ದೇಶದಲ್ಲಿ ನಿತ್ಯ 20,000 ಗಡಿ ಮುಟ್ಟಿದ ಕೊರೊನಾ ಪ್ರಕರಣ; ಸಾವಿನ ಸಂಖ್ಯೆಯೂ ಏರಿಕೆ!
ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಕಳದವಾರ ಪ್ರತಿನಿತ್ಯ 10,000ದ ಅಂಚಿನಲ್ಲಿದ್ದ ಪ್ರಕರಣಗಳ ಪ್ರಮಾಣ, ಈಗ ದ್ವಿಗುಣಗೊಂಡಿದೆ. ಕಳೆದ 24 ಗಂಟೆಗಳಲ್ಲಿ 19,148 ಜನರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಇಂದಿಗೆ ದೇಶದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 6,04,641ಕ್ಕೆ ಏರಿಕೆಯಾಗಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಬುಧವಾರ ಒಂದೇ ದಿನ 434 ಸೋಂಕಿತರು ಕೊರೊನಾದಿಂದ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಕೂಡ 17834ಕ್ಕೆ ಏರಿಕೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ದೇಶದಲ್ಲಿರುವ 6,04,641 ಸೋಂಕಿತರ ಪೈಕಿ 3,59,860ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇನ್ನೂ ದೇಶದಲ್ಲಿ 2,26,947 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂದು ಸಚಿವಾಲಯ ತಿಳಿಸಿದೆ.
ಇನ್ನು ಮಹಾರಾಷ್ಟ್ರದಲ್ಲಿ ಒಂದೇ ದಿನ ದಾಖಲೆಯ 5537 ಹೊಸ ಕೊರೋನಾ ಪ್ರಕರಣಗಳು ದೃಢವಾಗಿದ್ದು, ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,80,298ಕ್ಕೆ ಏರಿಕೆಯಾಗಿದೆ.
ತಮಿಳುನಾಡು ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 94,049, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 89,802ಕ್ಕೆ ತಲುಪಿದೆ.

