ಮುಕ್ತ ಆರ್ಥಿಕತೆ ಮತ್ತು ವಿದೇಶಿ ಹೂಡಿಕೆಯಿಂದ ದೇಶದ ಆರ್ಥಿಕತೆ ಚೇತರಿಸಲಿದೆ: ಪ್ರಧಾನಿ ಮೋದಿ
ಜಗತ್ತಿನಾದ್ಯಂತ ಕೊರೊನಾ ಸೋಂಕಿನ ಹಾವಳಿ ಹೆಚ್ಚಾಗುತ್ತಲೇ ಇದೆ. ಸೋಂಕಿನ ಭೀತಿಯಿಂದ ಹಾಗೂ ಲಾಕ್ಡೌನ್ನಿಂದ ಉಂಟಾದ ಸಂಕಷ್ಟಗಳಿಂದ ತತ್ತರಿಸಿರುವ ಜನರ ಪುನರುಜ್ಜೀವನಕ್ಕೆ ಹಲವಾರು ದೇಶಗಳು ಮುಂದಾಗುತ್ತಿವೆ. ಈ ಸಂದರ್ಭದಲ್ಲಿ, ಕುಸಿಯುತ್ತಿರುವ ಆರ್ಥಿಕತೆಯೂ ಸೇರಿದಂತೆ ಎಲ್ಲ ಸವಾಲುಗಳಿಂದ ಭಾರತ ಸಹಜವಾಗಿ ಹೊರಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂಡಿಯಾ ಗ್ಲೋಬಲ್ ವೀಕ್ 2020 ಉದ್ಘಾಟಿಸಿ ಮಾತನಾಡಿದ ಮೋದಿ, ಒಂದು ಕಡೆ ಭಾರತ ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಪ್ರಬಲ ಹೋರಾಟ ನಡೆಸುತ್ತಿದೆ. ಜನರ ಆರೋಗ್ಯದ ಮೇಲೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ, ಜೊತೆಗೆ ದೇಶದ ಆರ್ಥಿಕ ಆರೋಗ್ಯದ ಮೇಲೂ ಗಮನವನ್ನು ಕೇಂದ್ರೀಕರಿಸಿದ್ದೇವೆ ಎಂದಿದ್ದಾರೆ.
ಈಗಾಗಲೇ ಭಾರತವೂ ಸೇರಿದಂತೆ ನಾನಾ ದೇಶದಳು ಕೊರೊನಾಗೆ ಲಸಿಕೆಯನ್ನು ಅಭಿವೃದ್ಧಿ ಪಡಿಸುತ್ತಿವೆ. ‘ಕೊವಿಡ್ ಲಸಿಕೆ ಕಂಡುಹಿಡಿದ ನಂತರ ಅದನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮೋದಿ ಹೇಳಿದ್ದಾರೆ.
ಭಾರತೀಯರು ನೈಸರ್ಗಿಕ ಸುಧಾರಕರು. ಸಾಮಾಜಿಕ ಅಥವಾ ಆರ್ಥಿಕತೆ ಸೇರಿದಂತೆ ಭಾರತವು ಪ್ರತಿ ಸವಾಲನ್ನು ಜಯಿಸಿದೆ ಎಂದು ಇತಿಹಾಸವು ತೋರಿಸಿದೆ. ಅಸಾಧ್ಯವಾದುದನ್ನು ಸಾಧಿಸುವ ಮನೋಭಾವ ಭಾರತೀಯರಿಗಿದ್ದು, ಈಗಾಗಲೇ ಆರ್ಥಿಕ ಚೇತರಿಕೆ ಚಿಗುರೊಡೆಯುತ್ತಿದೆ. ಪ್ರತಿ ಪೈಸೆಯೂ ನೇರವಾಗಿ ಫಲಾನುಭವಿಗಳನ್ನು ತಲುಪಿದೆ ಎಂದು ಮೋದಿ ಹೇಳಿದ್ದಾರೆ.
ವಿಶ್ವದಲ್ಲಿಯೇ ಅತ್ಯಂತ ಮುಕ್ತ ಆರ್ಥಿಕತೆ ಹೊಂದಿರುವ ದೇಶಗಳಲ್ಲಿ ಭಾರತವು ಒಂದಾಗಿದೆ. ಎಲ್ಲಾ ಜಾಗತಿಕ ಕಂಪನಿಗಳು ಬಂದು ಭಾರತದಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸಲು ನಾವು ರೆಡ್ ಕಾರ್ಪೆಟ್ ಹಾಕುತ್ತಿದ್ದು, ವಿವಿಧ ಕ್ಷೇತ್ರಗಳಲ್ಲಿ ಅನೇಕ ಸಾಧ್ಯತೆಗಳು ಮತ್ತು ಅವಕಾಶಗಳಿವೆ. ಕೃಷಿಯಲ್ಲಿ ಸಾಕಷ್ಟು ಸುಧಾರಣೆಯಾಗಿದ್ದು ಬಹಳ ಆಕರ್ಷಕವಾದ ಹೂಡಿಕೆಗೆ ಅವಕಾಶವನ್ನು ಒದಗಿಸುತ್ತದೆ” ಎಂದು ಹೇಳಿದ್ದಾರೆ.
ಉಚಿತ ಅಡುಗೆ ಅನಿಲ, ಬ್ಯಾಂಕ್ ಖಾತೆಗಳಲ್ಲಿ ನಗದು, ಲಕ್ಷಾಂತರ ಜನರಿಗೆ ಉಚಿತ ಆಹಾರ ಧಾನ್ಯಗಳು ಮತ್ತು ಇತರ ಅನೇಕ ವಸ್ತುಗಳನ್ನು ಪರಿಹಾರ ರೂಪದಲ್ಲಿ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.
”ಕಳೆದ ಆರು ವರ್ಷಗಳಲ್ಲಿ, ಭಾರತವು ಒಟ್ಟು ಆರ್ಥಿಕ ಸೇರ್ಪಡೆ, ಇನ್ಫ್ರಾ ಕನ್ಸ್ಟ್ರಕ್ಷನ್, ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್, ಜಿಎಸ್ ಟಿ ಸೇರಿದಂತೆ ದಿಟ್ಟ ತೆರಿಗೆ ಸುಧಾರಣೆಗಳಂತಹ ಕ್ಷೇತ್ರಗಳಲ್ಲಿ ಹೆಚ್ಚಿನ ಲಾಭ ಗಳಿಸಿದೆ” ಎಂದು ಮೋದಿ ಹೇಳಿದ್ದಾರೆ.
ಮುಕ್ತ ಆರ್ಥಿಕತೆಯಿಂದಾಗಿ ವಿದೇಶಿ ಬಂಡವಾಳಿಗರು ದೇಶದ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ಆರಂಭದಿಂದಲೂ ಮುಕ್ತ ಆರ್ಥಿಕತೆಗೆ ವಿರೋಧ ವ್ಯಕ್ತವಾಗುತ್ತಿದೆ. ಇನ್ನು ರೆಡ್ ಕಾರ್ಪೆಟ್ ಹಾಕುವ ಮೂಲಕ ಬಂಡವಾಳಿಗರಿಗೆ ಮತ್ತಷ್ಟು ಅವಕಾಶ ಹೆಚ್ಚಾಗಲಿದ್ದು, ದೇಶದ ಸಂಪತ್ತಿನ ಲೂಟಿಗೆ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಚಿಂತಕರು ಹೇಳುತ್ತಿದ್ದಾರೆ.

