Corona : ಮೈಸೂರಿನಲ್ಲಿ ನಿಲ್ಲದ ರೌದ್ರ, ಕೊರೋನಾ ಗೆದ್ದವರ ಸಂಖ್ಯೆ ಬೆಂಗಳೂರಿನಲ್ಲಿ ಹೆಚ್ಚಳ..
ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕು ತಗುಲಿಸಿಕೊಂಡವರ ಪೈಕಿ ಅರ್ಧದಷ್ಟು ಮಂದಿ ಈಗ ಸೋಂಕು ಮುಕ್ತರಾಗಿದ್ದಾರೆ. ಬೆಂಗಳೂರಿನಲ್ಲಿ ಈವರೆಗೆ 71 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ಇದರಲ್ಲಿ 35 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಮನೆಗೆ ತೆರಳಿದ್ದಾರೆ.

ಉದ್ಯಾನ ನಗರಿಯಲ್ಲಿ ಸದ್ಯ 34 ಮಂದಿ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ ಈವರೆಗೆ ಇಬ್ಬರು ಮೃತಪಟ್ಟಿದ್ದಾರೆ. ಈ ಮಧ್ಯೆ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 19 ಹೊಸ ಪ್ರಕರಣಗಳು ದಾಖಲಾಗಿದ್ದು, ಈ ಮೈಕಿ ಇಬ್ಬರು ಮೃತಪಟ್ಟಿದ್ದಾರೆ.
ಚಿಕ್ಕಬಳ್ಳಾಪುರದ ಓರ್ವ ಸೋಂಕಿತರು ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತರಾದರೇ ಬೆಳಗಾವಿಯಲ್ಲಿ 80 ವರ್ಷದ ಮಹಿಳೆ ಅಸುನೀಗಿದರು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ರಾಜ್ಯದಲ್ಲಿ ಒಟ್ಟು 279 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು ಈ ಪೈಕಿ 80 ಮಂದಿ ಗುಣಮುಖರಾಗಿದ್ದಾರೆ. ಸದ್ಯ 187 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 12 ಮಂದಿ ಮೃತರಾಗಿದ್ದಾರೆ.
ರಾಜ್ಯದ ಸಾಂಸ್ಕೃತಿಕ ತವರೆಂದೇ ಹೆಸರಾಗಿರುವ ಮೈಸೂರು ಈಗ ಕೊರೋನಾ ವೈರಾಣುವುನ ಅಟ್ಟಹಾಸದ ತವರಾಗಿ ಪರಿಣಮಿಸಿದೆ. ಜುಬಿಲಿಯಂಟ್ ಎಂಬ ಒಂದೇ ಕಂಪೆನಿ ಮೈಸೂರಿಗರ ನೆಮ್ಮದಿಯನ್ನೇ ಕಸಿದುಕೊಂಡಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 17 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಮೈಸೂರಿನಲ್ಲಿಯೇ 10 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ.
ಮೈಸೂರಿನಲ್ಲಿ ದೃಢಪಟ್ಟಿರುವ 10 ಪ್ರಕರಣಗಳ ಪೈಕಿ 9 ಜುಬಿಲಿಯಂಟ್ ಕಾರ್ಖಾನೆಯಲ್ಲಿ ಕಾರ್‍ಯ ನಿರ್ವಹಿಸುವವರು ಅಥವಾ ಅವರ ಸಂಪರ್ಕಿತರೇ ಆಗಿದ್ದಾರೆ.

ಇದೇ ವೇಳೆ ಚಿಕ್ಕಬಳ್ಳಾಪುರದ ವ್ಯಕ್ತಿಯೊಬ್ಬರು ಕೊರೋನಾ ಸೋಂಕಿನಿಂದಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 11ಕ್ಕೆ ಏರಿಕೆ ಕಂಡಿದೆ.
ಈ ಮಧ್ಯೆ ಸೋಂಕು ಸಂಪೂರ್ಣವಾಗಿ ಹತೋಟಿಗೆ ಬರುವತನಕ ಜ್ಯುಬಿಲಿಯಂಟ್ ಕಂಪನಿ ತೆರಯುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ. ಮೊದಲು ಎಲ್ಲವೂ ತಿಳಿಯಾಗಬೇಕು, ನೆಮ್ಮದಿಯಾಗಿ ಕೆಲಸ ಮಾಡುವ ವಾತಾವರಣ ನಿರ್ಮಾಣವಾಗಬೇಕು, ಆಗ ಮಾತ್ರ ಕಂಪನಿ ತೆರೆಯಲು ಅನುಮತಿ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ದೇಶದಲ್ಲಿ 11933 ಸೋಂಕಿತರಿದ್ದರೆ, 1343 ಗುಣಮುಕರಾಗಿದ್ದಾರೆ, 392 ಮಂದಿ ಮೃತರಾಗಿದ್ದಾರೆ.

