ನಾವೇನು ಪ್ರಾಣಿಗಳೇ? ನೀರು ಆಹಾರ ಕೊರತೆಯ ವಿರುದ್ಧ ಸಿಡಿದೆದ್ದ ಉತ್ತರಪ್ರದೇಶ ಕೋವಿಡ್-19 ಆಸ್ಪತ್ರೆಯ ರೋಗಿಗಳು
ಉತ್ತರಪ್ರದೇಶದ ಪ್ರಯಾಗ್ ರಾಜ್ ಜಿಲ್ಲೆಯ ಸರ್ಕಾರಿ ಅಸ್ಪತ್ರೆಗೆ ದಾಖಲಿಸಲಾಗಿದ್ದ ರೋಗಿಗಳು ಆಹಾರ ಮತ್ತು ನೀರಿನ ಕೊರತೆಯ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಿದ್ದಾರೆ ಎಂದು ಎನ್ ಡಿ ಟಿ ವಿ ವರದಿ ಮಾಡಿದೆ. ಇದರ ಬಗ್ಗೆ ಮಾಡಲಾಗಿರುವ ಮೂರು ನಿಮಿಷದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ.
ರಾಜ್ಯದ ಕೊತ್ವ ಬನಿ ಪ್ರದೇಶದ ಎಲ್1 ವಿಭಾಗದ ಕೋವಿಡ್-19 ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಅಲ್ಲಿ ತಮ್ಮನ್ನು ಪ್ರಾಣಿಗಳಿಗಿಂತ ಕಡೆಯಾಗಿ ಕಾಣುತ್ತಿರುವುದಾಗಿ ಸೋಂಕಿತರು ದೂರಿದ್ದಾರೆ. “ನಮ್ಮನ್ನ ಪ್ರಾಣಿಗಳ ರೀತಿ ಕಾಣುತ್ತೀರಿ, ನಾವೇನು ಪ್ರಾಣಿಗಳೇ? ನಮಗೆ ನೀರು ಬೇಡವೇ? ಜನ ಇಲ್ಲಿ ನೀರಿಲ್ಲದೆ ಸಾಯುತ್ತಿದ್ದಾರೆ” ಎಂದು ರೋಗಿಯೊಬ್ಬರು ಸಿಟ್ಟಿನಿಂದ ಹೇಳಿದ್ದು ವರದಿಯಾಗಿದೆ.
ಆಸ್ಪತ್ರೆಯಲ್ಲಿ ನೀರು ಸ್ಥಗಿತಗೊಂಡು, ಎರಡು ಘಂಟೆಯ ನಂತರವೂ ಅಧಿಕಾರಿಗಳು ಅದನ್ನು ಸರಿಪಡಿಸದೆ ಹೋದ ಮೇಲೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಸರಿಯಾದ ಆಹಾರ ಸಿಗುತ್ತಿಲ್ಲ ಮತ್ತು ನೀಡುವ ಆಹಾರ ಸರಿಯಾಗಿ ಬೆಂದಿರುವುದಿಲ್ಲ ಎಂದು ಕೂಡ ರೋಗಿಗಳು ಆರೋಪಿಸಿದ್ದಾರೆ.
ಈಮಧ್ಯೆ ಒಳ್ಳೆಯ ಸೌಲಭ್ಯ ನೀಡುವಂತೆ ಅಧಿಕಾರಿಗಳಿಗೆ ಕೋರಿ ಅದಕ್ಕಾಗಿ ಹಣ ನೀಡುಲು ಸಿದ್ಧರಿರುವುದಾಗಿಯೂ ಹಲವರು ಹೇಳಿದ್ದಾರೆ “ನಿಮ್ಮಲ್ಲಿ ಇಲ್ಲದಿದ್ದರೆ ನಮ್ಮಿಂದ ಹಣ ತೆಗೆದುಕೊಳ್ಳಿ” ಎಂದು ಮಹಿಳಾ ರೋಗಿಯೊಬ್ಬರು ಹೇಳಿದ್ದು “ಇದೇ ಪರಿಸ್ಥಿತಿ ಮುಂದುವರೆದರೆ ನಾವು ಮನೆಗೆ ತೆರಳುವುದಾಗಿ ಅಧಿಕಾರಿಗಳಿಗೆ ಹೇಳಿ” ಎಂದು ಕೂಡ ಆ ಮಹಿಳೆ ಹೇಳಿರುವುದು ವರದಿಯಾಗಿದೆ.
"Are we animals?": #COVID19 patients on "inhuman conditions" at Uttar Pradesh hospital https://t.co/OtKuztQtEn pic.twitter.com/274x9WkSan
— NDTV (@ndtv) May 29, 2020
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಯಾಗ್ ರಾಜ್ ನ ಮುಖ್ಯ ಆರೊಗ್ಯ ಅಧಿಕಾರಿ ನೀರಿನ ವ್ಯವಸ್ಥೆಯನ್ನು ಎರಡು ಘಂಟೆಗಳಲ್ಲಿ ಸರಿಪಡಿಸಲಾಗಿದೆ ಎಂದಿದ್ದಾರೆ. “ಕರೆಂಟ್ ತೊಂದರೆಯಿಂದ ಸ್ವಚ್ಚ ಕುಡಿಯುವ ನೀರಿನ ತೊಂದರೆ ಇತ್ತು. ಇದನ್ನು ಸರಿಪಡಿಸಿದ್ದೇವೆ” ಎಂದಿದ್ದಾರೆ.
ಈ ಹಿಂದೆ ಕೂಡ ಉತ್ತರ ಪ್ರದೇಶದ ಹಲವು ಕೋವಿಡ್-19 ಚಿಕಿತ್ಸಾ ಆಸ್ಪತ್ರೆಗಳಲ್ಲಿ ಅಮಾನವೀಯ ಪರಿಸ್ಥಿತಿಯ ಬಗ್ಗೆ ಸೋಂಕಿತರು ದೂರಿದ್ದರು. ಕಳೆದ ವಾರವಷ್ಟೆ ಪ್ರೆತ್ಯೇಕ ವಾರ್ಡ್ ಗಳಲ್ಲಿ ರೋಗಿಗಳು ಮೊಬೈಲ್ ಬಳಸದಂತೆ ಹೊರಡಿಸಿದ್ದ ಆದೇಶವನ್ನು ಸರ್ಕಾರ ಹಿಂತೆದುಕೊಂಡಿತ್ತು. ಆಸ್ಪತ್ರೆಗಳಲ್ಲಿ ಇರುವ ಇಂತಹ ದಯನೀಯ ಪರಿಸ್ಥಿತಿಯನ್ನು ಮುಚ್ಚಿಕೊಳ್ಳಲು ಸರ್ಕಾರ ಇಂತಹ ಕ್ರಮ ತೆಗೆದುಕೊಂಡಿತ್ತು ಎಂದು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ದೂರಿದ್ದರು.
ಉತ್ತರಪ್ರದೇಶದಲ್ಲಿ ಇಲ್ಲಿಯವರೆಗೂ ಸುಮಾರು 7000 ಕೊರೊನ ವೈರಸ್ ಪ್ರಕರಣಗಳು ದಾಖಲಾಗಿದ್ದು, 197 ಜನ ಮೃತಪಟ್ಟಿದ್ದಾರೆ.

