ಭಾರತೀಯರಿಗೆ ಕರ್ತಾರ್ಪುರ್ ಕಾರಿಡಾರ್ ತೆರೆಯಲು ಮುಂದಾದ ಪಾಕ್
ಭಾರತೀಯ ಸಿಖ್ ಯಾತ್ರಿಗಳಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಜೂ.29ರಿಂದ ಕರ್ತಾರ್ಪುರ ಕಾರಿಡಾರ್’ನ್ನು ತೆರೆಯಲು ಸಿದ್ಧತೆಗಳನ್ನು ನಡೆಸುತ್ತಿರುವುದಾಗಿ ಪಾಕಿಸ್ತಾನ ಹೇಳಿದೆ. ಈ ಕುರಿತು ಪಾಕಿಸ್ತಾನ ವಿದೇಶಾಂಗ ಸಚಿವ ಶಾ.ಮಹಮ್ಮೂದ್ ಖುರೇಷಿಯವರು ಟ್ವೀಟ್ ಮಾಡಿದ್ದಾರೆ.
ವಿಶ್ವದಾದ್ಯಂತ ಧಾರ್ಮಿಕ ಕೇಂದ್ರಗಳು ಪುರರಾರಂಭಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಕರ್ತಾರ್ಪುರ ಕಾರಿಡಾರ್’ನ್ನು ತೆರೆಯಲು ಸಿದ್ಥತೆ ನಡೆಸುತ್ತಿದೆ. ಮಹಾರಾಜ ರಂಜೀತ್ ಸಿಂಗ್ ಅವರ ಮರಣ ವರ್ಷಾಚರಣೆಯ ಅಂಗವಾಗಿ ಜೂ.29 ರಂದು ಎಲ್ಲಾ ಸಿಖ್ ಯಾತ್ರಾರ್ಥಿಗಳಿಗೆ ಕರ್ತಾರ್ಪುರ ಸಾಹಿಬ್ ಕಾರಿಡಾರ್’ನ್ನು ಮತ್ತೆ ತೆರೆಯಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಭಾರತಕ್ಕೆ ಮಾಹಿತಿ ನೀಡಲಾಗಿದೆ ಎಂದು ಹೇಳಿದೆ.
ಇದಕ್ಕೆ ಭಾರತ ಪ್ರತಿಕ್ರಿಸಿದ್ದು, ಪಾಕಿಸ್ತಾನ ಇದೀಗ ತಾನು ಸೌಹಾರ್ಧ ಸಂಬಂಧ ಹರಿಕಾರ ಎಂದು ಬಿಂಬಿಸಿಕೊಳ್ಳುವ ನಾಟಕವಾಡುತ್ತಿದೆ. ಸೋಮವಾರದಿಂದ ಕಾರಿಡಾರ್ ಆರಂಭವಾಗುವುದಿದ್ದರೆ ಈ ಮೊದಲೇ ವಿಷಯವನ್ನು ತಿಳಿಸಬೇಕಿತ್ತು ಎಂದು ಹೇಳಿದೆ.
ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕರ್ತಾರ್ಪುರ ಕಾರಿಡಾರ್’ನ್ನು ಮಾರ್ಚ್16 ರಿಂದ ಭಾರತ ಬಂದ್ ಮಾಡಿತ್ತು. ಪಾಕಿಸ್ತಾನವೂ ಕೂಡ ತನ್ನ ಪ್ರಜೆಗಳು ಈ ಮಾರ್ಗದಲ್ಲಿ ಸಂಚರಿಸುವುದಕ್ಕೆ ನಿಷೇಧ ಹೇರಿತ್ತು.

