ಕಾರ್ಮಿಕರ ಸುಲಿಗೆ ನಿಲ್ಲಿಸಿ, ಒಮ್ಮುಖ ದರ ಪಡೆಯಲು ನಿರ್ಧರಿಸಿದ ಸರ್ಕಾರ
ತಮ್ಮ ತಮ್ಮ ಊರುಗಳಿಗೆ ಮರಳುತ್ತಿದ್ದ ಕಾರ್ಮಿಕರಿಗೆ ಮೂರು ಪಟ್ಟು ಬಸ್ ದರ ನಿಗಧಿ ಮಾಡಿದ್ದಕ್ಕೆ ತೀವ್ರ ಟೀಕೆಗೆ ಗುರಿಯಾಗಿದ್ದ ಕರ್ನಾಟಕ ಸರ್ಕಾರ ಆ ನಿರ್ಧಾರದಿಂದ ಹಿಂದೆ ಸರಿದಿದ್ದು, ಕೇವಲ ಒಂದೇ ಕಡೆಯ ಬಸ್ ಟಿಕೆಟ್ ದರ ಪಡೆಯಲು ತೀರ್ಮಾನಿಸಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿರುವುದಾಗಿ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಕೆಎಸ್ಆರ್ ಟಿ ಸಿ ಬಸ್ ಗಳ ಮೂಲಕ ತಮ್ಮ-ತಮ್ಮ ಸ್ಥಳಗಳಿಗೆ ಹೋಗಲು ಬೆಂಗಳೂರಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಕಾದಿರುವ "ಕಾರ್ಮಿಕ" ರಿಗೆ Single Fare ದರದಲ್ಲಿ ಹೋಗಲು ಅನುವು ಮಾಡಿಕೊಡಲು ಮುಖ್ಯಮಂತ್ರಿಗಳು ಹಸಿರು ನಿಶಾನೆ ತೋರಿದ್ದಾರೆ.
— S.Suresh Kumar, Minister – Govt of Karnataka (@nimmasuresh) May 2, 2020
ಈ ಮೊದಲು ಕಾರ್ಮಿಕರು ಈ ಕಡೆಯ ಬಸ್ ಟಿಕೆಟ್ ದರ, ಆ ಕಡೆಯಿಂದ ಬಸ್ ಖಾಲಿ ಬರುವುದಕ್ಕೆ ಅದರ ದರ ಮತ್ತು ಕೇವಲ 40% ಜನ ಮಾತ್ರ ಒಂದು ಬಸ್ನಲ್ಲಿ ತೆರಳಬೇಕಿರುವುದರಿಂದ ಉಳಿದ ಎಲ್ಲಾ ದರವನ್ನು ಕಾರ್ಮಿಕರು ಭರಸಬೇಕೆಂಬ ಷರತ್ತು ವಿಧಿಸಿತ್ತು. ಹಾಗಾಗಿ ಕೇವಲ 400-500 ಇದ್ದ ಬಸ್ ದರ ಏಕಾಏಕಿ 1200-1500 ರೂಗಳಿಗೆ ಏರಿಕೆಯಾಗಿ ಕಾರ್ಮಿಕರ ಆಕ್ರೋಶಕ್ಕೆ ಗುರಿಯಾಗಿತ್ತು.
ಬಸ್ ಸ್ಟಾಂಡ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಲ್ಲೇ ದ್ವಂದ
ಮುಖ್ಯಮಂತ್ರಿಗಳು ಕಾರ್ಮಿಕರ ಪ್ರಯಾಣಕ್ಕೆ ಹೊರೆಯಾಗದಂತೆ ಒಂದೇ ಕಡೆಯ ಪ್ರಯಾಣ ದರವನ್ನು ಮಾತ್ರ ಭರಸುವಂತೆ ಕ್ರಮ ತೆಗೆದುಕೊಂಡು ಪ್ರಯಾಣಕ್ಕೆ ಅವಕಾಶ ಮಾಡಿಕೊಡುತ್ತೇವೆ ಎಂದು ಹೇಳಿಕೆ ಕೊಡುವ ಮುನ್ನ ಬಸ್ ಸ್ಟಾಂಡ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಪ್ರಯಾಣ ದರದ ಬಗ್ಗೆ ವಿಚಾರಿಸಲಾಗಿತ್ತು. ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಎಸ್ಆರ್ಟಿಸಿ ಅಧಿಕಾರಿ ಪ್ರಭಾಕರ್ ಅವರು ನೆನ್ನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ದುಪ್ಪಟ್ಟು ಪ್ರಯಾಣ ದರದ ಪಟ್ಟಿ ಗಣನೀಯವಾದುದಲ್ಲ, ಅದು ಯಾರೋ ಹರಿಬಿಟ್ಟಿರುವುದು ಎಂದು ಹೇಳಿದ್ದರು.
ಆದರೆ, ಅದೇ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ, ಅಂದರೆ ಕಾರ್ಮಿಕರಿಗೆ ಪ್ರಯಾಣ ದರದ ಬಗ್ಗೆ ಮಾಹಿತಿ ನೀಡುತ್ತಿದ್ದ ಮತ್ತೊಬ್ಬ ವ್ಯಕ್ತಿಯ ಬಳಿ ನೆನ್ನೆ ಹರಿದಾಡಿದ್ದ ಪ್ರಯಾಣದ ದರದ ಅದೇ ಪಟ್ಟಿ ಕೈಯಲ್ಲಿತ್ತು. ಆತ ಅದರಲ್ಲಿರುವ ದರದಂತೆಯೇ ಮಾಹಿತಿ ನೀಡಿ ಕಾರ್ಮಿಕರನ್ನು ಪ್ರಯಾಣಕ್ಕೆ ಬೇಕಾದ ಹಣ ಮತ್ತು ಸಹ ಪ್ರಯಾಣಿಕರನ್ನು ಹೊಂದಿಸಿಕೊಳ್ಳುವಂತೆ ತಿಳಿಸುತ್ತಿದ್ದರು.
ಇದು ಕೆಎಸ್ಆರ್ಟಿಸಿ ಅಧಿಕಾರಿಗಳಲ್ಲೇ ಇರುವ ದ್ವಂದ್ವವನ್ನು ಎತ್ತಿ ತೋರಿಸುತ್ತಿದ್ದು, ಮುಖ್ಯಮಂತ್ರಿಗಳ ಹೇಳಿಕೆಯ ನಂತರ ಬಸ್ ಸ್ಟಾಂಡ್ನಲ್ಲಿ ಪ್ರಯಾಣಕ್ಕೆ ಯಾವ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದನ್ನು ಪರೀಶಿಲಿಸಬೇಕಾಗಿದೆ.

