ಕಳಪೆ ಕಾಮಗಾರಿ: ಉದ್ಘಾಟನೆಗೊಂಡ ಒಂದೇ ತಿಂಗಳಿಗೆ ಉರುಳಿ ಬಿದ್ದ ಸೇತುವೆ

ಬಿಹಾರದ ಗೋಪಾಲ್ಗಂಜ್ ಮತ್ತು ಈಸ್ಟ್ ಚಂಪರನ್‌ಗೆ ಸಂಪರ್ಕಿಸುತ್ತಿದ್ದ 1.4 ಕಿಮೀ ಉದ್ದದ ಸೇತುವೆಯ ಒಂದು ಭಾಗ ಕುಸಿದು ಬಿದ್ದಿದೆ. ನಿನ್ನೆ (ಬುಧವಾರ) ಸುರಿದ ಭಾರಿ ಮಳೆಯಿಂದಾಗಿ ಸೇತುವೆ ನೆಲ ಕಚ್ಚಿದೆ.

ಬಿಹಾರದ ಗಂಡಕ ನದಿಗೆ ಕಟ್ಟಲಾಗಿರುವ ಈ ಸೇತುವೆ ಜೂನ್ 16ರಂದು ಉದ್ಘಾಟನೆಯಾಗಿತ್ತು. ಉದ್ವಾಟನೆಗೊಂಡ ಒಂದು ತಿಂಗಳಿಗೆ ಸೇತುವೆ ಕುಸಿದು ಬಿದ್ದಿದ್ದು, ಕಳಪೆ ಕಾಮಗಾರಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

1.4 ಕಿಮೀ ಉದ್ದದ ಈ ಸತ್ತರ್ಘಾಟ್ ಮಹಾಸೇತು ಸೇತುವೆಯನ್ನು ನಿರ್ಮಾಣ ಮಾಡಲು 8 ವರ್ಷಗಳು ತಗುಲಿದೆ. ಬಿಹಾರ್ ರಾಜ್ಯ ಪುಲ್ ನಿರ್ಮಾಣ್ ನಿಗಮ್ ಸಂಸ್ಥೆ 264 ಕೋಟಿ ರೂ ವೆಚ್ಚದಲ್ಲಿ ಈ ಸೇತುವೆ ನಿರ್ಮಿಸಿದೆ.
ಬಿಹಾರದಲ್ಲಿ ಇತ್ತೀಚೆಗೆ ಸುರಿದ ವ್ಯಾಪಕ ಮಳೆಯಿಂದಾಗಿ ಗಂಡಕ ನದಿಯ ನೀರಿನ ಮಟ್ಟ ಹೆಚ್ಚಾಗಿದೆ. ಈ ಸೇತುವೆಯ ರಸ್ತೆಗೆ ಜೋಡಿಸುವ ಕಾಲುವೆಗೆ ನದಿ ನೀರಿನ ಒತ್ತಡವನ್ನು ತಡೆದುಕೊಳ್ಳಲು ಸಾಧ್ಯವಾಗದೇ ದುರ್ಬಲಗೊಂಡಿದೆ. ವಾಲ್ಮಿಕಿ ನಗರ್ನಿಂದ ಮತ್ತಷ್ಟು ನೀರು ಬಿಡುಗಡೆಯಾದ ಬಳಿಕ ಈ ಕಾಲುವೆ ಕೊಚ್ಚಿಹೋಗಿ ಈ ದುರಂತ ಸಂಭವಿಸಿದೆ.

ಸತ್ತರ್ಘಾಟ್ ಮಹಾಸೇತು ಈ ಭಾಗದ ಪ್ರಮುಖ ಸೇತುವೆಯಾಗಿದೆ. ಗೋಪಾಲ್ಗಂಜ್ ಮತ್ತು ಈಸ್ಟ್ ಚಂಪರಣ್ ಮಧ್ಯೆ ಇದ್ದ ಪ್ರಮುಖ ಕೊಂಡಿಯಾಗಿದೆ. ಈಗ ಒಂದು ಭಾಗವು ಕುದಿಬಿದ್ದಿರುವುದು ಟ್ರಾಫಿಕ್ ಜಾಮ್ಗೆ ಕಾರಣವಾಗಿದೆ.

ಇದೇ ವೇಳೆ, ಸೇತುವೆ ಕುಸಿತ ಘಟನೆಯು ರಾಜಕೀಯ ವಾಗ್ಯುದ್ಧಕ್ಕೂ ಎಡೆ ಮಾಡಿಕೊಟ್ಟಿದೆ. ವಿಪಕ್ಷಗಳ ಮುಖಂಡರು ಸಿಎಂ ಮೇಲೆ ಎರಗಿಬಿದ್ದಿದ್ದಾರೆ. ಆರ್ಜೆಡಿ ನಾಯಕ ತೇಜಸ್ವಿ ಯಾದವ್, ಬಿಹಾರ ಕಾಂಗ್ರೆಸ್ ಮುಖ್ಯಸ್ಥ ಮದನ್ ಮೋಹನ್ ಝಾ ಅವರು ನಿತೀಶ್ ಕುಮಾರ್ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ.

“8 ವರ್ಷಗಳಿಂದ 263.47 ಕೋಟಿ ವೆಚ್ಚದಲ್ಲಿ ಕಟ್ಟಲಾಗಿದ್ದ ಸತ್ತರ್ಘಾಟ್ ಬ್ರಿಡ್ಜ್ ಅನ್ನು ನಿತೀಶ್ಜಿ ಅವರು ಜೂನ್ 16ರಂದು ಉದ್ಘಾಟನೆ ಮಾಡಿದರು. 29 ದಿನಗಳ ನಂತರ ಅದು ಕುಸಿದುಬಿದ್ದಿದೆ. ಇದು ನಿತೀಶ್ ಜೀ ಅವರ ಭ್ರಷ್ಟಾಚಾರದ ಫಲ ಎಂದು ಯಾರಾದರೂ ಆರೋಪಿಸಿಬಿಟ್ಟಾರು ಎಚ್ಚರ..! 263 ಕೋಟಿ ರೂ ಒಂದು ಮೇಲ್ನೋಟದ ವಿಚಾರ ಅಷ್ಟೇ. ಅವರ ಹೆಗ್ಗಣಗಳು ಈ ಹಣದ ಮೊತ್ತದಷ್ಟು ಮದ್ಯ ಕುಡಿದಿರುತ್ತವೆ” ಎಂದು ಮಾಜಿ ಡಿಸಿಎಂ ತೇಜಸ್ವಿ ಯಾದವ್ ವ್ಯಂಗ್ಯ ಮಾಡಿದ್ದಾರೆ.

ಬಿಹಾರ ಕಾಂಗ್ರೆಸ್ ಮುಖ್ಯಸ್ಥ ಡಾ. ಮದನ್ ಮೋಹನ್ ಝಾ ಕೂಡ ಟೀಕೆ ಮಾಡಿ ಟ್ವೀಟ್ ಮಾಡಿದ್ದಾರೆ. ಸೇತುವೆ ಬೀಳಲು ಬಡ ಇಲಿಗಳನ್ನ ದೂಷಿಸಬೇಡಿ ಎಂದು ಸರ್ಕಾರವನ್ನು ಕುಟುಕಿದ್ದಾರೆ.

ವಿಪಕ್ಷಗಳ ನಾಯಕರು ಈ ಇಲಿ, ಹೆಗ್ಗಣಗಳ ವಿಚಾರವನ್ನಿಟ್ಟುಕೊಂಡು ಸರ್ಕಾರದ ಮೇಲೆ ವಾಗ್ದಾಳಿ ನಡೆಸಲು ಕಾರಣವಿದೆ. 2017ರಲ್ಲಿ ನದಿ ದಂಡೆಗಳ ಆಳದಲ್ಲಿ ಇಲಿಗಳು ರಂದ್ರ ಕೊರೆದಿದ್ದರಿಂದ ನದಿ ನೀರು ಉಕ್ಕಿ ಹರಿದು ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಯಿತು ಎಂದು ಬಿಹಾರ ಸರ್ಕಾರದ ಸಚಿವರೊಬ್ಬರು ವಿಶ್ಲೇಷಣೆ ನೀಡಿದ್ದರು. ಆಗಿನಿಂದಲೂ ಇಲಿಗಳ ವಿಚಾರ ವಿಪಕ್ಷಗಳಿಗೆ ಆಯುಧವಾಗಿ ಪರಿಣಮಿಸಿದೆ.


ಇದನ್ನೂ ಓದಿ: ಕಠೀಲ್‌ ಕಾಮಗಾರಿಯ ಪಂಪ್‌ವೆಲ್ ಫ್ಲೈಓವರ್‌ನಲ್ಲಿ ಬಿರುಕು; ಜನರಲ್ಲಿ ಆತಂಕ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights