ಕೇಂದ್ರವು ರಾಜ್ಯ ಸರ್ಕಾರಗಳನ್ನು ಭಿಕ್ಷುಕರಂತೆ ನಡೆಸಿಕೊಳ್ಳತ್ತಿದೆ: ತೆಲಂಗಾಣ ಸಿಎಂ ಕೆಸಿಆರ್
ಕೊರೊನಾ ಸಂಕಷ್ಟದಿಂದ ಎದುರಾಗಿರುವ ದೇಶದ ಆರ್ಥಿಕ ಬಿಕ್ಕಟ್ಟನ್ನು ಸುಧಾರಿಸಲು ಕೇಂದ್ರ ಸರ್ಕಾರ ಹೊರಡಿಸಿರುವ ಪ್ಯಾಕೇಜ್ ಕುರಿತು ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಟೀಕಿಸಿದ್ದು, ಕೇಂದ್ರ ಸರ್ಕಾರವು ಅನುದಾನ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರಗಳನ್ನು ಭಿಕ್ಷುಕರಂತೆ ಕಾಣುತ್ತಿದೆ ಎಂದು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್ ಡಿಎ ಸರ್ಕಾರ ಘೋಷಿಸಿರುವ ಪ್ಯಾಕೇಜ್ ರಾಜ್ಯಗಳಿಗೆ ಭೀಕ್ಷೆ ನೀಡಿದಂತಿದೆ. ಜೊತೆಗೆ ಎಫ್ ಆರ್ ಬಿಎಂ ಕಾಯ್ದೆಯಡಿಯಲ್ಲಿ ರಾಜ್ಯದ ಸಾಲದ ಮಿತಿಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ವಿಧಿಸಿರುವ ವಿಧಾನಗಳು ಅಪಹಾಸ್ಯದಂತಿದೆ ಎಂದು ಕಿಡಿಕಾರಿದ್ದಾರೆ.
ಈ ಪ್ಯಾಕೇಜ್ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಜಿಡಿಪಿ ಪುನಜ್ಜೀವನಗೊಳಿಸಲು ಘೋಷಿಸಿದ್ದೇವೆ ಎಂದು ಹೇಳಿದ್ದಾರೆ ಆದರೆ ಈ ಪ್ಯಾಕೇಜ್ ಬೋಗಸ್ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊರೊನಾ ವೈರಸ್ ಭೀತಿಯಿಂದ ಲಾಕ್ ಡೌನ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪ್ಯಾಕೇಜ್ ಘೋಷಿಸಿದ್ದು, ಅದರ ಸದುಪಯೋಗ ಪಡೆಯಲು ವಿಧಿಸಿರುವ ಧೋರಣೆಗಳು ಸರ್ವಾಧಿಕಾರಿಯಾಗಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಮೇಲೆ ಹಿಡಿತ ಸಾಧಿಸುವ ಮನೋಭಾವ ಸರಿಯಲ್ಲ. ನಾವು ಸರ್ಕಾರವನ್ನು ನಡೆಸುತ್ತೇವೆ. ಆದರೆ ನಾವು ಕೇಂದ್ರಕ್ಕೆ ಅಧೀನರಲ್ಲ. ರಾಜ್ಯ ಸರ್ಕಾರಕ್ಕೂ ಹೆಚ್ಚಿನ ಜವಾಬ್ದಾರಿ ಇದೆ ಎಂದು ಹೇಳಿದ್ದಾರೆ.

