ಬೊಕ್ಕಸದಲ್ಲಿ ಹಣವಿಲ್ಲ; ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ನೀಡಲಾಗುವುದಿಲ್ಲ ಎಂದ ನಿರ್ಮಲಾ ಸೀತಾರಾಮನ್!

ಕೋವಿಡ್‌ ಸಾಂಕ್ರಾಮಿಕದಿಂದಾಗಿ ಜಿಎಸ್‌ಟಿ ಸಂಗ್ರಹ ಕುಸಿತವಾಗಿದೆ. ಹಾಗಾಗಿ ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ನೀಡಲು ಕೇಂದ್ರ ಬೊಕ್ಕಸದಲ್ಲಿ ಹಣವಿಲ್ಲ. ಇದು ಕೊರೊನಾ ದೇವರ ಕಾರ್ಯ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಸಹಾಯಕತೆ ಪ್ರದರ್ಶಿಸಿದ್ದಾರೆ.

2021ರ ವಿತ್ತೀಯ ವರ್ಷದಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ 2.35 ಲಕ್ಷ ಕೋಟಿ ಕೊರತೆ ಬೀಳಲಿದೆ. ಹಾಗಾಗಿ ರಾಜ್ಯಗಳಿಗೆ ಪಾಲು ನೀಡಲು ಹಣದ ಕೊರತೆಯುಂಟಾಗಿದೆ ಎಂದು ಕೇಂದ್ರ ಸರ್ಕಾರದ ಕಂದಾಯ ಕಾರ್ಯದರ್ಶಿ ಎ.ಬಿ.‌ ಪಾಂಡೆ ತಿಳಿಸಿದ್ದಾರೆ.

ಮಾರ್ಚ್‌ನಲ್ಲಿ 13,806 ರೂ ಬಿಡುಗಡೆಯೊಂದಿಗೆ 2019-20ನೇ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ ಈಗಾಗಲೇ ಒಟ್ಟು 1.65 ಲಕ್ಷ ಕೋಟಿ ರೂ ಜಿಎಸ್‌ಟಿ ಪರಿಹಾರ ಹಣ ನೀಡಲಾಗಿದೆ. ಆದರೆ ಜಿಎಸ್‌ಟಿ ಪರಿಹಾರಕ್ಕಾಗಿನ ಸೆಸ್ ಸಂಗ್ರಹ ಕೇವಲ 95,444 ಕೋಟಿ ರೂ ಗೆ ಕುಸಿದಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಕೊರೊನಾ ವೈರಸ್‌ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಹಲವು ರಾಜ್ಯಗಳು ತಮ್ಮ ಪಾಲಿನ ಹಣಕ್ಕಾಗಿ ಒತ್ತಾಯಿಸಲು ಬಯಸಿದ್ದರು. ಆದರೆ ಕೇಂದ್ರ ಸರ್ಕಾರವೇ ತನ್ನ ಕಷ್ಟ ತೋಡಿಕೊಂಡಿದ್ದು ರಾಜ್ಯಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಬಿಜೆಪಿಯೇತರ ಪಕ್ಷಗಳು ಆಳ್ವಿಕೆಯಲ್ಲಿರುವ ರಾಜ್ಯಗಳು ಕೇಂದ್ರವು ನಮ್ಮ ಪಾಲಿನ ಜಿಎಸ್‌ಟಿ ಹಣವನ್ನು ನೀಡುವುದು ಶಾಸನಬದ್ಧ ಬಾಧ್ಯತೆಯಾಗಿದೆ ಎಂದು ಸಭೆಯಲ್ಲಿ ಆಗ್ರಹಿಸಿದ್ದಾರೆ. ಆದರು ಜಿಎಸ್‌ಟಿ ಸಂಗ್ರಹ ಕುಸಿದಿರುವಾಗ ಕೇಂದ್ರಕ್ಕೆ ಅಂತಹ ಬಾಧ್ಯತೆಗಳಿಲ್ಲ ಎಂದು ಸರ್ಕಾರ ವಾದಿಸಿದೆ.

ಕೇಂದ್ರ ಸರ್ಕಾರವು ನಮಗೆ 4400 ಕೋಟಿ ಜಿಎಸ್‌ಟಿ ಹಣ ಬಾಕಿ ಉಳಿಸಿಕೊಂಡಿದೆ. ನಾವು ರಾಜ್ಯದಲ್ಲಿ 1800 ಕೋಟಿ ಸಂಬಳ ನೀಡಬೇಕಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಹಣ ನೀಡದಿದ್ದರೆ ನಾವು ಏನು ಮಾಡಬೇಕು ಎಂದು ಪಂಜಾಬ್ ಹಣಕಾಸು ಸಚಿವ ಮನ್‌ಪ್ರೀತ್ ಸಿಂಗ್ ಬಾದಲ್ ಟ್ವೀಟ್ ಮಾಡುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಎಸ್‌ಟಿ ನಿಯಂತ್ರಣ ಕಾನೂನಿನಡಿಯಲ್ಲಿ, ಜಿಎಸ್‌ಟಿ ಜಾರಿಗೆ ಬಂದ ಜುಲೈ 1, 2017 ರಿಂದ ಮೊದಲ ಐದು ವರ್ಷಗಳಲ್ಲಿ ರಾಜ್ಯಗಳಿಗೆ ಆದಾಯ ನಷ್ಟಕ್ಕೆ ಕೇಂದ್ರದಿಂದ ಪಾವತಿ ಖಾತರಿ ನೀಡಲಾಗಿದೆ. 2022ರವರೆಗೂ ರಾಜ್ಯಗಳು ನಷ್ಟ ಹೊಂದಿದ್ದಲ್ಲಿ ಕೇಂದ್ರ ಅದನ್ನು ತುಂಬಿಕೊಡುವ ಭರವಸೆ ನೀಡಿತ್ತು.

ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಜಿಎಸ್‌ಟಿ ಆದಾಯದ ನಷ್ಟಕ್ಕೆ ಕೇಂದ್ರವು ರಾಜ್ಯಗಳಿಗೆ ಸಂಪೂರ್ಣ ಪರಿಹಾರವನ್ನು ನೀಡಬೇಕು ಎಂದು ಸರ್ಕಾರದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.


ಇದನ್ನೂ ಓದಿ:  ಟಿಪ್ಪು ಈ ನಾಡಿನ ಮಗ, ಸಂಗೊಳ್ಳಿರಾಯಣ್ಣನ ಪ್ರತಿಮೆ ಸುವರ್ಣಸೌಧದಲ್ಲಿ ಸ್ಥಾಪಿಸಬೇಕು: ಹೆಚ್‌ ವಿಶ್ವನಾಥ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights