Fact Check: ಮೇಲ್ಜಾತಿಯವರು ದಲಿತ ಯುವಕನನ್ನು ಹಿಂಸಿಸಿ ಮೂತ್ರ ಕುಡಿಸಿದ್ದು ಸತ್ಯವೇ?

ವ್ಯಕ್ತಿಯೊಬ್ಬನನ್ನು ಮರಕ್ಕೆ ಕಟ್ಟಿ, ಬಲವಂತವಾಗಿ ಮೂತ್ರ ಕುಡಿಸುವ ವಿಡಿಯೋವೊಂದನ್ನು “ರಾಜಸ್ಥಾನದಲ್ಲಿ ಸಾರ್ವಜನಿಕವಾಗಿ ದಲಿತ ವ್ಯಕ್ತಿಗೆ ಬಲವಂತವಾಗಿ ಮೂತ್ರ ಕುಡಿಸುತ್ತಿದ್ದಾರೆ” ಎಂಬ ಸಂದೇಶದೊಂದಿಗೆ ಹಂಚಿಕೊಳ್ಳಲಾಗಿದೆ. ಇದು ನಿಜವೇ ಪರಿಶೀಲಿಸೋಣ ಬನ್ನಿ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ರಾಜಸ್ಥಾನದ ಬಲಾಢ್ಯ ಜಾತಿಯ ಸಮೂಹವು ದಲಿತನೊಬ್ಬನಿಗೆ ಚಿತ್ರಹಿಂಸೆ ನೀಡಿ, ಬಲವಂತವಾಗಿ ಮೂತ್ರ ಕುಡಿಸಲಾಗಿದೆ.

ನಿಜಾಂಶ: ಈ ಘಟನೆಯು ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಕೊನ್ರ ಗ್ರಾಮದಲ್ಲಿ ನಡೆದಿದೆ. ಇದು ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದ ವಿಷಯವಾಗಿದ್ದು, ಅಕ್ರಮ ಸಂಬಂಧ ಹೊಂದಿದ್ದ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಮರಕ್ಕೆ ಕಟ್ಟಿ ಥಳಿಸಿ, ಮೂತ್ರ ಕುಡಿಸಲಾಗಿದೆ. ಹಾಗಾಗಿ ಮೇಲಿನ ಪ್ರತಿಪಾದನೆ ತಪ್ಪಾಗಿದೆ.

ವಿಡಿಯೋದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಸರ್ಚ್ ಮೂಲಕ ಹುಡುಕಿದಾಗ ಇದೇ ರೀತಿಯ ಕಿರುಕುಳ ನೀಡುವ ಫೋಟೊವೊಂದು ಜುಲೈ 31, 2020ರ ಹಿಂದೂಸ್ತಾನ್ ಟೈಮ್ಸ್ ಲೇಖನದಲ್ಲಿ ಕಂಡುಬಂದಿದೆ. ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಅಕ್ರಮ ಸಂಬಂಧ ಹೊಂದಿದ್ದ ಕಾರಣಕ್ಕಾಗಿ ಆತನನ್ನು ಮರಕ್ಕೆ ಕಟ್ಟಿ ಥಳಿಸಿ, ಒತ್ತಾಯವಾಗಿ ಮೂತ್ರ ಕುಡಿಸಲಾಗಿದೆ ಎಂದು ಲೇಖನದಲ್ಲಿ ತಿಳಿಸಲಾಗಿದೆ. ಸಂತ್ರಸ್ತ ಮತ್ತು ಆರೋಪಿಗಳು ಇಬ್ಬರೂ ಸಹ ಒಂದೇ ಜಾತಿಗೆ ಸೇರಿದ ಕಾರಣಕ್ಕಾಗಿ ಸಂತ್ರಸ್ತ ದೂರು ನೀಡಿಲ್ಲ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ರಾಜಸ್ಥಾನದಲ್ಲಿ ಬಲಾಢ್ಯ ಜಾತಿಯ ಸಮೂಹವು ದಲಿತನೊಬ್ಬನಿಗೆ ಚಿತ್ರಹಿಂಸೆ ನೀಡಿದೆ ಎಂದು ಟ್ವಿಟ್ಟರ್‌ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಾಗ ಬಾರ್ಮರ್ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. “ಘಟನೆಯು ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದ್ದು ಅದಕ್ಕೆ ತಪ್ಪಾಗಿ ಕೋಮು ಆಯಾಮ ನೀಡಲಾಗಿದೆ. 6 ಜನ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಟ್ವೀಟ್‌ ನಲ್ಲಿ ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದ ಎಫ್‌ ಐ ಆರ್‌  ಪ್ರತಿಯು ಫ್ಯಾಕ್ಟ್ಲಿಗೆ ಲಭ್ಯವಾಗಿದ್ದು, ಚೋತ್ಹಾನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 2020ರ ಜುಲೈ 25ರಂದು ಘಟನೆ ನಡೆದಿದ್ದು, ಅದರಲ್ಲಿ ಯಾವುದೇ ದಲಿತ ಆಯಾಮವನ್ನು ಉಲ್ಲೇಖಿಸಿಲ್ಲ.

ಒಟ್ಟಿನಲ್ಲಿ ರಾಜಸ್ಥಾನದ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದ ಘಟನೆಯನ್ನು ಬಲಾಢ್ಯ ಜಾತಿಯ ಸಮೂಹವು ದಲಿತನೊಬ್ಬನಿಗೆ ಚಿತ್ರಹಿಂಸೆ ನೀಡಿ, ಬಲವಂತವಾಗಿ ಮೂತ್ರ ಕುಡಿಸಲಾಗಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.


ಇದನ್ನೂ ಓದಿ:  ಮೋದಿ ತವರಿನಲ್ಲೇ ಬಿಜೆಪಿ ಬಂಡಾಯ: 38 ಕೌನ್ಸಿಲರ್‌ಗಳ ಅಮಾನತು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights