ಹಳ್ಳಿಹಕ್ಕಿಯ ಪುಕ್ಕ ಕಿತ್ತ ಬಿಜೆಪಿ; ವಿಶ್ವನಾಥ್ ಪಾಲಿಗೆ ಮುಳ್ಳಾಯಿತಾ ಹೈಕಮಾಂಡ್!
ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಉರುಳಿಸಿ, ಬಿಜೆಪಿಯನ್ನು ಅಧಿಕಾರಕ್ಕೆ ತರಲು ಅಬ್ಬರಿಸಿ ಬೊಬ್ಬಿರಿದಿದ್ದ ಹಳ್ಳಿಹಕ್ಕಿ ವಿಶ್ವನಾಥ್ ಪಾಲಿಗೆ ಬಿಜೆಪಿ ಮುಳುವಾಗಿದೆ. ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಬಿಜೆಪಿಗೆ ಅಧಿಕಾರ ಭಾಗ್ಯ ಒಲಿಸಿದ್ದ ಹೆಚ್.ವಿಶ್ವನಾಥ್ ಉಪಚುನಾವಣೆಯಲ್ಲಿ ಸೋಲುಂಡಿದ್ದು, ವಿಧಾನ ಪರಿಷತ್ ಟಿಕೆಟ್ಗಾಗಿ ಬಕಪಕ್ಷಿಯಂತೆ ಕಾದುಕುಳಿತಿದ್ದರು. ಆದರೆ, ಬಿಜೆಪಿ ಹೈಕಮಾಂಡ್ ವಿಶ್ವನಾಥ್ಗೆ ಟಿಕೆಟ್ ನೀಡಲು ನಿರಾಕರಿಸಿದ್ದು, ಹಳ್ಳಿಹಕ್ಕಿಯ ಮುಖ ಮುದುಡಿ ಹೋಗಿದೆ.
ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿಯಿಂದ ನಾಲ್ಕು ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ.ಅ ವರಲ್ಲಿ ಸಚಿವ ಸ್ಥಾನದಿಂದ ವಂಚಿತರಾಗಿದ್ದ ವಲಸಿಗರಾದ ಎಂಟಿಬಿ ನಾಗರಾಜ್, ಆರ್. ಶಂಕರ್ಗೆ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ನೀಡಲಾಗಿದೆ. ಆದರೆ, ಅನೇಕ ಬಾರಿ ಸಿಎಂ ಬಿ.ಎಸ್. ಯಡಿಯೂರಪ್ಪನವರ ಮೇಲೆ ಒತ್ತಡ ಹೇರಿದ್ದರೂ ಹೆಚ್. ವಿಶ್ವನಾಥ್ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
![]()
ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಣೆಯಾಗಿದ್ದು, ಎಂಟಿಬಿ ನಾಗರಾಜ್, ಆರ್ ಶಂಕರ್, ಪ್ರತಾಪ್ ಸಿಂಹ ನಾಯಕ್, ಸುನೀಲ್ ವಲ್ಯಾಪುರ್ ಅವರಿಗೆ ಟಿಕೆಟ್ ನೀಡಲಾಗಿದೆ. ಸಿಎಂ ಯಡಿಯೂರಪ್ಪ ನೀಡಿದ್ದ ಆಶ್ವಾಸನೆಯಂತೆ ಆರ್. ಶಂಕರ್ ಹಾಗೂ ಎಂಟಿಬಿ ನಾಗರಾಜ್ಗೆ ಪರಿಷತ್ ಟಿಕೆಟ್ ನೀಡಲಾಗಿದೆ. ಆದರೆ, ಹೆಚ್. ವಿಶ್ವನಾಥ್ ಸ್ಪರ್ಧೆಗೆ ಟಿಕೆಟ್ ನೀಡಲು ಬಿಜೆಪಿ ಹೈಕಮಾಂಡ್ ನಿರಾಕರಿಸಿದೆ.
ಮೈತ್ರಿ ಸರ್ಕಾರ ಪತನದ ವೇಳೆ ಸರ್ಕಾರವನ್ನೂ ಉರುಳಿಸಿಯೇ ತೀರುತ್ತೇವೆ ಎಂದು ಮುಂದಾಳಿನಂತೆ ಬಿಜೆಪಿಗಾಗಿ ದುಡಿದಿದ್ದ ವಿಶ್ವನಾಥ್ಗೆ ಟಿಕೆಟ್ ಸಿಗದೇ ಇರುವುದು ದೌರ್ಭಾಗ್ಯ….
ಊರಿಗೆ ಪಾಠ ಹೇಳುವಂತಹ ಪುಸ್ತಕಗಳನ್ನು ಬರೆದಿದ್ದ ವಿಶ್ವನಾಥ್. ಪಕ್ಷಾಂತರದ ವಿರುದ್ಧ ಪುಸ್ತಕವನ್ನೇ ಬರೆದು ಅಧಿಕಾರದ ಆಸೆ ಬಯಸುವವರಿಗೆ ಪ್ರವಚನ ನೀಡಿದ್ದರು. ತಾವೇ ಬರೆದು ಪುಸ್ತಕದ ನೀತಿಪಾಠವನ್ನು ಅವರೇ ಪಾಲಿಸದೆ, ಬಿಜೆಪಿಗೆ ಹಾಕಿ ಹೋಗಿದ್ದರು. ಬಿಜೆಪಿಯ ಹೈಕಮಾಂಡ್ ಹಳ್ಳಿಹಕ್ಕಿಯ ಪುಕ್ಕ ಕಿತ್ತು ವಿಶ್ವನಾಥ್ ಕೈಗಿರಿಸಿದೆ.

