ ನಡೆಸಿದೆ. 2015 ರ ಗಣತಿ ಪ್ರಕಾರ ಗಿರ್ ನಲ್ಲಿ 523 ಏಷಿಯಾಟಿಕ್ ಸಿಂಹಗಳು ಇದ್ದವು.

ಇದರ ಬಗ್ಗೆ ಟ್ವೀಟ್ ಮಾಡಿ ಅಭಿನಂದನೆ ತಿಳಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು “ಎರಡು ಒಳ್ಳೆಯ ಸುದ್ದಿಗಳು. ಗುಜರಾತಿನ ಗಿರ್ ಅರಣ್ಯದಲ್ಲಿ ವಾಸಿಸುವ ಭವ್ಯ ಏಷಿಯಾಟಿಕ್ ಸಿಂಹಗಳ ಸಂಖ್ಯೆ ಸುಮಾರು 29% ಹೆಚ್ಚಳಗೊಂಡಿದೆ. ಮತ್ತು ಭೂ ವಿಸ್ತೀರ್ಣ 36% ಹೆಚ್ಚಳಗೊಂಡಿದೆ. ಇಂತಹ ಅದ್ಭುತ ಕೆಲಸಕ್ಕೆ ಶ್ರಮ ವಹಿಸಿದ ಎಲ್ಲರಿಗೂ ಗುಜರಾತ್ ನ ನಾಗರಿಕರಿಗೂ ಅಭಿನಂದನೆಗಳು” ಎಂದು ಬರೆದಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ “ಕಳೆದ ಕೆಲವು ವರ್ಷಗಳಿಂದ ಗುಜರಾತಿನಲ್ಲಿ ಸಿಂಹಗಳ ಸಂಖ್ಯೆ ಏರುಗತಿಯಲ್ಲಿ ಇದೆ. ಸಮುದಾಯ ಶ್ರಮ, ತಂತ್ರಜ್ಞಾನದ ಬಳಕೆ, ವನ್ಯಜೀವಿಗಳ ಆರೋಗ್ಯಸೇವೆ, ಮನುಷ್ಯ-ಸಿಂಹಗಳ ಘರ್ಷಣೆಯನ್ನು ತಡೆಯಲು ಸರಿಯಾದ ಕ್ರಮಗಳಿಂದ ಇದು ಸಾಧ್ಯವಾಗಿದೆ. ಈ ಒಳ್ಳೆಯ ಬೆಳವಣಿಗೆ ಮುಂದುವರೆಯುವ ಭರವಸೆ ಇದೆ” ಎಂದು ಕೂಡ ಅವರು ಬರೆದಿದ್ದಾರೆ.

1965 ರಲ್ಲಿ ಸೌರಾಷ್ಟ್ರದ ಗಿರ್ ಅರಣ್ಯದ 1412.21 ಚದರ ಕಿಲೋ ಮೀಟರ್ ಪ್ರದೇಶವನ್ನು ಸಂರಕ್ಷಿತ ಅಭಯಾರಣ್ಯ ಎಂದು ಘೋಷಿಸಲಾಗಿತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights