ವಿರೋಧಗಳ ನಡುವೆಯೂ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಗೆ ಸಹಿ ಹಾಕಿದ ರಾಜಪಾಲರು!
ರಾಜ್ಯದಲ್ಲಿ ವಿವಾದ ಎಬ್ಬಿಸಿದ್ದ ಕರ್ನಾಟಕ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿಗಾಗಿ ರಾಜ್ಯ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕಿದ್ದು, ಸುಗ್ರೀವಾಜ್ಞೆಗೆ ಅಧಿಕೃತ ಅನುಮತಿ ಸಿಕ್ಕಿದೆ.
5 ಸದಸ್ಯರಿಗಿಂತ ಹೆಚ್ಚಿರುವ ಕುಟುಂಬ ಗರಿಷ್ಠ 432 ಎಕರೆಯವರೆಗೆ ಭೂಮಿ ಹೊಂದಲು ಅವಕಾಶ ಕಲ್ಪಿಸುವ ಹಾಗೂ ಕೃಷಿಕರಲ್ಲದವರೂ ಕೃಷಿ ಭೂಮಿಯನ್ನು ಖರೀದಿಸಲು ಅವಕಾಶ ಕಲ್ಪಿಸುವ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ಜಾರಿಗೆ ರಾಜ್ಯಪಾಲ ವಜುಭಾಯಿ ವಾಲ ಅವರು ಸಹಿ ಹಾಕಿದ್ದಾರೆ.
ಉಳುವವನಿಗೆ ಭೂಮಿ ಆಶಯದಡಿ 1974ರಲ್ಲಿ ತಂದಿದ್ದ ಭೂಸುಧಾರಣೆ ಕಾಯ್ದೆಗೆ ಇಂದಿನ ಬಿಜೆಪಿ ಸರ್ಕಾರ ತಿದ್ದುಪಡಿ ತರಲು ಮುಂದಾಗಿದ್ದು, ಐದಕ್ಕಿಂತ ಹೆಚ್ಚಿನ ಸದಸ್ಯರಿರುವ ಕುಟುಂಬದವರಾಗಿದ್ದರೆ 432 ಎಕರೆ ಭೂಮಿಯನ್ನು ಹೊಂದಲು (ಸೆಕ್ಷನ್ 63 ಸಬ್ಸೆಕ್ಷನ್ 2ಎ) ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಸೆಕ್ಷನ್ 80ರ ಅಡಿ ರೈತರಲ್ಲದವರಿಗೆ ಭೂಮಿಯನ್ನು ವರ್ಗಾವಣೆ ಮಾಡುವಂತಿಲ್ಲ ಎಂಬ ನಿಯವನ್ನೇ ತೆಗೆದುಹಾಕಲಾಗಿದೆ.
ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕಿರುವ ರಾಜ್ಯಪತ್ರವನ್ನು ಇಲ್ಲಿ ಓದಿ: karnataka land reforms act
ಕೃಷಿ ಕುಟುಂಬಕ್ಕೆ ಸೇರದವರು, ಹೆಚ್ಚಿನ ಆದಾಯ ಇರುವವರು ಜಮೀನು ಖರೀದಿಸಿದ ಪ್ರಸಂಗದಲ್ಲಿ 79 ಎ, 79 ಬಿ ಅಡಿ ಪ್ರಕರಣ ದಾಖಲಿಸಲು, ಅದನ್ನು ಸರ್ಕಾರದ ಸುಪರ್ದಿಗೆ ಪಡೆಯಲು, ಕಾಯ್ದೆ ಉಲ್ಲಂಘಿಸಿದ್ದು ದೃಢಪಟ್ಟರೆ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಇತ್ತು. ಆದರೆ, ಈಗ ಆ ನಿರ್ಬಂಧಗಳನ್ನು ಸಡಿಲಗೊಳಿಸಿರುವ ಸರ್ಕಾರ, ಇಂತಹ ಸೆಕ್ಷನ್ ಅಡಿರಾಜ್ಯದಲ್ಲಿ ಇತ್ಯರ್ಥವಾಗದೇ ಬಾಕಿ ಇರುವ ಪ್ರಕರಣಗಳನ್ನು ಸುಗ್ರೀವಾಜ್ಞೆ ಮುಕ್ತಾಯಗೊಳಿಸಲಿದೆ. ಒಂದು ವೇಳೆ ಜಿಲ್ಲಾಧಿಕಾರಿ ಆದೇಶದ ವಿರುದ್ಧ ಹೈಕೋರ್ಟ್ನಲ್ಲಿ ಮೇಲ್ಮನವಿ ಹೋಗಿ, ಪ್ರಕರಣ ವಿಚಾರಣೆ ಹಂತದಲ್ಲಿದ್ದರೆ ಅದನ್ನು ಸುಗ್ರೀವಾಜ್ಞೆ ಆಧರಿಸಿ ವಜಾಗೊಳಿಸುವಂತೆ ಮೇಲ್ಮನವಿದಾರ ಕೋರಬಹುದು ಎಂದು ತಿಳಿಸಿದೆ.
ಕಳೆದ 45 ವರ್ಷಗಳಿಂದ ಸುಮಾರು 12,231 ಪ್ರಕರಣಗಳು ಸೆಕ್ಷನ್ 79ಎ ಮತ್ತು 80 ಅಡಿಯಲ್ಲಿ ದಾಖಲಾಗಿದ್ದು, ಇನ್ನೂ ಇತ್ಯರ್ಥವಾಗದೇ ಉಳಿದಿದ್ದು, ಸುಗ್ರೀವಾಜ್ಞೆಗೆ ಫಲ ಪಡೆದು ಅವು ಇತ್ಯರ್ಥವಾಗುವ ಸಾಧ್ಯತೆಯಿದೆ.
ಇವೆಲ್ಲವೂ, ರೈತರಿಂದ ಭೂಮಿಯನ್ನು ಕಸಿದುಕೊಳ್ಳಲು ಮಾಡಲಾಗಿರುವ ತಿದ್ದುಪಡಿಗಳಾವೆ. ರೈಷಿಯೇತರರು ಭೂಮಿಯನ್ನು ಖರೀದಿಸಿ ರಿಯಲ್ ಎಸ್ಟೇಟ್ ಮಾಫಿಯಾಕ್ಕೆ ಬಳಸಿಕೊಳ್ಳುತ್ತಾರೆ. ರೈತರ ಭೂಮಿ ಕಬಳಿಯಾಗುತ್ತದೆ. ಕೃಷಿ ಪೂರಕ ಕೃಗಾರಿಕೆಯ ಹೆಸರಿನಲ್ಲಿ ಕಾರ್ಖಾನೆಗಳು ತಲೆ ಎತ್ತುತ್ತವೆ, ತುಂಡು ಭೂಮಿ ಉಳ್ಳವರಿಂದ ಹಣದ ಆಮಿಷವೊಡ್ಡಿ ಭೂಮಿಯನ್ನು ಕಸಿದುಕೊಳ್ಳಲಾಗುತ್ತದೆ ಎಂದು ರೈತ ಮುಖಂಡರು ಆಕ್ಷೇಪಿಸಿದ್ದಾರೆ.
ರೈತರು, ಹೋರಾಟಗಾರರ ಪ್ರತಿಭಟನೆಗಳ ನಡುವೆಯೂ ರಾಜ್ಯಪಾಲರು ಕರ್ನಾಟಕ ಭೂಸುಧಾರಣಾ ಕಾಯ್ದೆ ತಿದ್ದುಪಡಿಗೆ ಅಂಕಿತ ಹಾಕಿದ್ದಾರೆ.
ಇದನ್ನೂ ಓದಿ: ಹಳ್ಳಿ ಮಾತು-6: ರೈತಾಪಿ ಬದುಕಿಗೆ ಕೊಳ್ಳಿ ಇಡುವ ವಿನಾಶಕಾರಿ ಭೂ ಸುಧಾರಣಾ ತಿದ್ದುಪಡಿಗಳು

