ಸರ್ಕಾರಿ ನೌಕರರ ವೇತನಕ್ಕೆ ಕತ್ತರಿ ಹಾಕಿದ ಸರ್ಕಾರ!
ಕರ್ನಾಟಕ ರಾಜ್ಯ ಸರ್ಕಾರವು ಸರ್ಕಾರಿ ನೌಕರರ ರಜಾ ದಿನಗಳ ವೇತನ ಸೌಲಭ್ಯವನ್ನು ರದ್ದುಗೊಳಿಸುವುದಾಗಿ ಆದೇಶ ಹೊರಡಿಸಿದೆ.
ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್ಡೌನ್ ವಿಧಿಸಿದ್ದ ಪರಿಣಾಮ ರಾಜ್ಯದ ಆರ್ಥಿಕ ಪರಿಸ್ಥಿತಿ ಕುಸಿತ ಕಂಡಿದೆ. ಇದರಿಂದಾಗಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಸರ್ಕಾರ ಸರ್ಕಾರಿ ನೌಕರರ ರಜಾ ದಿನಗಳ ವೇತನವನ್ನು ಕಡಿತಗೊಳಿಸಲು ಮುಂದಾಗಿದೆ.
ಕರ್ನಾಟಕ ನಾಗರಿಕ ಸೇವಾ ನಿಯಮಗಳ ನಿಯಮ 118(2)ರ ಪ್ರಕಾರ ಸರ್ಕಾರಿ ನೌಕರರಿಗೆ ರಜೆ ದಿನಗಳಲ್ಲಿಯೂ (ಗಳಿಕೆ ರಜೆ) ವೇತನ ಪಡೆಯುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಇದರ ಅನುಸಾರ ಸರ್ಕಾರಿ ನೌಕರರು ವೇತನ ಸಹಿತ ಗಳಿಕೆ ರಜೆಗಳನ್ನು ಪಡೆದುಕೊಳ್ಳಬಹುದು.

ಆದರೆ, ಕೊರೊನಾ ವೈರಸ್ ಮತ್ತು ಲಾಕ್ಡೌನ್ ಸೃಷ್ಠಿಸಿದ ಬಿಕ್ಕಟ್ಟಿನಿಂದಾಗಿ 2020ರ ಕ್ಯಾಲೆಂಡರ್ ವರ್ಷದಲ್ಲಿ ಸರ್ಕಾರಿ ನೌಕರರಿಗೆ ಗಳಿಕೆ ರಜೆ ಮತ್ತು ರಜಾ ದಿನಗಳ ವೇತನ ಸೌಲಭ್ಯವನ್ನು ರದ್ದುಗೊಳಿಸಿ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯ ಉಪ-ಕಾರ್ಯದರ್ಶಿಗಳು ನಡವಳಿಯಲ್ಲಿ ತಿಳಿಸಿದ್ದಾರೆ.
2020ರ ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ ನಿವೃತ್ತಿ ಹೊಂದುವ ನೌಕರರಿಗೆ, ಅವರು ನಿವೃತ್ತಿ ಹೊಂದಿದ ತಿಂಗಳಿನ ರಜಾ ದಿನಗಳ ವೇತನವನ್ನು ಕಡಿತ ಮಾಡುವುದಿಲ್ಲ. ಅವರಿಗೆ ಆ ತಿಂಗಳ ರಜಾ ದಿನಗಳ ವೇತನ ಸೌಲಭ್ಯ ಜಾರಿಯಲ್ಲಿರುತ್ತದೆ ಎಂದು ಅವರು ತಿಳಿಸಿದ್ದಾರೆ.

