ಅನ್ಲಾಕ್-5: ಶಾಲಾ ಕಾಲೇಜು, ಸಿನಿಮಾ ಥಿಯೇಟರ್ ತೆರೆಯಲು ಅನುಮತಿ: ಏನೆಲ್ಲಾ ಮಾಡಬೇಕು ಗೊತ್ತೇ?
ಅಕ್ಟೋಬರ್ 01ರಿಂದ ದೇಶದಲ್ಲಿ ಕೊರೊನಾ ಅನ್ಲಾಕ್-5ನೇ ಹಂತ ಆರಂಭವಾಗಲಿದೆ. ಅನ್ಲಾಕ್-5 ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಕೆಲವು ಸಡಿಲಿಕೆಗಳನ್ನು ಮತ್ತು ನಿರ್ಬಂಧಗಳನ್ನು ವಿಧಿಸಿದೆ.
ಲಾಕ್ಡೌನ್ ನಂತರದಲ್ಲಿ ಕೇಂದ್ರ ಸರ್ಕಾರ ಹಲವು ನಿರ್ಬಂಧಗಳನ್ನು ಹಂತಹಂತವಾಗಿ ತೆರವುಗೊಳಿಸುತ್ತಿದೆ. ಆರ್ಥಿಕತೆ ದೃಷ್ಟಿಯಿಂದ ಹೆಚ್ಚಿನ ಚಟುವಟಿಕೆಗಳು ಪ್ರಾರಂಭವಾಗುವುದು ಅನಿವಾರ್ಯ ಎಂದು ಹೇಳಿರುವ ಕೇಂದ್ರ ಸರ್ಕಾರ ಅನ್ಲಾಕ್-5ನೇ ಹಂತದಲ್ಲಿ ಸಿನಿಮಾ ಥಿಯೇಟರ್ಗಳು, ಮಲ್ಟಿಪ್ಲೆಕ್ಸ್ಗಳನ್ನು ತೆರೆಯಲು ಅನುಮತಿ ನೀಡಿದೆ
ಅನ್ಲಾಕ್-5ರ ಮಾರ್ಗಸೂಚಿ:
- ಸಿನಿಮಾ ಹಾಲ್ಗಳು, ಥಿಯೇಟರ್ಗಳು, ಮಲ್ಟಿಪ್ಲೆಕ್ಸ್ಗಳನ್ನು ಪ್ರಾರಂಭಿಸಬಹುದು. ಆದರೆ ಶೇ.50ರಷ್ಟು ಮಾತ್ರ ಆಸನ ವ್ಯವಸ್ಥೆ ಇರುವುದು ಕಡ್ಡಾಯ.
- ಶಾಲೆಗಳು, ಕಾಲೇಜು, ಶೈಕ್ಷಣಿಕ, ಕೋಚಿಂಗ್ ಸಂಸ್ಥೆಗಳ ಪ್ರಾರಂಭಕ್ಕೆ ಅನುಮತಿ ನೀಡಿದ್ದು, ಅದರ ನಿರ್ಣಯ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿದೆ. ಆರೋಗ್ಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಶಾಲಾ-ಕಾಲೇಜುಗಳ ಪ್ರಾರಂಭ ಮಾಡಬಹುದು ಎಂದು ಹೇಳಲಾಗಿದೆ.
- ಬ್ಯುಸಿನೆಸ್ ಟು ಬ್ಯುಸಿನೆಸ್(ಬಿ2ಬಿ-ಎರಡು ವ್ಯವಹಾರಗಳ ಮಧ್ಯೆ ನಡೆಯುವ ಉತ್ಪನ್ನಗಳ ವಹಿವಾಟು) ಎಕ್ಸಿಬಿಷನ್ಗಳನ್ನು ಪ್ರಾರಂಭಿಸಬಹುದು. ಇದಕ್ಕೆ ಸಂಬಂಧಪಟ್ಟ ಎಸ್ಒಪಿಯನ್ನು ವಾಣಿಜ್ಯ ಇಲಾಖೆ ಶೀಘ್ರವೇ ಬಿಡುಗಡೆ ಮಾಡುತ್ತದೆ.
- ಕ್ರೀಡಾಪಟುಗಳ ತರಬೇತಿಗಾಗಿ ಸ್ವಿಮ್ಮಿಂಗ್ ಪೂಲ್ಗಳನ್ನು ಬಳಕೆ ಮಾಡಬಹುದಾಗಿದೆ. ಇದರ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್ಒಪಿ)ಯನ್ನು ಕ್ರೀಡಾ ಸಚಿವಾಲಯ ನೀಡಲಿದೆ.
- ಮನರಂಜನಾ ಉದ್ಯಾನಗಳು ಮತ್ತು ಅದನ್ನು ಹೋಲುವ ಎಲ್ಲ ಸ್ಥಳಗಳನ್ನೂ ತೆರೆಯಲು ಅನುಮತಿ ನೀಡಲಾಗಿದೆ. ಎಸ್ಒಪಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.
ಇದನ್ನೂ ಓದಿ: NLSIUನಲ್ಲಿ ಸ್ಥಳೀಯರಿಗೆ 25% ಮೀಸಲಾತಿ ತಿದ್ದುಪಡಿ ಕಾಯ್ದೆ ರದ್ದುಗೊಳಿಸಿದ ಹೈಕೋರ್ಟ್!

