Fact Check: ಭಾರತದಿಂದ ಪಲಾಯನವಾಗಲು ಬಿಜೆಪಿ ಸಹಕರಿಸಿದೆ ಎಂದು ನೀರವ್ ಮೋದಿ ಹೇಳಿದ್ದಾರೆಯೇ?

ಭಾರತದಿಂದ ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಮತ್ತು BJP ಪಕ್ಷದ ನಾಯಕರ ಫೋಟೋಗಳು ಮತ್ತು ಕ್ಲಿಪ್‌ಗಳನ್ನು ಒಟ್ಟಿಗೆ ಜೋಡಿಸಿ ಮಾಡಿದ ವೀಡಿಯೋ ಒಂದು ವೈರಲ್ ಆಗಿದೆ. ಅದರಲ್ಲಿ ನೀರವ್ ಮೋದಿ ನಾನು ದೇಶದಿಂದ ಪರಾರಿಯಾಗಿಲ್ಲ, ಬದಲಿಗೆ ಬಿಜೆಪಿ ನಾಯಕರು ಬಲವಂತವಾಗಿ ದೇಶಬಿಡುವಂತೆ ಮಾಡಿದ್ದಾರೆ ಎಂದು ಲಂಡನ್ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಪ್ರತಿಪಾದಿಸಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಈಗಾಗಲೇ ನೀರವ್ ಮೋದಿ ಬಗ್ಗೆ ಆತನ ಸುಳಿವಿನ ಬಗ್ಗೆ ಸಾಕಷ್ಟು ಗೊಂದಲಗಳು ಇರುವಾಗ ಈ ರೀತಿಯ ಸುದ್ದಿಯೊಂದು ಹರುದಾಡುತ್ತಿದ್ದು ಈ ವೀಡಿಯೋ ಕುರಿತು  ಎನ್ ಸುದ್ದಿ.ಕಾಮ್ ಪರಿಶೀಲಿಸಿದಾಗ ನೀರವ್ ಮೋದಿ ಆ ರೀತಿ ಹೇಳಿಕೆ ನೀಡಿರುವ ಯಾವುದೇ ಪುರಾವೆಗಳು ಲಭ್ಯವಿಲ್ಲ.

90 ಸೆಕೆಂಡ್ ಅವಧಿಯ ಈ ವಿಡಿಯೋದಲ್ಲಿ ನೀರವ್ ಮೋದಿ ಹಾಗೂ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಸಂಬಿತ್ ಪಾತ್ರ ಸೇರಿದಂತೆ ಬಿಜೆಪಿ ನಾಯಕರ ಹಲವಾರು ಫೋಟೋಗಳು ಮತ್ತು ವೀಡಿಯೋ ತುಣುಕುಗಳಿವೆ. ವೀಡಿಯೋ ಸಹಿತ ಹಿಂದಿಯಲ್ಲಿ ಇರುವ ದ್ವನಿಯೊಂದು  ಬಿಜೆಪಿ ನಾಯಕರ ನಿರ್ದೇಶನದ ಮೇರೆಗೆ ದೇಶವನ್ನು ತೊರೆಯುವಂತೆ ಒತ್ತಾಯಿಸಲಾಗಿದ್ದು, ದೇಶ ಬಿಟ್ಟು ಓಡಿಹೋಗಲು ಬಿಜೆಪಿ ನಾಯಕರು 456 ಕೋಟಿ ರೂಪಾಯಿ ಕಮಿಷನ್ ತೆಗೆದುಕೊಂಡಿದ್ದಾರೆ ಎಂದು ನೀರವ್ ಮೋದಿ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ. ನೀರವ್ ಮೋದಿಯವರ ಹೇಳಿಕೆ ಬಿಜೆಪಿ ಪಾಳಯದಲ್ಲಿ ತಲ್ಲಣ ಮೂಡಿಸಿದ್ದು, ಈ ಕಾರಣಕ್ಕೆ ಸಂಬಿತ್ ಪಾತ್ರ ಅವರನ್ನು ಲಂಡನ್‌ಗೆ ಕಳುಹಿಸಲಾಗಿದೆ ಎಂದು ವೀಡಿಯೊ ಹೇಳುತ್ತದೆ. ಇದನ್ನು ಕುಲದೀಪ್ ಚೌಧರಿ ಎಂಬುವವರು ಹಿಂದಿಯ ಸಾಲುಗಳೊಂದಿಗೆ ‘ಚೌಕಿದಾರ್ ಚೋರ್’ ಎಂದು ನೀರವ್ ಮೋದಿ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದಾನೆ’ ಎಂದು ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಫ್ಯಾಕ್ಟ್ ಚೆಕ್

ನೀರವ್ ಮೋದಿ ದೇಶದಿಂದ ಪಲಾಯನ ಮಾಡುವಾಗ ಬಿಜೆಪಿ ನಾಯಕರೊಂದಿಗೆ ಯಾವುದಾದರೂ ಹೇಳಿಕೆ ನೀಡಿದ್ದಾರಾ? ಅವರೊಂದಿಗಿರುವ ಯಾವುದಾದರೊಂದು ವರದಿಗಳು ಲಭ್ಯವಿದೆಯಾ ಎಂದು ಏನ್ ಸುದ್ದಿ.ಕಾಮ್ ಪರಿಶೀಲಿಸಿದಾಗ, ಅಂತಹ ಯಾವುದೇ ವರದಿಗಳು ಕಂಡುಬಂದಿರುವುದಿಲ್ಲ.

ಆದರೆ ಮಾರ್ಚ್ 21, 2019 ರಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ಒಂದು ಲೇಖನ ಪ್ರಕಟವಾಗಿದ್ದು, ಆ ಲೇಖನದಲ್ಲಿ ‘ನೀರವ್ ಮೋದಿಯು ಲಂಡನ್‌ನ ಮೆಟ್ರೋ ಬ್ಯಾಂಕ್‌ನಲ್ಲಿ ಖಾತೆ ತೆರೆಯಲು ಹೋಗಿದ್ದ ಸಂದರ್ಭದಲ್ಲಿ ಪ್ರತ್ಯಕ್ಷದರ್ಶಿಯೊಬ್ಬ ನೀಡಿದ ಮಾಹಿತಿ ಮೇರೆಗೆ ನೀರವ್ ಮೋದಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಮೋದಿಯನ್ನು ವೆಸ್ಟ್‌ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರುಪಡಿಸಿದಾಗ, ನೀರವ್ ಮೋದಿ ಭಾರತಕ್ಕೆ ಹಸ್ತಾಂತರಿಸುವುದನ್ನು ವಿರೋಧಿಸಿದರು ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ, ಜಿಲ್ಲಾ ನ್ಯಾಯಾಧೀಶರಾದ ಮೇರಿ ಮಲ್ಲೊನ್ ನೀರವ್ ಮೋದಿಗೆ  ಜಾಮೀನು ನಿರಾಕರಿಸಿ ಅವರನ್ನು ಮಾರ್ಚ್ 29ರವರೆಗೆ ಕಸ್ಟಡಿಗೆ ಒಪ್ಪಿಸಿದರು ಎನ್ನಲಾಗಿದೆ.

2021 ರಲ್ಲಿಯೂ ಸಹ ನೀರವ್ ಮೋದಿ ಹೇಳಿದ್ದಾರೆ ಎಂಬ ಕೆಲವು ಹೇಳಿಕೆಗಳು ಟ್ವಿಟರ್‌ನಲ್ಲಿ ವೈರಲ್ ಆಗಿದ್ದವು. ಕೆಲವು ಟ್ವೀಟ್‌ಗಳಲ್ಲಿ “ನಾನು ಭಾರತದಿಂದ ಪಲಾಯನ ಮಾಡಿಲ್ಲ, ನನ್ನನ್ನು ಹೊರಹಾಕಲಾಯಿತು. ನನ್ನ ಪಾಲು 13,000 ಕೋಟಿ ರೂ ಅಂದರೆ 32%. ಉಳಿದದ್ದನ್ನು  ಬಿಜೆಪಿ ನಾಯಕರು ತೆಗೆದುಕೊಳ್ಳುತ್ತಾರೆ.” – ಲಂಡನ್ ನ್ಯಾಯಾಲಯದಲ್ಲಿ ನೀರವ್ ಮೋದಿ ಒಪ್ಪಿಕೊಂಡಿದ್ದಾರೆ. ಸಿಬಿಐ ಮೌನವಾಗಿದೆ ..’ ಎಂಬ ಪೋಸ್ಟ್‌ ಗಳನ್ನು ಹಂಚಿಕೊಳ್ಳಲಾಗಿತ್ತು. ಆದರೆ ಈ ಬಗ್ಗೆ ಯಾವುದೇ ಮುಖ್ಯ ಮಾಧ್ಯಮಗಳು ವರದಿ ಮಾಡಿಲ್ಲ. ಕೆಲವು ಪೋಸ್ಟ್‌ಗಳನ್ನು ಎಡಿಟ್ ಮಾಡಿ ಸುಳ್ಳು ಹರಡಲಾಗಿದೆ.

ನೀರವ್ ಮೋದಿ ಯಾರು?

ಪರಾರಿಯಾಗಿರುವ ಭಾರತೀಯ ವಜ್ರದ ವ್ಯಾಪಾರಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ 1.8 ಶತಕೋಟಿ ಡಾಲರ್ ವಂಚಿಸಿದ್ದರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಅವರು ಜನವರಿ 2018 ರಲ್ಲಿ ಭಾರತವನ್ನು ತೊರೆದಿದ್ದರು ಎಂದು ವರದಿಯಾಗಿದೆ. ಮಾರ್ಚ್ 20, 2019 ರಂದು ಯುಕೆಯಲ್ಲಿ ಮೋದಿಯನ್ನು ಬಂಧಿಸಲಾಯಿತು. ವೆಸ್ಟ್‌ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅವರಿಗೆ ಜಾಮೀನು ನಿರಾಕರಿಸಿತು ಮತ್ತು ಮಾರ್ಚ್ 29 ರವರೆಗೆ ಕಸ್ಟಡಿಗೆ ಕಳುಹಿಸಲಾಯಿತು.

ಡಿಸೆಂಬರ್ 14, 2021 ರಂದು ಲಂಡನ್ ಹೈಕೋರ್ಟ್, ನೀರವ್ ಮೋದಿಯವರನ್ನು ಭಾರತಕ್ಕೆ ಹಸ್ತಾಂತರದ ವಿಷಯವಾಗಿ ಅವರ ಮಾನಸಿಕ ಆರೋಗ್ಯದ ಆಧಾರದ ಮೇಲೆ ಮನವಿಯನ್ನು ಆಲಿಸಿದ್ದರು ಎಂದು ತಿಳಿದುಬಂದಿದೆ. ಇಂಡಿಯನ್ ಎಕ್ಸ್‌ ಪ್ರೆಸ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ ವಿಚಾರಣೆಯು 2022 ರಲ್ಲಿ ನಡೆಯಲಿದ್ದು ನೀರವ್ ಮೋದಿ ಭವಿಷ್ಯ ಅಲ್ಲಿ ಬರುವ ತೀರ್ಪಿನ ಆಧಾರದ ಮೇಲೆ ಅವಲಂಬಿತವಾವಾಗಿದೆ. ಹಾಗಾಗಿ ನೀರವ್ ಮೋದಿ ಮತ್ತು ಬಿಜೆಪಿ ನಾಯಕರ ನಡುವೆ ನಡೆಸಿದ್ದಾರೆ ಎನ್ನಲಾಗುವ ಸಂಭಾಷಣೆಯ ವೀಡಿಯೋ ಸುಳ್ಳು..! ಎಂದು ತಿಳಿದುಬಂದಿದೆ.


ಇದನ್ನು ಓದಿ: ಆಸ್ಪತ್ರೆಗಳಲ್ಲಿ ಇತರ ಧರ್ಮಗಳಿಗಿಂತ ಮುಸ್ಲಿಂ ಧರ್ಮದ ಜನನ ಸಂಖ್ಯೆ ಹೆಚ್ಚಾಗಿದೆ ಎಂಬುದು ಸುಳ್ಳು ಸುದ್ದಿ

Spread the love

Leave a Reply

Your email address will not be published. Required fields are marked *