ಸುಗಂಧಿ ಬೇರು-1 : ಕಪಟರಾಳ ಕೃಷ್ಣರಾಯರು ಅನುವಾದಿಸಿದ ನೆಹರೂ ಅವರ ‘ಮಗಳಿಗೆ ತಂದೆಯ ಓಲೆಗಳು’

ನನಗೆ ಪಿಎಚ್‍ಡಿಗಾಗಿ ಅಧ್ಯಯನ ಮಾಡಬೇಕೆನ್ನುವ ಹಂಬಲ ಅದು ಹೇಗೋ ನನ್ನ ತಲೆಯೊಳಗೆ ಹೊಕ್ಕಿದ್ದು 2010ರಲ್ಲಿ. ನಾನಾಗ ಕುಂದಾಪುರದಲ್ಲಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕ. ಆಗ ಸಂಶೋಧನೆಗಾಗಿ ಯಾವ ವಿಷಯವನ್ನು ಆಯ್ದುಕೊಳ್ಳುವುದು ಎಂಬುದರ ಬಗ್ಗೆ ನಂಗೇನೂ ಐಡಿಯಾ ಇರಲಿಲ್ಲ. ಆ ಹೊತ್ತಿನಲ್ಲಿ ನನ್ನ ತಲೆಯಂತು ಗೊಂದಲದ ಗೂಡಾಗಿತ್ತು. ನನ್ನ ಸಂಶೋಧನೆಗೆ ಮಾರ್ಗದರ್ಶಕರಾದವರು ಕನ್ನಡ ನಾಡಿನ ಪ್ರಖ್ಯಾತ ಸಂಶೋಧಕರು ಮತ್ತು ವಿಮರ್ಶಕರಾದ ರಹಮತ್ ತರೀಕೆರೆಯವರು. ವಿದ್ಯಾರ್ಥಿಗಳೊಂದಿಗೆ ಸದಾ ಸಂವಾದ ನಡೆಸುವುದರಲ್ಲಿ ನಿಸ್ಸೀಮರಾದ ಮೇಷ್ಟ್ರ ಬತ್ತಳಿಕೆಯಲ್ಲಿ ಪಿಎಚ್‍ಡಿಗಾಗಿ ನೂರಾರು ವಿಷಯಗಳು ತುಂಬಿದ್ದವು. ನನ್ನ ಮೇಲೆ ಒಂದೊಂದಾಗಿ ಪ್ರಯೋಗ ಮಾಡಿದರು. ಆಗ ಸಂಶೋಧನೆಯ ಸ್ವರೂಪ ಮತ್ತು ವಿಧಾನದ ಬಗ್ಗೆ ಹೇಳುವಾಗಲೆಲ್ಲ ಮೇಷ್ಟ್ರ ಮಾತಿನಲ್ಲಿ ಬಿಎಂಶ್ರೀ, ಕುವೆಂಪು, ಶಂಬಾ ಜೋಶಿ, ಡಿ.ಆರ್. ನಾಗರಾಜ, ಕಪಟರಾಳ ಕೃಷ್ಣರಾಯ – ಇನ್ನೂ ಮೊದಲಾದವರ ಬಗ್ಗೆ ಚರ್ಚೆಗಳು ಸಾಮಾನ್ಯವಾಗಿದ್ದವು. ನಾನು ಕಪಟರಾಳರ ಬಗ್ಗೆ ಅದೇ ಮೊದಲ ಬಾರಿಗೆ ಕೇಳಿದ್ದು. ನಾನು ಓದಿದ ಕಾಲೇಜು ಮತ್ತು ವಿಶ್ವವಿದ್ಯಾಲಯದ ಯಾವುದೇ ಪಠ್ಯದಲ್ಲಿ ಅವರ ಲೇಖನಗಳು ಇದ್ದಿರಲಿಲ್ಲ. ಅವರ ಸಂಶೋಧನ ಕೃತಿಗಳು ದೊರಕಲಿಲ್ಲ; ಅವು ಇಂದಿಗೂ ದುರ್ಲಭವಾಗಿವೆ. ಅದೇಕೋ ಅವರ ಸಂಶೋಧನ ಕೃತಿಗಳು ಹೆಚ್ಚು ಚರ್ಚೆಗೆ ಒಳಪಟ್ಟಂತೆ ಕಾಣುವುದಿಲ್ಲ.

ಈಗ ಕಪಟರಾಳರ ಹೆಸರು ಬಹುತೇಕವಾಗಿ ಮರೆವಿಗೆ ಸಂದಿದೆ. ಆದರೆ ಅವರು ಕರ್ನಾಟಕದ ಚರಿತ್ರೆ, ಸುರಪುರ ಸಂಸ್ಥಾನ, ನಾಥ ಪಂಥ, ಚೈತನ್ಯ ಪಂಥ, ಲಾಕುಳ ಶೈವ ಆಚರಣೆಗಳ ಬಗ್ಗೆ ಸಾಕಷ್ಟು ವಿದ್ವತ್‍ಪೂರ್ಣ ಮತ್ತು ಖಚಿತವಾದ ನೆಲೆಯಿಂದ ಬರೆದಿದ್ದಾರೆ; ಕರ್ನಾಟಕ ಸಾಂಸ್ಕೃತಿಕ ಚರಿತ್ರೆಯಲ್ಲಿ ಸಿದ್ಧರಾಮ, ಅಲ್ಲಮ, ಬಸವಣ್ಣ, ಬಿಜ್ಜಳ, ಪುರಂದರದಾಸ, ಹರಿಹರ-ಮೊದಲಾದವರ ಬಗ್ಗೆ ಸಂಶೋಧನ ಲೇಖನಗಳನ್ನು ಬರೆದು ತಮ್ಮ ಪ್ರಶ್ನೆಗಳನ್ನು, ತಕರಾರುಗಳನ್ನು ಎತ್ತಿದವರಾಗಿದ್ದಾರೆ; ಸನ್ನತಿಯ ಸಾಂಸ್ಕೃತಿಕ ಮಹತ್ವವನ್ನು ಗುರುತಿಸಿದ ಮೊದಲ ಸಂಶೋಧಕರಾಗಿದ್ದಾರೆ. ಯಾವ ನಿಟ್ಟಿನಿಂದ ನೋಡಿದರೂ ಕರ್ನಾಟಕ ಸಂಸ್ಕೃತಿಯ ಸಂಶೋಧನೆಯಲ್ಲಿ ಕಪಟರಾಳರು ಪ್ರಾತಃಸ್ಮರಣೀಯರಾಗಿದ್ದಾರೆ. ಅವರದ್ದು ನೇರ ನಡೆ ನುಡಿಯ ವ್ಯಕ್ತಿತ್ವ; ಅವರು ಸನಾತನ ಸಂಪ್ರದಾಯಗಳ ಕಡು ವಿರೋಧಿಯಾಗಿದ್ದರು; ಅಷ್ಟೇ ನಿಷ್ಠುರವಾದಿಯೂ ಹೌದು. ಯಾವುದನ್ನೇ ಆಗಲಿ ಸೂಕ್ಷ್ಮವಾಗಿ ಒರೆಗೆ ಹಚ್ಚಿ ನೋಡದೇ ಅಷ್ಟು ಸುಲಭದಲ್ಲಿ ಒಪ್ಪಿಕೊಳ್ಳುವ ಮನೋಧರ್ಮ ಅವರದ್ದಲ್ಲ. ಬರಿ ಕಲಬುರ್ಗಿ ಮಾತ್ರವಲ್ಲ, ಅವರು ಕನ್ನಡ ನಾಡಿನ ಉದ್ಧಾಮ ಸಂಶೋಧಕರು. ಕಪಟರಾಳರ ‘ಕರ್ನಾಟಕ ಲಾಕುಳ ಶೈವರ ಇತಿಹಾಸ’(1955), ‘ಕರ್ನಾಟಕ ಸಂಸ್ಕೃತಿ ಸಂಶೋಧನೆ’(1970) ಮತ್ತು ‘ಸುರಪುರ ಸಂಸ್ಥಾನದ ಇತಿಹಾಸ’(1977) – ಸಂಶೋಧನ ಕೃತಿಗಳನ್ನು ಮರು ಓದು, ಮರು ಅಧ್ಯಯನ ನಡೆಸುವ ಅಗತ್ಯವಿದೆ.

ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ‘ಹಾಲಗಡಲಿ’ಯಲ್ಲಿ ಹುಟ್ಟಿ ಬೆಳೆದ ಕಪಟರಾಳ ಕೃಷ್ಣರಾಯರು(1889-1976), ಅಂದು ಕಲಬುರ್ಗಿ ಪ್ರಾಂತವು ಹೈದರಾಬಾದ್ ನಿಜಾಂರ ಆಳ್ವಿಕೆಗೆ ಒಳಪಟ್ಟಿದ್ದರಿಂದ ಸಹಜವಾಗಿಯೇ ಉರ್ದು, ಮರಾಠಿ ಮತ್ತು ಫಾರಸಿ ಭಾಷೆಗಳಲ್ಲಿಯೇ ಶಿಕ್ಷಣವನ್ನು ಪಡೆಯಬೇಕಾಯಿತು. ‘ಕಪಟರಾಳ’ ಎನ್ನುವುದು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಪತ್ತಿಕೊಂಡ ತಾಲೂಕಿನಲ್ಲಿರುವ ಊರು; ಅವರ ಪೂರ್ವಜರ ಮೂಲವಾಗಿದೆ. ವಕೀಲರಾಗಿದ್ದ ಅವರು ಸಂಸ್ಕೃತ, ಮರಾಠಿ, ಉರ್ದು, ಫಾರಸಿ ಮತ್ತು ಆಂಗ್ಲ ಭಾಷೆಯಲ್ಲಿ ಬಹುಶ್ರುತ ಪಂಡಿತರು; ಆದರೆ ಕಪಟರಾಳರಿಗೆ ಕನ್ನಡ ಬರುತ್ತಿರಲಿಲ್ಲ. ಅವರು ತಮ್ಮ ಮೂವತ್ತಮೂರನೇ ವಯಸ್ಸಿನಲ್ಲಿ ಕನ್ನಡ ಭಾಷೆಯನ್ನು ಕಲಿಯುವ ಹಠ ತೊಡುತ್ತಾರೆ; ಸ್ವಯಂ ಪ್ರಯತ್ನದಿಂದ ಕನ್ನಡ ಭಾಷೆಯನ್ನು ಕಲಿತು ಸಂಶೋಧನ ಲೇಖನಗಳನ್ನು ಪ್ರಕಟಿಸುತ್ತಾರೆ. ಕಲಬುರ್ಗಿ ಪ್ರದೇಶದಲ್ಲಿ ಕನ್ನಡ ಭಾಷೆಯ ಕಲಿಕೆಗಾಗಿ ಸಂಘರ್ಷ ನಡೆಸುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ 1929ರಲ್ಲಿ ಕಲಬುರ್ಗಿಯಲ್ಲಿ ಬಿ.ಎಂ.ಶ್ರೀಯವರ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುವುದರಲ್ಲಿ ಪ್ರಧಾನ ಪಾತ್ರವಹಿಸುತ್ತಾರೆ. ರಾಯಚೂರಿನಲ್ಲಿ ಪಂಜೆ ಮಂಗೇಶರಾಯರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಜರುಗುವಂತೆ ಮಾಡುತ್ತಾರೆ. ಮರಾಠಿ ಪ್ರಭಾವದ ಹೊಡೆತಕ್ಕೆ ನಲುಗಿ ಹೋಗಿದ್ದ ಕನ್ನಡ ಭಾಷೆ ಮತ್ತು ಸಾಹಿತ್ಯದ ಸರ್ವತೋಮುಖ ಸಂವರ್ಧನೆಗಾಗಿ ಶಾಂತ ಕವಿಗಳು(ಸಕ್ಕರಿ ಬಾಳಾಚಾರ್ಯ) ಧಾರವಾಡದಲ್ಲಿ ಮತ್ತು ಬಿ.ಎಂ.ಶ್ರೀಯವರು ಅನುವಾದ ಮತ್ತು ಭಾಷಣಗಳ ಮೂಲಕ ಮೈಸೂರು ಭಾಗದಲ್ಲಿ ಕನ್ನಡ ಸಾಹಿತ್ಯಕ್ಕೆ ನೀಡಿದ ಹೊಸ ಸಂವೇದನೆಯನ್ನು ಕಪಟರಾಳರು ಕಲಬುರ್ಗಿ ಪ್ರಾಂತ್ಯದಲ್ಲಿ ಕನ್ನಡ ಭಾಷೆಯ ಅಭಿವೃದ್ಧಿಗಾಗಿ ತಮ್ಮ ಬದುಕನ್ನು ಸವೆಸಿದರು. ಅವರು ಹೈದರಾಬಾದ ಕರ್ನಾಟಕದಲ್ಲಿ ‘ಕನ್ನಡ ಮಾತು ತಲೆ ಎತ್ತುವ’ ಹಾಗೆ ಅಹರ್ನಿಶಿ ಶ್ರಮಿಸಿದ್ದು ಚಾರಿತ್ರಿಕವಾಗಿ ಮಹತ್ವದ್ದಾಗಿದೆ.

ಕಪಟರಾಳರು ನಿಸ್ಸಂದೇಹವಾಗಿ ಅಪ್ಪಟ ಕನ್ನಡ ಭಾಷಾಭಿಮಾನಿಗಳು; ಕನ್ನಡ ಸಂಶೋಧನ ಲೋಕದ ಎರಡನೇ ತಲೆಮಾರಿನ ಸಂಶೋಧಕರು; ಅವರು ಸಂಸ್ಕೃತಿ ಚಿಂತಕರಾಗಿ, ಇತಿಹಾಸತಜ್ಞರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಗಾಂಧಿವಾದಿಗಳಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಇದಷ್ಟೇ ಅಲ್ಲದೇ ಅವರೊಬ್ಬ ಅನುವಾದಕರೂ ಹೌದು. ಜವಾಹರಲಾಲ್ ನೆಹರು ಅವರ “ಲೆಟರ್ಸ್ ಫ್ರಂ ಫಾದರ್ ಟು ಹಿಸ್ ಡಾಟರ್”(1929) ಕೃತಿಯನ್ನು ಕಪಟರಾಳರು “ಮಗಳಿಗೆ ತಂದೆಯ ಓಲೆಗಳು” ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಇದನ್ನು ಮಂಗಳೂರು ಗೊವಿಂದರಾಯರು ತಮ್ಮ ಹಬ್ಬಳ್ಳಿಯ ‘ಸಾಹಿತ್ಯ ಭಾಂಡಾರ’ ಪ್ರಕಾಶನದ ಮೂಲಕ 1941ರಲ್ಲಿ ಪ್ರಕಟಿಸಿದ್ದಾರೆ.

ನೆಹರು ಅವರ ಪುಸ್ತಕ ಪ್ರಕಟವಾದ ಆರು ವರ್ಷಗಳಲ್ಲಿಯೇ ಕಪಟರಾಳರು ಅದನ್ನು ಕನ್ನಡಕ್ಕೆ ಭಾಷಾಂತರಿಸುತ್ತಾರೆ. ಆಂಗ್ಲ ಪುಸ್ತಕವನ್ನು ಒದಗಿಸಿಕೊಟ್ಟು, ಭಾಷಾಂತರಕ್ಕೆ ಪ್ರೇರೇಪಿಸಿದವರು ಕಪಟರಾಳರ ಮಿತ್ರರಾದ ಹನುಮಸಾಗರ ವಾಜೇಂದ್ರರಾಯರು. ಇದನ್ನು ಕನ್ನಡಕ್ಕೆ ಭಾಷಾಂತರಿಸಲು ನೆಹರು ಅವರಿಂದ ಅನುಮತಿ ಕೊಡಿಸುವುದರಲ್ಲಿ ಹರ್ಡೇಕರ್ ಮಂಜಪ್ಪ ನೆರವಾಗುತ್ತಾರೆ. ಇದು ಕನ್ನಡದಲ್ಲಿ ಭಾಷಾಂತರಗೊಂಡು ಆರು ವರ್ಷಗಳಾಗಿದ್ದರು ಕೂಡ ಪ್ರಕಟಿಸುವವರಿಲ್ಲದೇ ಹಸ್ತಪ್ರತಿಯಲ್ಲಿಯೇ ಉಳಿದುಕೊಂಡಿತ್ತು. ಗೋವಿಂದರಾಯರು ಯಾವುದೋ ಕೆಲಸಕ್ಕಾಗಿ ಕಲಬುರ್ಗಿಗೆ ಬಂದಾಗ ಕಪಟರಾಳರ ಮನೆಯಲ್ಲಿ ಅತಿಥಿಯಾಗಿ ತಂಗುವ ಅವಕಾಶ ಕೂಡಿಬರುತ್ತದೆ; ಆಗ ಕಪಟರಾಳರು ಈ ಕೃತಿಯನ್ನು ಮುದ್ರಿಸುವುದಾದರೆ ಕೊಡುವುದಾಗಿ ಹೇಳುತ್ತಾರೆ. ‘ನೀರಿಳಿಯದ ಗಂಟಲಲ್ಲಿ ಕಡುಬವನ್ನು ತುರುಕಿದಂತೆ’, ಲಲಿತ ಸಾಹಿತ್ಯಕ್ಕೆ ನಮ್ಮಲ್ಲಿ ಪ್ರೋತ್ಸಾಹ ಇಲ್ಲದಿರುವಾಗ ಭಾಷೆ, ಜನಾಂಗ, ಸಂಸ್ಕೃತಿ, ಸೂರ್ಯ, ಚಂದ್ರರ ವಿಷಯವನ್ನೊಳಗೊಂಡ ಇಂತಹ ಪುಸ್ತಕಕ್ಕೆ ಕನ್ನಡದಲ್ಲಿ ಮನ್ನಣೆ ದೊರೆಯಬಹುದೇ ಎಂದು ಗೋವಿಂದರಾಯರು ಹಿಂಜರಿಯುತ್ತಾರೆ. ಕನ್ನಡದಲ್ಲಿ ಇಂತಹ ವಿಷಯವನ್ನು ಕುರಿತು ಪುಸ್ತಕವೇ ಇರಲಿಲ್ಲವೆಂದು ಗೋವಿಂದರಾಯರು ಹೇಳಿಕೊಂಡಿದ್ದಾರೆ. ಪ್ರಾಯಶಃ ಕನ್ನಡದಲ್ಲಿ ಇದು ನೆಹರು ಅವರ ಮೊದಲ ಪುಸ್ತಕ ಅನಿಸುತ್ತದೆ.

ಜವಾಹರಲಾಲ್ ನೆಹರು ತಮ್ಮ ಮಗಳು ಇಂದಿರಾ ಹತ್ತು ವರ್ಷದ ಹುಡುಗಿಯಾಗಿದ್ದಾಗ ಬೇಸಿಗೆ ರಜೆಯಲ್ಲಿ ಮಸ್ಸೂರಿಗೆ ಹೋಗಿದ್ದ ಸಂದರ್ಭದಲ್ಲಿ ಇಂಗ್ಲಿಷಿನಲ್ಲಿ ಬರೆದ ಪತ್ರಗಳ ಗುಚ್ಛವಿದು. ನೆಹರು ಈ ಪತ್ರಗಳಲ್ಲಿ ತಮ್ಮ ಮಗಳಿಗೆ ಪ್ರಾಚೀನ ಕಾಲದ ಇತಿಹಾಸ, ಭೂಮಿಯ ರಚನೆ, ನಾಗರಿಕತೆಯ ಉದಯ, ಭಾಷೆಯ ಉಗಮ ಮೊದಲಾದ ವಿಷಯಗಳನ್ನು ಕುರಿತು ಸರಳವಾಗಿ ವಿವರಿಸಿದ್ದಾರೆ. ನೆಹರು ಅವರಿಗೆ ಮಕ್ಕಳ ಶಿಕ್ಷಣದ ಬಗ್ಗೆ ಅಪಾರ ಕಾಳಜಿಯಿತ್ತು. ಈ ಕೃತಿಯು ಬಹಳ ಬೇಗ ಜನಪ್ರಿಯವಾಗುತ್ತದೆ. ಇದನ್ನು ಹಿಂದಿಯ ಖ್ಯಾತ ಲೇಖಕರಾದ ಮುನ್ಶಿ ಪ್ರೇಮಚಂದರು 1931 ರಲ್ಲಿ “ಪಿತಾ ಕೇ ಪತ್ರ ಪುತ್ರಿ ಕೇ ನಾಮ್” ಎಂದು ಹಿಂದಿಗೆ ಭಾಷಾಂತರ ಮಾಡುತ್ತಾರೆ. ಈ ಕೃತಿಯು ಜಗತ್ತಿನ ಅನೇಕ ಭಾಷೆಗಳಿಗೆ ಅನುವಾದಗೊಂಡಿದೆ.

‘ಮಗಳಿಗೆ ತಂದೆಯ ಓಲೆಗಳು’ ಪುಸ್ತಕವನ್ನು 1948 ರಲ್ಲಿ ಚಿತ್ರಗಳನ್ನು ಸೇರಿಸಿ ಪರಿಷ್ಕರಿಸಿ ಮುದ್ರಿಸಲಾಗಿದೆ. 1946ರ ಆವೃತ್ತಿಯನ್ನು ಆಧರಿಸಿ ಕನ್ನಡಿಸಲ್ಪಟ್ಟಿದೆ ಎಂದು ಪ್ರಕಾಶಕರ ಮಾತುಗಳಲ್ಲಿ ತಿಳಿಸಿದ್ದು, “ಈ ವರೆಗಿನ ನಾಲ್ಕು ಮುದ್ರಣಗಳ ಶೈಲಿ ಸುಪ್ರಸಿದ್ಧ ವಿದ್ವಾಂಸರಾದ, ಐತಿಹಾಸಿಕ ಸಂಶೋಧಕರಾದ, ಹೈದರಾಬಾದ್ ಪ್ರಜೆಗಳ ಆಂದೋಲನದಲ್ಲಿ ಒಬ್ಬ ಪ್ರಮುಖ ಮುಂದಾಳಾದ ಕಲ್ಲಬುರುಗೆಯ ಶ್ರೀ॥ ಕಪಟರಾಳ ಕೃಷ್ಣರಾಯರದು – ಎಂದರೆ ಉತ್ತರ ಕರ್ನಾಟಕದ್ದು. ಈ ಶೈಲಿಯಲ್ಲಿ ಅಖಿಲ ಕರ್ನಾಟಕದ ದೃಷ್ಟಿ ಇದ್ದರೂ ಅದರಲ್ಲಿ ಪ್ರಾದೇಶಿಕ ಪ್ರಭಾವ ಎದ್ದು ಕಾಣುವುದು ಸ್ವಾಭಾವಿಕ. ಈ ಐದನೆಯ ಆವೃತ್ತಿಯಲ್ಲಿ ಭಾಷಾಂತರಕಾರರು ಮೈಸೂರಿಗರಾದುದರಿಂದ ಈ ಶೈಲಿಯಲ್ಲಿ ಅಲ್ಲಿಯ ಪ್ರಭಾವ ತಕ್ಕಷ್ಟು ತೋರಿವರುವುದು ಅಸ್ವಾಭಿಕವಲ್ಲ” ಎಂದು ಮಂಗಳೂರು ಗೋವಿಂದರಾಯರು ಬರೆದುಕೊಂಡಿದ್ದಾರೆ. ಈ ಆವೃತ್ತಿಯನ್ನು ಕನ್ನಡಿಸಿರುವವರು ಶ್ರೀ ಹೊಯ್ಸಳ.

ಇಂದಿನ ಅತ್ಯಾಧುನಿಕ ತಂತ್ರಜ್ಞಾನದ ಯುಗದಲ್ಲಿ ಪತ್ರ ಬರವಣಿಗೆಯು ಬಹುತೇಕವಾಗಿ ನಿಂತು ಹೋಗಿದೆ. ಆದರೆ ಒಂದು ಕಾಲದಲ್ಲಿ ಪತ್ರ ಬರಹವು ಬರಿ ವ್ಯವಹಾರದ ಸಾಧನವಾಗಿರಲಿಲ್ಲ; ಅದು ಮಕ್ಕಳ ಮನಸ್ಸಿನ ಸಹಜ ಕುತೂಹಲವನ್ನು ತಣಿಸುವ ಮತ್ತು ವಿಶ್ವದ ತಿಳಿವನ್ನು ಹೆಚ್ಚಿಸುವ ಪರಿಣಾಮಕಾರಿ ಮಾಧ್ಯಮವೂ ಆಗಿತ್ತು ಎನ್ನುವುದಕ್ಕೆ ನೆಹರು ಅವರ ಈ ಪತ್ರಗಳು ನಿದರ್ಶನವಾಗಿವೆ. ಕಪಟರಾಳರ ಅನುವಾದಿತ ಕೃತಿಯು ಕನ್ನಡ ನಾಡಿನ ಮಕ್ಕಳಿಗೆ ಅರ್ಪಿತವಾಗಿದೆ.

ಸುಭಾಷ್ ರಾಜಮಾನೆ, ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ  ಕೆಲಸ ನಿರ್ವಹಿಸುತ್ತಿರುವ ಸುಭಾಷ್ ಅವರು ಮೂಲತಃ ಬೆಳಗಾವಿಯವರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಕನ್ನಡ ವಿಮರ್ಶೆಯಲ್ಲಿ ಜಾತಿ ಆಯಾಮಗಳ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ.ಪದವಿ ಗಳಿಸಿದ್ದಾರೆ. ಕನ್ನಡ ಇಂಗ್ಲಿಷ್‌, ಮರಾಠಿ, ಹಿಂದಿ ಭಾಷೆಗಳನ್ನು ಬಲ್ಲ ಸುಭಾಷ್ ಅವರು ಸಿನೆಮಾ ವಿಮರ್ಶೆಗಳನ್ನು ಬರೆದಿದ್ದಾರೆ. ಅನುವಾದದಲ್ಲಿ ವಿಶೇಷ ಆಸಕ್ತಿ ಹೊಂದಿರುವ  ಅವರು ದಿ ಆರ್ಟಿಸ್ಟ್‌ ಸಿನಿಮಾದ ಚಿತ್ರಕತೆಯನ್ನು,  ವಿಕ್ಟರ್‌ ಫ್ರಾಂಕ್‌ಲ್ ನ ಮ್ಯಾನ್ ಸರ್ಚ್ ಫಾರ್ ಮೀನಿಂಗ್ ಕೃತಿಯನ್ನು ’ಬದುಕಿನ ಅರ್ಥವನು ಹುಡುಕುತ್ತ..’ಶೀರ್ಷಿಕೆಯ ಅಡಿಯಲ್ಲಿ, ಗ್ರೀಕ್ ಪಿಲಾಸಫರ್ ಎಪಿಕ್ಟೆಟಸ್ ಬರಹಗಳನ್ನು ಮತ್ತು ತಿಚ್ ನ್ಹಾತ್ ಹಾನ್ ನ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಳೆಯ, ಅಪರೂಪದ ಪುಸ್ತಕಗಳನ್ನು ಸಂಗ್ರಹಿಸಿ ಅವುಗಳ ಸಾಂಸ್ಕೃತಿಕ ಮಹತ್ವಗಳನ್ನು ಚರ್ಚಿಸುವುದು ಕೂಡ ಸುಭಾಷ್ ಅವರ ನೆಚ್ಚಿನ ಹವ್ಯಾಸ.

-ನಿಮ್ಮ ಪ್ರತಿಕ್ರಿಯೆಗಳನ್ನು [email protected], [email protected]ಇಲ್ಲಿಗೆ ಬರೆಯಿರಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights