ಬೆಂಗಳೂರು ಪೋಲೀಸ್ ಕಮಿಷನರ್ ಮೇಲೆ ಲಂಚದ ಆರೋಪ ಹೊರಿಸಿದ ಕರ್ನಾಟಕ ಉಪಮುಖ್ಯಮಂತ್ರಿ

ಕೊರೊನ ಸೋಂಕಿನ ಪರಿಸ್ಥಿತಿಯ ಅವಲೋಕನ ಮಾಡಲು ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪನವರು ಕರೆದಿದ್ದ ಉನ್ನತ ಮಟ್ಟದ ಸಭೆ, ಉಪಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥನಾರಾಯಣ ಮತ್ತು ಬೆಂಗಳೂರು ಪೋಲಿಸ್ ಕಮಿಷನರ್ ಭಾಸ್ಕರ್ ರಾವ್ ನಡುವೆ ವಾಗ್ವಾದದ ವೇದಿಕೆಯಾಗಿ ಶುಕ್ರವಾರ ಪರಿಣಮಿಸಿದೆ ಎಂದು ದ ಪ್ರಿಂಟ್ ವರದಿ ಮಾಡಿದೆ.

ಕರ್ಫ್ಯೂ ಪಾಸ್ ಗಳನ್ನು ಕೊಡುವಲ್ಲಿ ಭಾಸ್ಕರ್ ರಾವ್ ಇ-ಕಾಮಾರ್ಸ್ ಸಂಸ್ಥೆಗಳಿಗೆ ವಿಶೇಷ ವಿನಾಯಿತಿಯನ್ನು ನೀಡುತ್ತಿದ್ದಾರೆ ಎಂದು ಅಶ್ವತ್ಥನಾರಾಯಣ ಆರೋಪಿಸಿದ್ದಾರೆ. 21 ದಿನಗಳ ಲಾಕ್ ಡೌನ್ ಪರಿಸ್ಥಿತಿಯಲ್ಲಿ ದೇಶದಾದ್ಯಂತ ಅಗತ್ಯ ವಸ್ತುಗಳನ್ನು ಪಡೆಯುವುದು ಸಮಸ್ಯೆ ಆಗಿದೆ. ಅಂತರ್ಜಾಲದ ಮೂಲಕ ವಹಿವಾಟು ನಡೆಸುವ ಇ-ಕಾಮರ್ಸ್ ಸಂಸ್ಥೆಗಳಿಗೆ ಪಾಸ್ ಗಳನ್ನು ಲೀಲಾಜಾಲವಾಗಿ, ರಾವ್ ಅವರು ವಿತರಿಸುತ್ತಿದ್ದಾರೆ ಎಂದು ಹೇಳಿರುವುದಲ್ಲದೆ, ಆ ಸಂಸ್ಥೆಗಳಿಂದ ಲಂಚ ಪಡೆದಿದ್ದಾರೆ ಎಂಬ ಆರೋಪವನ್ನು ಕೂಡ ರಾವ್ ಮೇಲೆ ಉಪಮುಖ್ಯಮಂತ್ರಿ ಹೊರಿಸಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಅಂತರ್ಜಾಲ ಪತ್ರಿಕೆ ವರದಿ ಮಾಡಿದೆ.

ಸಚಿವರ ಆರೋಪಗಳಲ್ಲಿ ಹುರುಳಿಲ್ಲ ಎಂದು ಕಣ್ಣೀರು ಹಾಕಿಕೊಂಡು ಹೇಳಿರುವ ರಾವ್ ಅವರು ಕೂಡಲೇ ರಾಜೀನಾಮೆ ಕೊಡುವುದಕ್ಕೂ ಮುಂದಾಗಿ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಅಂತರ್ಜಾಲದಲ್ಲಿ ಬರುವ ಬೇಡಿಕೆಗಳನ್ನು ಪೂರೈಸಲು ಮನೆಮನೆಗೆ ತೆರಳುವ ಸಿಬ್ಬಂದಿ ವರ್ಗದ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ದೂರುಗಳನ್ನು ಆಲಿಸಲು ಹಲವು ಇ-ಕಾಮರ್ಸ್ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಭಾಸ್ಕರ್ ರಾವ್ ಬುಧವಾರ ಸಭೆ ನಡೆಸಿದ್ದರು.

ರಾವ್ ಅವರು ತಮ್ಮ ಮೇಲೆ ಬಂದ ಆರೋಪಗಳ ಬಗ್ಗೆ ವಿವರಿಸಲು ಉಪಮುಖ್ಯಮಂತ್ರಿಗಳಿಗೆ ಪ್ರಯತ್ನ ಮಾಡಿದರೂ ಕುಪಿತರಾಗಿದ್ದ ಉಪಮುಖ್ಯಮಂತ್ರಿಗಳು “ನಡೆಯುತ್ತಿರುವ ಸಂಗತಿಗಳ ಬಗ್ಗೆ ನನಗೆಲ್ಲ ಗೊತ್ತಿದೆ” ಎಂದು ತಿಳಿಸಿದ್ದಲ್ಲದೆ ಯಾರೋ ಒಬ್ಬರಿಗೆ ಕಾರ್ಯ ನಿರ್ವಹಿಸಲು ಅವಕಾಶ ನೀಡಿದ ಮೇಲೆ ಎಲ್ಲರಿಗು ಅವಕಾಶ ನೀಡಬೇಕು ಎಂದು ಗರಂ ಆಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಸಭೆಯಲ್ಲಿ ಉಂಟಾದ ವಾಗ್ವಾದ ಪರಿಸ್ಥಿತಿ ನೆರೆದಿದ್ದ ಅಧಿಕಾರಿಗಳು ಮತ್ತು ಸಚಿವರಿಗೆ ಆಘಾತ ತರಿಸಿತು ಎಂದು ತಿಳಿದುಬಂದಿದೆ. ಅಶ್ವತ್ಥನಾರಾಯಣ ಅವರಿಗೆ ಸುಮ್ಮನಿರುವಂತೆ ಯಡಿಯೂರಪ್ಪನವರು ತಿಳಿಸಿ, ರಾವ್ ಅವರನ್ನು ಸಂತೈಸಲು ನಡೆದ ಪ್ರಯತ್ನ ವಿಫಲವಾಗಿ ರಾವ್ ಅವರು ಸಭೆಯಿಂದ ಹೊರನಡೆದರು ಎಂದು ಮೂಲಗಳು ತಿಳಿಸಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights