ಇಲ್ಲಿ ರಸ್ತೆಗೆ ಸಾವರ್ಕರ್ ಹೆಸರಿಡಲು ವಿರೋಧ; ನೆರೆ ರಾಜ್ಯದಲ್ಲಿ ಕಾಂಗ್ರೆಸ್ ಮಿತ್ರಪಕ್ಷದ ಸದಸ್ಯರಿಂದ ಸಾವರ್ಕರ್ ಪೂಜೆ

ಯಲಹಂಕ ಮೇಲ್ಸೇತುವೆ ರಸ್ತೆಗೆ ವಿನಾಯಕ ದಾಮೋದರ್ ಸಾವರ್ಕರ್ ಅವರ ಹೆಸರನ್ನು ಇಡಲು ಕರ್ನಾಟಕ ಸರ್ಕಾರದ ನಿರ್ಧಾರವನ್ನು ಪ್ರತಿಪಕ್ಷ ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿತ್ತು. ಕಾಂಗ್ರೆಸ್ ಪಕ್ಷದ ಮುಖಂಡ ಸಿದ್ಧರಾಮಯ್ಯನವರು ” ಯಲಹಂಕ‌ ಮೇಲ್ಸೆತುವೆಗೆ ವಿ.ಡಿ.ಸಾವರ್ಕರ್ ಹೆಸರಿಡುವ ರಾಜ್ಯ ಸರ್ಕಾರದ ನಿರ್ಧಾರ ಈ ಮಣ್ಣಿನ ಸ್ವಾತಂತ್ರ್ಯ ಹೋರಾಟಗಾರರಿಗೆ‌ ಮಾಡುವ ಅವಮಾನ” ಎಂದಿದ್ದರು.

ಹಲವು ವಲಯಗಳಿಂದ ಕೇಳಿಬಂದ ವ್ಯಾಪಕ ಟೀಕೆಯ ಹಿನ್ನಲೆಯಲ್ಲಿ ಸಾವರ್ಕರ್ ಅವರ ಜನ್ಮದಿನವಾದ ಮೇ 28ರಂದು ಉದ್ಘಾಟನೆಯಾಗಬೇಕಿದ್ದ ಮೇಲ್ಸೇತುವೆ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಮುಂದೂಡಿತ್ತು.

ಯಲಹಂಕ‌ ಮೇಲ್ಸೆತುವೆಗೆ ವಿ.ಡಿ.ಸಾವರ್ಕರ್ ಹೆಸರಿಡುವ ರಾಜ್ಯ ಸರ್ಕಾರದ ನಿರ್ಧಾರ ಈ ಮಣ್ಣಿನ ಸ್ವಾತಂತ್ರ್ಯ ಹೋರಾಟಗಾರರಿಗೆ‌ ಮಾಡುವ ಅವಮಾನ.ತಕ್ಷಣ…

Posted by Siddaramaiah on Wednesday, May 27, 2020

ಮಹಾತ್ಮ ಗಾಂಧಿ ಅವರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು ನಂತರ ಖುಲಾಸೆಯಾಗಿದ್ದ ಸಾವರ್ಕರ್ ರವರನ್ನು ಕಾಂಗ್ರೆಸ್ ಪಕ್ಷ ಮೊದಲಿಂದಲೂ ರಾಷ್ಟ್ರಮಟ್ಟದಲ್ಲಿ ಟೀಕಿಸಿಕೊಂಡು ಬಂದಿದೆ. 2019 ರಲ್ಲಿ ಒಂದು ಭಾಷಣದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು “ನನ್ನ ಹೆಸರು ರಾಹುಲ್ ಗಾಂಧಿ, ರಾಹುಲ್ ಸಾವರ್ಕರ್ ಅಲ್ಲ” ಎಂದು ಗುಡುಗಿದ್ದರು. ಮಹಾರಾಷ್ಟ್ರದಲ್ಲಿ ಶಿವಸೇನೆ- ಕಾಂಗ್ರೆಸ್ – ಎನ್ ಸಿ ಪಿ ಸೇರಿ ರಚಿಸಿದ ಮೈತ್ರಿಸರ್ಕಾರಕ್ಕೆ ಅಂದಿಗೆ ಇನ್ನೂ ಒಂದು ತಿಂಗಳಾಗಿತ್ತು.

ಆಗ ಶಿವಸೇನೆ ವಿ ಡಿ ಸಾವರ್ಕರ್ ಬಗ್ಗೆ ಲಘುವಾಗಿ ಮಾತನಾಡದಂತೆ ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡಿತ್ತು. ಹಿಂದಿನಿಂದಲೂ ಬಿಜೆಪಿ ಮಿತ್ರಪಕ್ಷವಾಗಿ ಗುರುತಿಸಿಕೊಂಡಿದ್ದ ಶಿವಸೇನೆ ಸಾವರ್ಕರ್ ಅವರನ್ನು ರಾಜಕೀಯ ಕಾರಣಗಳಿಗಾಗಿ ಆಗಾಗ ನೆನಪಿಸಿಕೊಳ್ಳುತ್ತಿರುತ್ತದೆ ಮತ್ತು ಅವರಿಗೆ ಭಾರತರತ್ನ ನೀಡಬೇಕು ಎಂದು ಹಿಂದಿನಿಂದಲೂ ಆಗ್ರಹಿಸುತ್ತಾ ಬಂದಿದೆ.

ಸಾವರ್ಕರ್ ಅವರು ವೀರ ಎಂದಿಗೂ ಆಗಿರಲಿಲ್ಲ ಅವರು ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದುಕೊಟ್ಟಿದ್ದವರು ಎಂದು ಕಾಂಗ್ರೆಸ್ ಹಿಂದಿನಿಂದಲೂ ವಿರೋಧಿ ನಿಲುವನ್ನು ತಳೆದು ಉಳಿಸಿಕೊಂಡು ಬಂದಿದೆ. ಮತ್ತು ಎನ್ ಸಿ ಪಿ ಪಕ್ಷ, ಯು ಪಿ ಎ ಕೇಂದ್ರ ಸರ್ಕಾರದಲ್ಲಿ ಅಧಿಕಾರ ನಡೆಸುತ್ತಿದ್ದಾಗ ಮಿತ್ರ ಪಕ್ಷ. ಆದರೆ ಈಗ ಸಾವರ್ಕರ್ ಜನ್ಮ ದಿನದಂದು ಎನ್ ಸಿ ಪಿ ಪಕ್ಷದ ಮುಖಂಡ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಸಾವರ್ಕರ್ ಅವರ ಫೋಟೋಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿರುವ ಸಂಗತಿ ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿದೆ.

ಇದರ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ಸಚಿನ್ ಸಾವಂತ್ “ನಾವು ಸಾವರ್ಕರ್ ಅವರ ಸಿದ್ಧಾಂತವನ್ನು ಬಲವಾಗಿ ವಿರೋಧಿಸುತ್ತೇವೆ ಮತ್ತು ಆತನ ನಿಲುವುಗಳಿಗೆ ವಿರುದ್ಧವಾಗಿದ್ದೇವೆ. ಆದರೆ ಅವರನ್ನು ವ್ಯಕ್ತಿಯಾಗಿ ವಿರೋಧಿಸುವುದಿಲ್ಲ. ಆದುದರಿಂದ ಯಾರಾದರೂ ಸಾವರ್ಕರ್ ಫೋಟೋಗೆ ಹಾರ ಹಾಕಿದರೆ ನಾವು ಯಾಕೆ ಆಕ್ಷೇಪ ಎತ್ತಬೇಕು” ಎಂದು ಹೇಳಿರುವುದಾಗಿ ದ ಪ್ರಿಂಟ್ ವರದಿ ಮಾಡಿದೆ.

ಆದರೆ ಇದರ ಬಗ್ಗೆ ತಗಾದೆ ತೆಗೆದಿರುವ ಬಿಜೆಪಿ ಮುಖಂಡರೊಬ್ಬರು, ಬೆಂಗಳೂರಿನಲಿ ಕಾಂಗ್ರೆಸ್ ಮುಖಂಡರು ಮೇಲ್ಸೇತುವೆಗೆ ಸಾವರ್ಕರ್ ಹೆಸರನ್ನು ಇಡುವುದಕ್ಕೆ ವಿರೋಧ ಮಾಡುತ್ತಾರೆ. ಇಲ್ಲಿ ಮುಂಬೈನಲ್ಲಿ ಅವರ ಮಿತ್ರಪಕ್ಷದ ಸದಸ್ಯ ಸಾವರ್ಕರ್ ಫೋಟೋಗೆ ಹಾರ ಹಾಕುತ್ತಾರೆ. ಇದು ಅಶಾಡಭೂತಿತನ. ಇದರ ಬಗ್ಗೆ ರಾಹುಲ್ ಗಾಂಧಿ ಸ್ಪಷ್ಟಪಡಿಸಬೇಕು ಎಂದಿದ್ದಾರೆ.

ಕಳೆದ ಚುನಾವಣೆಯ ನಂತರ ಎನ್ ಸಿ ಪಿಯನ್ನು ಧಿಕ್ಕರಿಸಿ ಕೆಲವು ಶಾಸಕರ ಜೊತೆಗೆ ಬಿಜೆಪಿ ಜೊತೆಗೂಡಿ ಅಜಿತ್ ಪವಾರ್ ಅವರು ಕೆಲವು ದಿನಗಳವರೆಗೆ ಉಪಮುಖ್ಯಮಂತ್ರಿಯಾಗಿದ್ದನ್ನು ಮತ್ತು ನಂತರ ರಾಜೀನಾಮೆ ನೀಡಿ ವಾಪಸ್ ಬಂದು ಎಂ ವಿ ಎ ಮೈತ್ರಿಕೂಟದಲ್ಲಿ ಉಪಮುಖ್ಯಮಂತ್ರಿಯಾಗಿದ್ದನ್ನು ಕೂಡ ಈ ಸಮಯದಲ್ಲಿ ನೆನಪಿಸಿಕೊಳ್ಳಬಹುದು. ಒಟ್ಟಿನಲ್ಲಿ ಕೊರೊನ ಪಾಸಿಟಿವ್ ಪ್ರಕರಣಗಳು ತೀವ್ರವಾಗಿ ಹೆಚ್ಚಿರುವ ರಾಜ್ಯಗಳಲ್ಲಿ ಒಂದಾದ ಮಹಾರಾಷ್ಟ್ರ ಸರ್ಕಾರದಲ್ಲಿ ಅಸ್ಥಿರತೆ ಇದೆ ಎಂಬ ವರದಿಗಳ ನಡುವೆ ಸಾವರ್ಕರ್ ಅವರ ಹಿಂದುತ್ವ ಸಿದ್ಧಾಂತದ ಬಗ್ಗೆ ಪರ-ವಿರೋಧ ನಿಲುವಿನ ಸಮಸ್ಯೆ ಕೂಡ ತಲೆದೋರಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights