ದೇವರೇ ನಮ್ಮನ್ನು ಕಾಪಾಡಬೇಕು ಎಂದ ಶ್ರೀರಾಮುಲು ರಾಜೀನಾಮೆಗೆ ಡಿಕೆಶಿ, ಪೃಥ್ವಿರೆಡ್ಡಿ ಆಗ್ರಹ!

ಜನರನ್ನು ಸಂಕಷ್ಟ ದೂಡಿರುವ ಕೊರೊನಾ ಸೋಂಕಿನಿಂದ ರಾಜ್ಯದ ಜನರನ್ನು ಕಾಪಾಡಲು ನಿಮ್ಮಿಂದ ಸಾಧ್ಯವಾಗದಿದ್ದರೆ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಆರೋಗ್ಯ ಸಚಿವ ಶ್ರೀ ರಾಮುಲು ಹಗೂ ಸರ್ಕಾರವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಅಗ್ರಹಿಸಿದ್ದಾರೆ.

ಕೊರೊನಾ ಸೋಂಕಿನಿಂದ ಆ ದೇವರೇ ಜನರನ್ನು ಕಾಪಾಡಬೇಕು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ನಿನ್ನೆ ಹೇಳಿಕೆ ನೀಡಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ಇಂದು ಡಿ.ಕೆ.ಶಿವಕುಮಾರ್ ಪ್ರತಿಕ್ರಿಸಿದ್ದು. “ಶ್ರೀರಾಮುಲು ಅವರ ಹೇಳಿಕೆಯಿಂದ ಇಡೀ ರಾಜ್ಯ ತಲ್ಲಣಗೊಂಡಿದೆ. ಅಧಿಕಾರಕ್ಕಾಗಿ ಬಹಳ ಶ್ರಮ ವಹಿಸಿ ಸರ್ಕಾರ ರಚನೆ ಮಾಡಿದರು. ಈಗ ಕೋವಿಡ್ ವಿಚಾರದಲ್ಲಿ ನಾವು ಏನು ಮಾಡಲಿಕ್ಕೆ ಆಗುವುದಿಲ್ಲ ದೇವರೇ ಕಾಪಾಡಬೇಕು ಎಂದು ಸರ್ಕಾರದ ಪ್ರತಿನಿಧಿಯಾಗಿ ಶ್ರೀರಾಮುಲು ಹೇಳಿದ್ದಾರೆ. ಸರ್ಕಾರ ಅಸಮರ್ಥವಾಗಿದೆ ಎಂದು ಅವರು ಒಪ್ಪಿಕೊಂಡಂತಾಗಿದೆ. ಕೊರೊನಾದಿಂದ ಜನರನ್ನು ದೇವರು ಕಾಪಾಡಬೇಕಾದರೆ, ನೀವು ಯಾಕೆ ಅಧಿಕಾರದಲ್ಲಿ ಇರಬೇಕು. ಜನರನ್ನು ನಿಮ್ಮಿಂದ ರಕ್ಷಣೆ ಮಾಡಲು ಆಗದಿದ್ದರೆ ರಾಜೀನಾಮೆ ನೀಡಿ. ಜನರು, ಪ್ರತಿಪಕ್ಷಗಳು ಎಲ್ಲ ರೀತಿಯ ಸಹಕಾರ ಕೊಟ್ಟ ನಂತರವೂ ನಿಮ್ಮ ಕೈಯಲ್ಲಿ ಆಗುವುದಿಲ್ಲ, ಎಲ್ಲ ದೇವರ ಕಥೆ ಎನ್ನುವುದಾದರೆ ಕೂಡಲೇ ಇಡೀ ಸರ್ಕಾರ ಅಧಿಕಾರದಿಂದ ಕೆಳಗಿಳಿಯುವುದು ಉತ್ತಮ” ಎಂದು ಆಗ್ರಹಿಸಿದ್ದಾರೆ.

ಶ್ರೀರಾಮುಲು ಅವರ ಬೇಜವಾಬ್ದಾರಿ ಹೇಳಿಕೆಯನ್ನು ಎಎಪಿಯ ಪೃಥ್ವಿರೆಡ್ಡಿ ಖಂಡಿಸಿದ್ದು, “ಈಗಾಗಲೇ ರಾಜ್ಯದ ಜನತೆ ಭಯ ಭೀತಿಯಿಂದ ನರಳುತ್ತಿರುವ ಸಂದರ್ಭದಲ್ಲಿ ಆರೋಗ್ಯ ಸಚಿವರಾಗಿ ಧೈರ್ಯವನ್ನು ನೀಡುವ ಬದಲಾಗಿ ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಸರ್ಕಾರದ ಪ್ರತಿನಿಧಿಗಳ ಇಂತಹ ಹೇಳಿಕೆಯಿಂದದ ರಾಜ್ಯದ ಜನತೆಯನ್ನು ಮತ್ತಷ್ಟು ಆತಂಕಕ್ಕೆ ದೂಡಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ಇಂತಹ ಆರೋಗ್ಯ ಸಂದಿಗ್ಧತೆಯನ್ನು ನಿಭಾಯಿಸುವಲ್ಲಿ ಸ್ವತಃ ಆರೋಗ್ಯ ಸಚಿವರೇ ಸಂಪೂರ್ಣ ಸೋತು ಕೈಚೆಲ್ಲಿರುವ ಲಕ್ಷಣಗಳು ಗೋಚರಿಸುತ್ತಿವೆ. ಹಾಗಾಗಿ ನೈತಿಕ ಹೊಣೆ ಹೊತ್ತು, ತಮ್ಮ ಸಚಿವ ಸ್ಥಾನಕ್ಕೂ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights