ಲಾಕ್ ಡೌನ್ ಅಭದ್ರತೆ: ಜನ್ ಧನ್ ಖಾತೆಗಳಿಂದ 500ರೂ ಹಿಂಪಡೆಯಲು ಉದ್ದನೆ ಸರತಿ ನಿಂತ ಮಹಿಳೆಯರು
21 ದಿನಗಳ ಲಾಕ್ ಡೌನ್ ಸಮಯದಲ್ಲಿ ಬಡ ಕುಟುಂಬಗಳಿಗೆ ಸಹಾಯ ಮಾಡಲು, ಜನ್ ಧನ್ ಯೋಜನೆಯಡಿ ಮೂರು ತಿಂಗಳವರೆಗೆ 500 ರುಪಾಯಿಗಳನ್ನು ಖಾತೆಯಲ್ಲಿ ನೇರವಾಗಿ ಜಮಾ ಮಾಡುವುದಾಗಿ ಕೇಂದ್ರ ಸರ್ಕಾರ ತಿಳಿಸಿತ್ತು. ಈಗ ಏಪ್ರಿಲ್ 3 ರಂದು ಮೊದಲ ಕಂತನ್ನು ಜಮಾ ಮಾಡಲಾಗಿದೆ.
ಕೆಲಸಗಳು ಇಲ್ಲದೆ, ದಿನನಿತ್ಯದ ಜೀವನಕ್ಕೆ ತೊಂದರೆಯಾಗಿರುವ ಸಮಯದಲ್ಲಿ, ಈ ಸಣ್ಣ ಮೊತ್ತಕ್ಕಾಗಿ ದೊಡ್ಡ ದೊಡ್ಡ ಸರತಿಗಳಲ್ಲಿ ಮಹಿಳೆಯರು ಕಾಯ್ದು ನಿಂತಿರುವುದನ್ನು ದ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಬೆಳಗ್ಗಿನಿಂದ ಮಧ್ಯಾಹ್ನದವರೆಗೂ ಕಾಯ್ದರೂ ಕೌಂಟರ್ ಬಳಿಗೆ ತೆರಳಿರದ ಮಹಿಳೆಯನ್ನು ಮಾತನಾಡಿಸಿರುವ ಪತ್ರಿಕೆ “ಸರ್ಕಾರ ನಮ್ಮ ಖಾತೆಗಳಲ್ಲಿ 500 ರೂ ಹಾಕಿದೆ. ನಮಗೆ ದುಡ್ಡಿನ ಅವಶ್ಯಕತೆ ಇದೆ. ನನ್ನ ಗಂಡ ಟೋಟೋ (ಇ-ರಿಕ್ಷ) ಓಡಿಸುತ್ತಾರೆ. ಈಗ ಏನೂ ಕೆಲಸ ಇಲ್ಲ” ಎಂದು ಹೇಳುವ ಪಶ್ಚಿಮ ಬಂಗಾಳದ ಚಾಂದ್ಪಾರದ ಸಾಸ್ವತಿ ಲಾಕ್ ಡೌನ್ ಗೆ ಮೊದಲು ಅವರ ಗಂಡ ದಿನಕ್ಕೆ400 ರೂ ಗಳಿಸುತ್ತಿದ್ದನ್ನು ತಿಳಿಸಿದ್ದಾರೆ.
ಕಳೆದ ಎರಡು ದಿನಗಳಿಂದಲೂ ಮಕ್ಕಳು ಮತ್ತು ಕುಟುಂಬದ ಸದಸ್ಯರನ್ನು ಕರೆದುಕೊಂಡು ಪಶ್ಚಿಮ ಬಂಗಾಳದ ಎಲ್ಲಾ ಜಿಲ್ಲೆಗಳ ಬ್ಯಾಂಕ್ ಗಳ ಎದುರು ದೊಡ್ಡ ದೊಡ್ಡ ಸಾಲುಗಳಲ್ಲಿ ನಿಂತಿದ್ದು ಸಾಮಾನ್ಯವಾಗಿತ್ತು ಎಂದು ಪತ್ರಿಕೆ ವರದಿ ಮಾಡಿದೆ. ಎಷ್ಟೋ ಬ್ಯಾಂಕ್ ಗಳು ಒಂದು ರೂಮಿನಲ್ಲಿ ಗ್ರಾಹಕ ಕೇಂದ್ರಗಳನ್ನು ನಿರ್ಮಿಸಿ ನಗದು ನೀಡುತ್ತಿವೆ.
“ನಾನು ನೆನ್ನೆಯೂ ಇಲ್ಲಿದ್ದೆ. ಆದರೆ ನಾವು ಕೌಂಟರ್ ಬಳಿ ತೆರಳುವ ಹೊತ್ತಿಗೆ ಅದು ಮುಚ್ಚಿತು. ನೆನ್ನ ನನ್ನ ಅತ್ತೆ ಮಕ್ಕಳನ್ನು ನೋಡಿಕೊಂಡು ಅಡುಗೆ ಕೆಲಸಗಳನ್ನು ಮಾಡಿದರು. ಆದರೆ ಇಂದು ನಾವಿಬ್ಬರೂ ಬಂದಿದ್ದೇವೆ. ಇಬ್ಬರಿಗೂ 500 ರೂ ದೊರೆತರೆ, ಇನ್ನಷ್ಟು ದಿನಗಳಿಗೆ ಆಹಾರ ವ್ಯವಸ್ಥೆ ಮಾಡಿಕೊಳ್ಳಬಹುದು” ಎಂದು ಸಾಸ್ವತಿ ಹೇಳಿದ್ದಾರೆ. “ಲಾಕ್ ಡೌನ್ ಘೋಷಣೆಯಾದಾಗ ನಮ್ಮಲ್ಲಿ ಉಳಿದಿದ್ದ ನಗದಿನಿಂದ ಆಹಾರ ಪದಾರ್ಥಗಳನ್ನು ತುರ್ತಾಗಿ ಕೊಂಡೆವು. ಈಗ ಲಾಕ್ ಡೌನ್ ಮುಂದುವರೆಯಲಿದೆ ಎನ್ನಲಾಗುತ್ತಿದೆ. ನಮ್ಮ ಹತ್ತಿರ ಯಾವುದೇ ಹಣ ಉಳಿದಿಲ್ಲ” ಎಂದು ಕೂಡ ಅವರು ಹೇಳಿರುವುದಾಗಿ ಪತ್ರಿಕೆ ವರದಿ ಮಾಡಿದೆ.
ಕೊರೊನ ಸೋಂಕು ತಡೆಗಟ್ಟಲು ಘೋಷಿಸಲಾಗಿರುವ ಲಾಕ್ ಡೌನ್ ಬಳಿಕ ಲಕ್ಷಾಂತರ ಕುಟುಂಬಗಳು ದಿನನಿತ್ಯದ ಆಹಾರಕ್ಕೆ ಚಿಂತಿಸುವ ಪರಿಸ್ಥಿತಿ ಬಂದೊದಗಿದೆ.

