ಭೂಸ್ವಾಧೀನಕ್ಕಾಗಿ ದಲಿತ ಕುಟುಂಬದ ಮೇಲೆ ಅಧಿಕಾರ ದೌರ್ಜನ್ಯ; ಜಿಲ್ಲಾಧಿಕಾರಿ, ಎಸ್‌ಪಿ ಅಮಾನತು

ಮಧ್ಯಪ್ರದೇಶದ ಗುಣಾ ಎಂಬಲ್ಲಿ ಬೆಳೆದ ಬೆಳೆಗಳನ್ನು ಅಧಿಕಾರಿಗಳ ಆಕ್ರಮಣದಿಂದ ಉಳಿಸಿಕೊಳ್ಳುವುದಕ್ಕಾಗಿ ದಲಿತ ಕುಟುಂಬವೊಂದು ಕೀಟನಾಶಕ ಸೇವಿಗೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಬಳಿಕ ಭೂಸ್ವಾಧೀನಕ್ಕಾಗಿ ದೌರ್ಜನ್ಯ ನಡೆಸಿದ ಜಿಲ್ಲಾಧಿಕಾರಿ ಎಸ್‌ ವಿಶ್ವನಾಥ್‌ ಮತ್ತು ಎಸ್‌ಪಿ ತರುಣ್‌ ನಾಯಕ್‌ ಅವರನ್ನು ಸೇವೆಯಿಂದ ತೆಗೆದುಹಾಕಲಾಗಿದೆ ಎಂದು ಮಧ್ಯಪ್ರದೇಶದ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಆದೇಶಿಸಿದ್ದಾರೆ.

ರಾಜ್‌ಕುಮಾರ್ ಅಹಿರ್ವಾರ್ ಮತ್ತು ಪತ್ನಿ ಸಾವಿತ್ರಿಯವರ ದಲಿತ ಕುಟುಂಬವೊಂದು ಗುಣಾ ಎಂಬಲ್ಲಿ ಕೃಷಿ ಜಮೀನನನ್ನು ಗುತ್ತಿಗೆ ಪಡೆದು ಜೀವನ ನಡೆಸುತ್ತಿತ್ತು. ಇತ್ತೀಚೆಗೆ, ಆ ಪ್ರದೇಶದಲ್ಲಿ ಕಾಲೇಜನ್ನು ನಿರ್ಮಿಸಲು ಸರ್ಕಾರ ಆ ಜಮೀನನ್ನು ಸ್ವಾಧೀನಪಡಿಸಿಕೊಳ್ಳುಲು ಆದೇಶಿಸಿತ್ತು.

ಮುಂಗಾರು ಸಮಯವಾದ್ದರಿಂದ ಆ ಕುಟುಂಬ ಜಮೀನಿನಲ್ಲಿ ಬೆಳೆಯನ್ನು ಬೆಳೆದಿದ್ದು, ಕಟಾವಿನ ಹಂತಕ್ಕೆ ಬಂದಿತ್ತು. ಕಾಟಾವು ಮಾಡುವ ವರೆಗೂ ಸಮಯಾವಕಾಶ ಕೊಡಿ ಎಂದು ಕುಟುಂಬ ಜಮೀನಿನಿಂದ ಒಕ್ಕಲೆಬ್ಬಿಸಲು ಬಂದ ಅಧಿಕಾರಿಗಳ ಬಳಿ ಅಂಗಲಾಚಿಕೊಂಡಿತ್ತು.

ಆದರೆ, ಅಧಿಕಾರದ ಅಹಃ ತುಂಬಿಕೊಂಡಿದ್ದ ಅಧಿಕಾರಿಗಳು, ಕೃಷಿಕ ಕುಟುಂಬದ ಅಹವಾಲನ್ನು ಕೇಳದೆ, ಜೆಸಿಬಿಗಳನ್ನು ಕೃಷಿ ಭೂಮಿಗಿಳಿಸಿ, ಬೆಳೆಗಳನ್ನು ನಾಶ ಮಾಡಲು ಮುಂದಾಗಿದ್ದಾರೆ. ಜೆಸಿಬಿಗಳನ್ನು ತಟಡೆಯಲು ಮುಂದಾದ ಕುಟುಂಬದ ಸದಸ್ಯರ ಮೇಲೆ ಪೊಲೀಸರು ಲಾಠಿಗಳಿಂದ ಥಳಿಸಿ ದರ್ಪ ಮೆರೆದಿದ್ದಾರೆ.

ಶ್ರಮ ಹಾಕಿ, ಬೆವರು ಸುರಿಸಿ ಕಷ್ಟಪಟ್ಟು ಬೆಳೆದ ಬೆಳೆ ಕಣ್ಣೆದುರೇ ನಾಶವಾಗುವುದನ್ನೂ ಕಂಡು ಸಹಿಸಲಾಗದ ಆ ದಲಿತ ಕುಟುಂಬದ ಗಂಡ ಹೆಂಡತಿ ಗುಡಿಸಲಿನಲ್ಲಿಟ್ಟಿದ್ದ ಕೀಟನಾಶಕವನ್ನು ಸೇವಿಸಿದ್ದಾರೆ.

ಕೀಟನಾಶಕ ಕುಡಿದು ಅಸ್ವಸ್ಥಗೊಂಡ ತಾಯಿಯ ಪಕ್ಕದಲ್ಲಿ ಅಳುತ್ತಿರುವ ಮಗು ಹಾಗೂ ಅಹಿರ್ವಾರ್‌ ಅವರ ಕಿರಿಯ ಸೋದರನನ್ನು ಪೊಲೀಸರು ತಳಿಸುತ್ತಿರುವ ವಿಡಿಯೋ ವೈರಲ್‌ ಆಗಿದೆ.

ಅಸ್ವಸ್ಥಗೊಂಡು ಸಾವು-ಬದುಕಿನ ನಡುವಿನ ಹೋರಾಟದಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ಅಹಿರ್ವಾರ್ ಮತ್ತು ಪತ್ನಿ ಸಾವಿತ್ರಿಯವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಕೀಟನಾಶಕ ಕುಡಿದು ಆತ್ಮಹತ್ಯೆಗೆ ಪ್ರಯತ್ನಸಿದ ನಂತರವೂ, ಸಾರ್ವಜನಿಕ ಕರ್ತವ್ಯದಲ್ಲಿದ್ದ ಅಧಿಕಾರಿಗಳನ್ನು ತಡೆದಿದ್ದಕ್ಕಾಗಿ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನಿಯಮದ ಮೇಲೆ ಆ ಕುಟುಂಬ ಹಾಗೂ ಇನ್ನಿತತರ ಮೇಲೆ ದೂರು ದಾಖಲಿಸಲಾಗಿದೆ.

Shivraj Singh Chouhan, Dalit couple suicide, Guna Dalit couple suicide, madhya pradesh news

ಪೊಲೀಸರು ಮತ್ತು ಅಧಿಕಾರಿಗಳು ರೈತ ಕುಟುಂಬದ ಮೇಲೆ ನಡೆಸಿರುವ ದೌರ್ಜನ್ಯದ ವಿಡಿಯೋ ವೈರಲ್‌ ಆದ ನಂತರ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಜಿಲ್ಲಾಧಿಕಾರಿ ಎಸ್ ವಿಶ್ವನಾಥನ್ ಮತ್ತು ಎಸ್‌ಪಿ ತರುಣ್ ನಾಯಕ್ ಅವರನ್ನು ಸೇವೆಯಿಂದ ತೆಗೆದುಹಾಕಿರುವುದಾಗಿ ಹಾಗೂ ಅವರ ವಿರುದ್ಧ ತನಿಖೆ ನಡೆಸಲು ಆದೇಶಿಸಿದ್ದಾರೆ.

ಸೇವೆಯಿಂದ ಅಮಾನತಾಗುವ ಮೊದಲು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಕಲೆಕ್ಟರ್‌ ವಿಶ್ವನಾಥನ್‌, “ಅಹಿರ್ವಾರ್ ಅವರ ಸಂಬಂಧಿಕರು ದಂಪತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಬಿಡದ ಕಾರಣ ಪೊಲೀಸರು ಬಲವನ್ನು ಬಳಸಬೇಕಾಯಿತು. ಕಾಲೇಜು ನಿರ್ಮಾಣಕ್ಕಾಗಿ ಸರ್ಕಾರ 12 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಇನ್ನೂ ವಿಳಂಬ ಮಾಡಿದಲ್ಲಿ ಅದನ್ನು ಬೇರೆ ಜಿಲ್ಲೆಗೆ ಸ್ಥಳಾಂತರಿಸಬಹುದು. ಹಾಗಾಗಿ ನಾವು ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬೇಕಾಗಿತ್ತು” ಎಂದು ಹೇಳಿದ್ದರು.

‘ಈ ಘಟನೆಯ ಬಗ್ಗೆ ಭೋಪಾಲ್‌ನ ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಾರೆ ಮತ್ತು ಘಟನೆಗೆ ಯಾರು ಹೊಣೆಗಾರರಾಗಿದ್ದಾರೆ ಎಂಬುದರ ಆಧಾರದ ಮೇಲೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ’ ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದರು.

“ಭೂಮಿಯ ಬಗ್ಗೆ ವಿವಾದವಿದ್ದರೆ, ಅದನ್ನು ಕಾನೂನುಬದ್ಧವಾಗಿ ಪರಿಹರಿಸಬಹುದಿತ್ತು… ಜನ ಸೇವಕರು (ಜನರ ಸೇವಕರು) ಎಂದು ಕರೆದುಕೊಳ್ಳುವ ಬಿಜೆಪಿ ಸರ್ಕಾರವು, ಸಾವಿರಾರು ಎಕರೆ ಸರ್ಕಾರಿ ಭೂಮಿಯನ್ನು ಆಕ್ರಮಣ ಮಾಡಿಕೊಂಡಿರುವವರನ್ನು ತೆರವುಗೊಳಿಸುವಲ್ಲಿ ಇದೇ ರೀತಿಯ ದರ್ಪವನ್ನು ತೋರುತ್ತದೆಯೇ?” ಎಂದು ಮಾಜಿ ಸಿಎಂ ಕಮಲ್ ನಾಥ್ ಕೇಳಿದ್ದಾರೆ.

“ನಮ್ಮ ಹೋರಾಟ ಈ ಅನ್ಯಾಯದ ವಿರುದ್ಧವಾಗಿದೆ” ಎಂದು ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.


ಇದನ್ನೂ ಓದಿ: RTI: ಮಾಹಿತಿಯನ್ನಷ್ಟೇ ಅಲ್ಲದೆ, ದಲಿತರಿಗೆ ನೀರಿನ ಮೂಲವನ್ನು ಒದಗಿಸಿದೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights