‘ನನ್ನ ಮೇಲಿರುವ ಪ್ರಕರಣಗಳನ್ನು ಕೈಬಿಡಿ’ : ಕೇಂದ್ರ ಸರ್ಕಾರಕ್ಕೆ ವಿಜಯ್ ಮಲ್ಯ ಮನವಿ
ಬ್ಯಾಂಕಿನಿಂದ ಸಾವಿರಾರು ಕೋಟಿ ಸಾಲ ಪಡೆದು ಮರುಪಾವತಿಸದೆ ದೇಶ ಬಿಟ್ಟು ಪರಾರಿಯಾಗಿ ದೇಶಭ್ರಷ್ಟ ಆರ್ಥಿಕ ಅಪರಾಧಿ ಎನಿಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ, ನಾನು ಬ್ಯಾಂಕುಗಳಿಗೆ ಪಾವತಿಸಬೇಕಾದ ಎಲ್ಲಾ ಸಾಲದ ಮೊತ್ತವನ್ನು ತೆಗೆದುಕೊಳ್ಳಿ ಹಾಗೂ ನನ್ನ ಮೇಲಿರುವ ಪ್ರಕರಣಗಳನ್ನು ಕೈಬಿಡಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ವಿದೇಶಗಳಲ್ಲಿ ತಲೆಮರಿಸಿಕೊಂಡಿರುವ ವಿಜಯ್ ಮಲ್ಯ, ಸಾಂಕ್ರಾಮಿಕ ರೋಗ ಕೊರೋನಾವೈರಸ್ ಸಂಕಷ್ಟದ ನಡುವೆ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಕ್ಕಾಗಿ ಭಾರತ ಸರ್ಕಾರವನ್ನು ಶ್ಲಾಘಿಸಿದ ವಿಜಯ್ ಮಲ್ಯ ತಮ್ಮ ಬಾಕಿ ಹಣವನ್ನು ಪಾವತಿಸಲು ನಾನು ಪದೇ ಪದೇ ಪ್ರಸ್ತಾಪಿಸುತ್ತಿದ್ದು ಸರ್ಕಾರ ಅನುಮತಿಸದೆ ಇರುವುದರಿಂದ ನಿರಾಶರಾಗಿದ್ದಾರೆ.
Congratulations to the Government for a Covid 19 relief package. They can print as much currency as they want BUT should a small contributor like me who offers 100% payback of State owned Bank loans be constantly ignored ? Please take my money unconditionally and close.
— Vijay Mallya (@TheVijayMallya) May 14, 2020
ವಿಜಯ್ ಮಲ್ಯ ಬ್ರಿಟನ್ ಪ್ರಜೆಯಾಗಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಗಡಿಪಾರು ಮಾಡುವಂತೆ ಇಂಗ್ಲೆಂಡ್ ಸರ್ಕಾರವನ್ನು ಕೇಳಿಕೊಂಡಿತ್ತು. ಸುಮಾರು 9,000 ಕೋಟಿ ಸಾಲ ಮರುಪಾವತಿ ಮಾಡದ ಪ್ರಕರಣದಲ್ಲಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಲು 2018ರ ಡಿಸೆಂಬರ್ನಲ್ಲಿ ಬ್ರಿಟನ್ನ ವೆಸ್ಟ್ ಮಿನ್ಸ್ಟರ್ ನ್ಯಾಯಾಲಯ ಆದೇಶ ನೀಡಿತ್ತು. ಮಲ್ಯ ಗಡಿಪಾರಿಗೆ 2019ರ ಫೆಬ್ರವರಿಯಲ್ಲಿ ಬ್ರಿಟನ್ ಸರ್ಕಾರ ಸಮ್ಮತಿ ನೀಡಿತ್ತು. ಬಳಿಕ ಗಡಿಪಾರು ಆದೇಶ ಪ್ರಶ್ನಿಸಿ ಮಲ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು.
ಗಡಿಪಾರು ಆದೇಶ ಪ್ರಶ್ನಿಸಿ ಮಲ್ಯ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಬ್ರಿಟನ್ ಹೈಕೋರ್ಟ್ ಏ.4 ರಂದು ತಿರಸ್ಕರಿಸಿತ್ತು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸ್ಟೀಫನ್ ಒರ್ವಿನ್ ಮತ್ತು ಎಲಿಜಬೆತ್ ಲೇಯಿಂಗ್ ಅವರಿದ್ದ ದ್ವಿಸದಸ್ಯ ಪೀಠ ಮಲ್ಯ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾ ಮಾಡಿತ್ತು.
ವಿಜಯ್ ಮಲ್ಯ ಅವರಿಂದ 1, 145 ಬಿಲಿಯನ್ ಗ್ರೇಟ್ ಬ್ರಿಟನ್ ಪೌಂಡ್(1 GBP = 94.7784 INR) ಸಾಲದ ಮೊತ್ತ ಹಿಂಪಡೆಯಲು ಎಸ್ಬಿಐ ನೇತೃತ್ವದ ಭಾರತೀಯ ಬ್ಯಾಂಕುಗಳ ಒಕ್ಕೂಟ ಯತ್ನಿಸುತ್ತಿದೆ. ಸದ್ಯ ಜಾಮೀನಿನ ಮೇಲೆ ಹೊರಗಿರುವ ಮಲ್ಯರನ್ನು ಭಾರತಕ್ಕೆ ಕರೆ ತಂದು ವಿಚಾರಣೆ ನಡೆಸಲು ಅನುಮತಿ ಕೋರಿ ಜಾರಿ ನಿರ್ದೇಶನಾಲಯ, ಸಿಬಿಐ ಮನವಿ ಸಲ್ಲಿಸಿವೆ. ಸುಮಾರು 9,000 ಕೋಟಿ ಮನಿಲಾಂಡ್ರಿಂಗ್ ಪ್ರಕರಣದಲ್ಲಿ ಮಲ್ಯ ಪ್ರಮುಖ ಆರೋಪಿಯಾಗಿದ್ದಾರೆ.

