ಕಾಂಗ್ರೆಸ್ ಪಕ್ಷ ಸೇರಿದ ದಿವಂಗತ ಡಿಕೆ ರವಿ ಪತ್ನಿ : ರಾಜರಾಜೇಶ್ವರಿ ನಗರಕ್ಕೆ ಟಿಕೆಟ್ ದೊರೆಯುವ ಸಾಧ್ಯತೆ!
ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಪತ್ನಿ ಕುಸುಮಾ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಅವರಿಗೆ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಟಿಕೆಟ್ ದೊರೆಯುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ.
ಭಾನುವಾರ ದಿವಂಗತ ಡಿ.ಕೆ ರವಿ ಪತ್ನಿ ಕುಟುಮಾ ತಂದೆ ಹನುಮಂತರಾಯಪ್ಪ ಹಾಗೂ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಂದ ಅಧಿಕೃತವಾಗಿ ಕಾಂಗ್ರೆಸ್ ಸದಸ್ಯತ್ವವನ್ನು ಪಡೆದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಪರಮೇಶ್ವರ್, ಬೆಂಗಲುರು ಉತ್ತರ ಜಿಲ್ಲಾಧ್ಯಕ್ಷ ರಾಜಕುಮಾರ್ ಭಾಗಿಯಾಗಿದ್ದರು.
ಮಾತ್ರವಲ್ಲದೇ ಇದೇ ವೇಳೆ ಕುಸುಮಾ ತಂದೆ ಹನುಮಂತರಾಯಪ್ಪ ಬೆಂಬಲಿಗರು, ಸಿರಾ ಕ್ಷೇತ್ರದ ಬೇರೆ ಪಕ್ಷದ ನೂರಾರು ಮುಖಂಡರೂ ಸಹ ಕಾಂಗ್ರೆಸ್ ಸೇರಿ ಕೈ ಜೋಡಿಸಿದ್ದಾರೆ. ಈ ಹಿಂದೆ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರವನ್ನು ಮುನಿರತ್ನ ಕಾಂಗ್ರೆಸ್ ಪಕ್ಷದಿಂದ ಪ್ರತಿಪಾದಿಸಿದ್ದರು. ಅವರು ಬಿಜೆಪಿ ಸೇರಿದ ಬಳಿಕ ಕ್ಷೇತ್ರ ಖಾಲಿ ಉಳಿದಿತ್ತು. ಇದೇ ಕ್ಷೇತ್ರಕ್ಕೆ ಕುಸುಮಾ ಅವರ ತಂದೆ ಪ್ರತಿಪಾದಿಸಲು ಬಯಸಿದ್ದರು. ಆದರೆ ಸಾಧ್ಯವಾಗದ ಕಾರಣ ಕುಸುಮಾ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈ ಹಿಂದೆ 2015ರಲ್ಲಿ ಸಾವನ್ನಪ್ಪಿದ ಐಎಎಸ್ ಅಧಿಕಾರಿ ಸಾವಿನ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಸಿದ್ದರಾಮಯ್ಯ ಸಿಎಂ ಆಗಿದ್ದರು. ಡಿಕೆ ರವಿ ಸಾವು ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿತ್ತು. ಮಾತ್ರವಲ್ಲದೇ ಕಾಂಗ್ರೆಸ್ ಗೂ ರವಿ ಸಾವಿಗೂ ನಂಟಿದೆ ಅನ್ನೋ ಆರೋಪವೂ ಕೇಳಿ ಬಂದಿತ್ತು. ಆದರೆ ಡಿಕೆ ರವಿ ಅವರ ಪತ್ನಿ ಕುಸುಮಾ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷ ಆ ವಿವಾದದಿಂದ ಹೊರಬರುವ ಪ್ರಯತ್ನ ಮಾಡುತ್ತಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.
ಇದೇ ನವೆಂಬರ್ 3ರಂದು ಉಪಚುನಾವಣೆ ಮತದಾನ ನಡೆಯಲಿದ್ದು ಯಾವ ಅಭ್ಯರ್ಥಿಗಳಿಗೆ ಟಿಕೆಟ್ ದೊರೆಯಲಿದೆ ಎಂಬುದನ್ನ ಕಾದು ನೋಡಬೇಕಿದೆ.

