ಕನ್ನಡಪರ ಹೋರಾಟಗಾರರ ವಿರುದ್ಧ ಸಚಿವ ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ..!

ಇಂದು ಸಿಎಎ ಪರ ಪ್ರಚಾರಾಂದೋಲನದಲ್ಲಿ ನಿರತರಾಗಿದ್ದ ಸಚಿವ ಸಿ.ಟಿ ರವಿ ಕನ್ನಡಪರ ಹೋರಾಟಗಾರರು ತುಕಡೆ ತುಕಡೆ ಗ್ಯಾಂಗ್‌‌ನೊಡನೆ ಸಂಬಂಧ ಹೊಂದಿದ್ದಾರೆ, ಸಮಾಜವನ್ನು ಒಡೆಯುತ್ತಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ಪ್ರತಿ ಸಂದರ್ಭದಲ್ಲಿಯೂ ಗಲಭೆ ಹುಟ್ಟುಹಾಕಲು ಸಂಚು ಹೂಡುವ ಜನ ಇದ್ದಾರೆ. ಅವರಿಗೆ ತುಕಡೆ ಗ್ಯಾಂಗ್‌ ಪರೋಕ್ಷವಾಗಿ, ಪ್ರತ್ಯಕ್ಷವಾಗಿ ಸಹಾಯ ಮಾಡುತ್ತಿದೆ. ತುಕಡೆ ಗ್ಯಾಂಗ್‌ನ ಸಹಾಯದಿಂದ ಅವರ ಉದ್ದೇಶ ಸಮಾಜವನ್ನು ಎಷ್ಟು ಸಾಧ್ಯ ಅಷ್ಟು ಛಿದ್ರ ಛಿದ್ರವಾಗಿ ಒಡೆಯುವುದು. ಆ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಲು ಸುಲಭ ಎಂಬ ಮಾನಸಿಕ ಸ್ಥಿತಿಯ ಜನ ಗಲಾಟೆಗೆ ಪ್ರಚೋದನೆ ಕೊಡುತ್ತಿದ್ದಾರೆ.

ನಾವು ಜವಾಬ್ದಾರಿಯುತವಾಗಿ ವರ್ತಿಸಬೇಕು. 99% ಕನ್ನಡಿಗರು ತಮಿಳರು ಸೌಹಾರ್ದತೆಯಿಂದ ಇದ್ದಾರೆ. 99% ಕನ್ನಡಿಗರು ಮಲೆಯಾಳಿಗರು ಸೌಹಾರ್ದತೆಯಿಂದ ಇದ್ದಾರೆ. 99% ಕನ್ನಡಿಗರು ಮರಾಠಿಗರು ಸೌಹಾರ್ದತೆಯಿಂದ ಇದ್ದಾರೆ. ಸೌಹಾರ್ದತೆ ಕೆಡಿಸುವ ಜನರನ್ನು ಹೊರಗಿಡಬೇಕು, ಸೌಹಾರ್ದತೆ ಉಳಿಸಿಕೊಳ್ಳಬೇಕು.

ಇನ್ನು ಸಿ.ಟಿಯವರು ಈ ಹೇಳಿಕೆಯನ್ನು ಎಲ್ಲಾ ಕನ್ನಡಪರ ಸಂಘಟನೆಗಳ ಮುಖಂಡರು ತೀವ್ರವಾಗಿ ವಿರೋಧಿಸಿದ್ದಾರೆ. ದೇಶವನ್ನು ಜಾತಿಧರ್ಮದ ಆಧಾರದಲ್ಲಿ ಒಡೆಯುತ್ತಿರುವುದು ಸಿ.ಟಿ ರವಿಯವರ ಬಿಜೆಪಿ ಪಕ್ಷವೇ ಹೊರತು ಕನ್ನಡ ಹೋರಾಟಗಾರರಲ್ಲ ಎಂದು ತಿರುಗೇಟು ನೀಡಿದ್ದಾರೆ.

ಈ ಹಿಂದೆಯೂ ಸಹ ಸಿ.ಟಿ ರವಿಯವರು ’ಮನೆಹಾಳರು’ ಎಂಬ ಪದ ಪ್ರಯೋಗಿಸಿ ಟೀಕೆಗೆ ಒಳಗಾಗಿದ್ದರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌ ದೊರೆಸ್ವಾಮಿಯವರು ಸಿ.ಟಿ ರವಿಯವರೊಡನೆ ಬಹಿರಂಗ ವೇದಿಕೆಯಲ್ಲಿ ಶಿಸ್ತಾಗಿ ಮಾತಾಡಲು ಕಲಿಯಪ್ಪ ಎಂದು ಪಾಠ ಮಾಡಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights