ಡಿಕೆಶಿ ಕ್ಷೇತ್ರದಲ್ಲಿ ಪಡಿತರ ಅಕ್ರಮ: ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ವಕ್ಷೇತ್ರ ಕನಕಪುರದಲ್ಲಿ ಪಡಿತರ ಪದಾರ್ಥಗಳ ಅಕ್ರಮ ಬಯಲಿಗೆ ಬಂದಿದೆ. ಪಡಿತರ ಕೇಂದ್ರಗಳಿಗೆ ನೀಡಿದ್ದ ಅಕ್ಕಿ ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಅಕ್ರಮವಾಗಿ ಶೇಖರಣೆ ಮಾಡುತ್ತಿದ್ದುದು ಕಂಡುಬಂದಿದೆ. ಕನಕಪುರ ತಹಶೀಲ್ದಾರ್ ನೇತೃತ್ವದಲ್ಲಿ ಒಟ್ಟು ಮೂರು ಕಡೆ ದಾಳಿ ನಡೆದಿದೆ. ಕೆಜಿಗಟ್ಟಲೇ ಅಕ್ಕಿ. ಕೆಜಿಗಟ್ಟಲೆ ರಾಗಿ, ಹಾಲಿನ ಪೌಂಡರ್, ಉದ್ದಿನ ಬೇಳೆ ಸಂಗ್ರಹ ಪತ್ತೆಯಾಗಿದೆ.
ಒಟ್ಟು ಆರು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಒಂದು ವಾಹನ ನಾಪತ್ತೆಯಾಗಿದೆ. ಒಟ್ಟು ಮೂರು ಕುಟುಂಬಗಳು ಈ ಪ್ರಕರಣದಲ್ಲಿ ಭಾಗಿಯಾಗಿರುವ ಮಾಹಿತಿ ಇದೆ. ಇವರೆಲ್ಲರೂ ಬಾಡಿಗೆ ಮನೆಯಲ್ಲಿದ್ದುಕೊಂಡೇ ಈ ಚಟುವಟಿಕೆ ನಡೆಸಿರುವುದು ಕಂಡುಬಂದಿದೆ.
ತಹಶೀಲ್ದಾರ್ ಹರ್ಷಾ ಒಡೆಯರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಈ ದಾಳಿಗಳನ್ನು ನಡೆಸಿತು. ಕನಕಪುರದ KSRTC ಬಸ್ ನಿಲ್ದಾಣದ ಹಿಂಭಾಗದಲ್ಲಿನ ನವಾಜಿಬೋರೆಯ ಬಡಾವಣೆಯ ಮನೆಯೊಂದರಲ್ಲಿಯೇ ಭಾರೀ ಪ್ರಮಾಣದ ಅಕ್ಕಿ ಪತ್ತೆಯಾಗಿದೆ. ಐವತ್ತು ಹಾಗೂ ಐದು ಕೆಜಿ ತೂಕದ ಬ್ಯಾಗ್ಗಳಲ್ಲಿ ಅಕ್ಕಿ ಪ್ಯಾಕ್ ಮಾಡಲಾಗಿತ್ತು. ಇವುಗಳನ್ನು ಕಾಳಸಂತೆ ಮೂಲಕ ಮಾರಾಟ ಮಾಡಲು ಈ ರೀತಿ ಸಿದ್ದತೆಗಳನ್ನು ನಡೆಸಲಾಗಿತ್ತು.
ಅಜೀಜ್ ನಗರದ ಗಂಗೋತ್ರಿ ಶಾಲೆ ರಸ್ತೆಯಲ್ಲಿನ ಎರಡು ಮನೆಗಳ ಮೇಲೆ ದಾಳಿ ನಡೆಯಿತು. ಅಲ್ಲಿ ರಾಗಿ, ಉದ್ದಿನ ಬೇಳೆ, ಹಾಲಿನ ಪೌಂಡರ್ಗಳ ಅಕ್ರಮ ಸಂಗ್ರಹ ಇರುವುದು ಪತ್ತೆಯಾಗಿದೆ.
ಈ ಮೂರು ದಾಳಿಗಳಲ್ಲಿ ಸಿಕ್ಕಿರುವ ಅಕ್ರಮ ಅಕ್ಕಿ ಸಂಗ್ರಹದ ಮೊತ್ತ 5 ಸಾವಿರ ಕಿಲೋಗೂ ಹೆಚ್ಚಿದೆ. ಇದೀಗ ಈ ಮೂರು ಕುಟುಂಬಗಳ ವಿರುದ್ದ ಕನಕಪುರ ನಗರ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

