ಮಂಗನ ಕೈಗೆ ಮಾಣಿಕ್ಯ ಕೊಟ್ಟಂತಾಗಿದೆ ನಳಿನ್ ನೇತೃತ್ವದ ಬಿಜೆಪಿ: ಕರ್ನಾಟಕ ಕಾಂಗ್ರೆಸ್
ಉಪಚುನಾವಣೆಯ ನಡುವೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಠೀಲ್ ನಡುವಿನ ವಾಕ್ಸಮರ ತಾರಕ್ಕೇರುತ್ತಲೇ ಇದೆ. ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಅವರದು ನಾಯಿ ಪಾಡಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಲೇವಡಿ ಮಾಡಿದ್ದರು. ನಳಿನ್ ಹೇಳಿಕೆಗೆ ತಿರುಗೇಟು ನೀಡಿರುವ ಕರ್ನಾಟಕ ಕಾಂಗ್ರೆಸ್, ಮಂಗನ ಕೈಗೆ ಮಾಣಿಕ್ಯ ಕೊಟ್ಟರೆ..? ಏನಾಗುತ್ತದೆ ಎನ್ನುವ ಗಾದೆಗೆ ಬಿಜೆಪಿ ರಾಜ್ಯಾಧ್ಯಕ್ಷ ಕಾಮಿಡಿ ಆಕ್ಟರ್ ನಳೀನ್ ಕುಮಾರ್ ಕಟೀಲ್ ಸಾಕ್ಷಿ ಎಂದು ಟ್ವೀಟ್ ಮಾಡಿದೆ.
ಮಂಗನ ಕೈಗೆ ಮಾಣಿಕ್ಯ ಕೊಟ್ಟರೆ..? ಏನಾಗುತ್ತದೆ ಎನ್ನುವ ಗಾದೆಗೆ ಬಿಜೆಪಿ ರಾಜ್ಯಾಧ್ಯಕ್ಷ ಕಾಮಿಡಿ ಆಕ್ಟರ್ ನಳೀನ್ ಕುಮಾರ್ ಕಟೀಲ್ ಸಾಕ್ಷಿ. ಇವರ ಮಾತಲ್ಲಿ ಘನತೆ, ಗೌರವ, ಬದ್ಧತೆ, ಯಾವುದೂ ಇಲ್ಲ. ಸಿದ್ದರಾಮಯ್ಯ ಸರ್ವಜನಾಂಗದ ನಾಯಕ, ಹಣಕಾಸು ತಜ್ಞ, 168 ಯೋಜನೆಗಳನ್ನು ಘೋಷಿಸಿ ಜಾರಿಗೊಳಿಸಿ ನುಡಿದಂತೆ ನೆಡೆದ ಹೆಮ್ಮೆಯ ಮುಖ್ಯಮಂತ್ರಿಯಾಗಿದ್ದರು ಎಂದು ಕಾಂಗ್ರೆಸ್ ಹೇಳಿದೆ.
ಒಂದು ಪಂಪ್ವೆಲ್ ಮೇಲ್ಸೇತುವೆಯನ್ನು ಸಮಯಕ್ಕೆ ತಕ್ಕಂತೆ ಮುಗಿಸಲಾಗದ ನಳೀನ್ ಕುಮಾರ್ ಕಟೀಲ್ ಅವರಿಗೆ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ, ನಮ್ಮ ಪ್ರತಿ ಕಾರ್ಯಕರ್ತರಲ್ಲೂ ಸಿದ್ದರಾಮಯ್ಯನವರ ಬಗ್ಗೆ ಅದಮ್ಯವಾದ ಗೌರವವಿದೆ ಎಂದು ಕೆಪಿಸಿಸಿ ಹೇಳಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪದೇ ಪದೇ ಅವಹೇಳನ ಮಾಡುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ರಿಗೆ ಕನಿಷ್ಠ ನೋಟಿಸನ್ನೂ ಕೊಡದಿದ್ದಿದ್ದು, ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಭೇಟಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಣ್ಣ ಸಮಯ ಕೊಡದಿದ್ದನ್ನು ನೋಡಿದರೆ ರಾಜ್ಯ ಬಿಜೆಪಿ ಯಾವ ಪಾಡಿನಲ್ಲಿದೆ ಎಂದು ತಿಳಿಯುತ್ತದೆ. ಮೊದಲು ಬಿಜೆಪಿ ಪಕ್ಷ ಕಟ್ಟಿದ ಯಡಿಯೂರಪ್ಪ ಅವರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಕೆಪಿಸಿಸಿ ತಿರುಗೇಟು ನೀಡಿದೆ.
ಕಟೀಲ್ ತಮ್ಮ ನಡೆ-ನುಡಿಯ ಮೂಲಕ ತಾವೊಬ್ಬ ಅಪ್ರಬುದ್ಧ, ಅನಾಗರಿಕ, ಸಡಿಲ ನಾಲಿಗೆಯ ಯಕಶ್ಚಿತ್ ರಾಜಕಾರಣಿ ಎಂದು ಮತ್ತೆ ಮತ್ತೆ ಸಾಬೀತು ಮಾಡುತ್ತಿದ್ದಾರೆ. ಬಿಜೆಪಿಯ ಮಾನ ಹರಾಜು ಹಾಕಲು ನಳಿನ್ ಕುಮಾರ್ ಕಟೀಲ್ ಒಬ್ಬರೇ ಸಾಕು. ಅವರು ಇದೇ ರೀತಿ ಮಾತನಾಡುತ್ತಾ ಬಿಜೆಪಿಯ ಬಣ್ಣ ಬಯಲು ಮಾಡುತ್ತಲೇ ಇರಲಿ ಎಂದು ಸಲಹೆ ನೀಡಿದ್ದಾರೆ.
ಇದನ್ನು ಓದಿ: ಪ್ರವಾಹ ಪರಿಸ್ಥಿತಿ ನಿಭಾಯಿಸಲು ಸಲಹೆ ನೀಡಿ, ಮೊಬೈಲ್ ಗೆಲ್ಲಿ: ಯೂತ್ ಕಾಂಗ್ರೆಸ್ ಹೊಸ ಅಭಿಯಾನ