ಟಿಬೆಟ್‌ ಪ್ರತ್ಯೇಕ ರಾಷ್ಟ್ರಕ್ಕಾಗಿ ಅಮೆರಿಕಾ ಕಾಂಗ್ರೆಸ್‌ನಲ್ಲಿ ಮಸೂದೆ ಮಂಡನೆ!

ಚೀನಾದ ಹಿಡಿತದಲ್ಲಿರುವ ಟಿಬೆಟ್ ನ್ನು ಪ್ರತ್ಯೇಕ ರಾಷ್ಟ್ರವೆಂದು ಪರಿಗಣಿಸುವ ಮಸೂದೆಯನ್ನು ಅಮೆರಿಕಾದ ಕಾಂಗ್ರೆಸ್ ನಲ್ಲಿ ಮಂಡಿಸಲಾಗಿದೆ.

ಅಮೆರಿಕಾ ಸೇನೆಯಲ್ಲಿದ್ದ ಹಾಗೂ ಪೆನ್ಸಲ್ವೇನಿಯಾದ ರಿಪಬ್ಲಿಕನ್ ಪಕ್ಷದ ಸಂಸದನೂ ಆಗಿರುವ ಸ್ಕಾಟ್ ಪೆರ್ರಿಯವರು ಟಿಬೆಟ್‌ನ್ನು ಚೀನಾದ ಹಿಡಿತದಿಂದ ಹೊರತಂದು ಪ್ರತ್ಯೇಕ ರಾಷ್ಟ್ರವೆಂದು ಪರಿಗಣಿಸುವ ಮಸೂದೆಯನ್ನು ಅಮೆರಿಕಾದ ಕಾಂಗ್ರೆಸ್‌ (ಸದನ)ನಲ್ಲಿ ಮಂಡಿಸಿದ್ದಾರೆ.

ಟಿಬೆಟ್ ಅಷ್ಟೇ ಅಲ್ಲದೇ ಹಾಂಗ್ ಕಾಂಗ್ ಕೂಡ ಪ್ರತ್ಯೇಕರಾಷ್ಟ್ರವೆಂದು ಪರಿಗಣಿಸಬೇಕು ಎಂದು ಮಸೂದೆಯಲ್ಲಿ ಕಾಂಗ್ರೆಸ್‌ನ ಮುಂದಿಟ್ಟಿದ್ದಾರೆ.

ಕಾಂಗ್ರೆಸ್ ನಲ್ಲಿ ಮಂಡನೆಯಾಗಿರುವ ಮಸೂದೆಯು ಈ ಎರಡೂ ಪ್ರದೇಶಗಳನ್ನು ಪ್ರತ್ಯೇಕ ರಾಷ್ಟ್ರಗಳೆಂದು ಪರಿಗಣಿಸುವಂತೆ ವಿಶ್ವಸಂಸ್ಥೆಗೆ ಒತ್ತಡ ತರಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನೆರವಾಗಲಿದೆ.

ವಿಶ್ವದ ದೊಡ್ಡಣ್ಣನ ಪಟ್ಟಕ್ಕಾಗಿ ಯತ್ನಿಸುತ್ತಿರುವ ಚೀನಾ ಈಗಾಗಲೇ ಅಮೆರಿಕದೊಂದಿಗೆ ಶೀಥಲ ಸಮರಕ್ಕೆ ಇಳಿದಿದೆ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಅಮೆರಿಕಾವು ಚೀನಾ ಹಾಗೂ ಚೀನಾ ಬೆಂಬಲಿಸುವವರ ವಿರುದ್ಧ ಕಿಡಿ ಕಾರಲು ಶುರು ಮಾಡಿದ್ದು,  ಅಮೆರಿಕ-ಚೀನಾ ಎರಡೂ ರಾಷ್ಟ್ರಗಳು ಕೊರೊನಾ ವಿಚಾರದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿಕೊಂಡಿವೆ. ಇದೇ ಸಂದರ್ಭದಲ್ಲಿ ಟಿಬೆಟ್‌ ಮತ್ತು ಹಾಂಗ್‌ಕಾಂಗ್‌ಗಳನ್ನು ಪ್ರತ್ಯೇಕ ರಾಷ್ಟ್ರವೆಂದು ಪರಿಗಣಿಸುವ ಮಸೂದೆ ಅಮೆರಿಕಾ ಕಾಂಗ್ರೆಸ್‌ ಮೂಂದೆ ತರಲಾಗಿದೆ.

ಈ ಮಸೂದೆಗೆ ಅಮೆರಿಕಾ ಅಧ್ಯಕ್ಷ ಟ್ರಂಪ್‌ ಸಹಿ ಮಾಡಿದ ಬಳಿಕ ವಿಶ್ವಸಂಸ್ಥೆಯ ಮೇಲೆ ಒತ್ತಡ ತರುವ ಕೆಲಸಕ್ಕೆ ಟ್ರಂಪ್‌ ಮುಂದಾಗಬಹುದು. ಅದಕ್ಕಾಗಿಯೇ ಹಾಂಗ್‌ ಕಾಂಗ್‌ ವಿಚಾರದಲ್ಲಿ ಚೀನಾ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಟ್ರಂಪ್‌ ಹೇಳಿದ್ದಾರೆ.

ಅಮೆರಿಕನ್ನರ ಈ ನಡೆಗೆ ಟಿಬೆಟಿಯನ್ನರು ಸಂತಸ ವ್ಯಕ್ತಪಡಿಸಿದ್ದು, ಸಂಪೂರ್ಣ ಟೆಬೆಟ್ ನ್ನು ಪ್ರತ್ಯೇಕ ರಾಷ್ಟ್ರವೆಂದು ಪರಿಗಣಿಸಬೇಕೆಂದು ಟಿಬೆಟ್ ನ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿರುವವರು ಆಗ್ರಹಿಸಿದ್ದಾರೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights