ಅನುಮತಿ ಇಲ್ಲದೆ ಉಸ್ಮಾನಿಯಾ ವಿವಿಗೆ ಪ್ರವೇಶ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕ್ರಿಮಿನಲ್ ಕೇಸ್!
ಉಸ್ಮಾನಿಯಾ ವಿಶ್ವವಿದ್ಯಾಲಯಕ್ಕೆ ಅನುಮತಿ ಇಲ್ಲದೆ ಪ್ರವೇಶಿಸಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹೈದರಾಬಾದ್ ಪೊಲೀಸರು ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ.
ತೇಜಸ್ವಿ ಸೂರ್ಯ ಅನುಮತಿ ಇಲ್ಲದೆ ಯೂನಿವರ್ಸಿಟಿ ಕ್ಯಾಂಪಸ್ ಒಳಗೆ ಪ್ರವೇಶಿಸಿದ್ದಾರೆ ಎಂದು ಉಸ್ಮಾನಿಯಾ ವಿವಿಯ ರಿಜಿಸ್ಟಾರ್ ದೂರು ನೀಡಿದ್ದು, ಅವರ ದೂರಿನ ಅನ್ವಯ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ ಎಂದು ತೆಲಂಗಾಣ ಪೊಲೀಸ್ ಮುಖ್ಯಸ್ಥ ಮಹೇಂದರ್ ರೆಡ್ಡಿ ತಿಳಿಸಿದ್ದಾರೆ.
ಡಿಸೆಂಬರ್‌ನಲ್ಲಿ ನಡೆಯುವ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್‌ಎಂಸಿ) ಚುನಾವಣೆಗೆ ತೇಜಸ್ವಿ ಸೂರ್ಯ ಪ್ರಚಾರ ನಡೆಸುತ್ತಿದ್ದಾರೆ. ಹೈದರಾಬಾದ್ ಸಂಸದ ಮತ್ತು ಎಐಎಂಐಎಂ ನಾಯಕ ಅಸದುದ್ದೀನ್ ಒವೈಸಿ ಮತ್ತು ತೆಲಂಗಾಣದ ಆಡಳಿತ ಪಕ್ಷದ ಟಿಆರ್‌ಎಸ್ (ತೆಲಂಗಾಣ ರಾಷ್ಟ್ರ ಸಮಿತಿ) ಯನ್ನು ಗುರಿಯಾಗಿಸಿಕೊಂಡು ಅವರು ಹಲವಾರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.
ಉಸ್ಮಾನಿಯ ವಿವಿಗೆ ಅತಿಕ್ರಮವಾಗಿ ಪ್ರವೇಶಿಸಿದ ತೇಜಸ್ವಿ ಸೂರ್ಯ, ವಿವಿಯ ಗೇಟ್‌ಗಳಲ್ಲಿ ಹಾಕಿದ್ದ ಬ್ಯಾರಿಕೇಡ್‌ಗಳು ಮತ್ತು ಮುಳ್ಳುತಂತಿಗಳನ್ನು ಅನುಮತಿ ಇಲ್ಲದೆ ತೆಗೆದು ಒಳಹೋಗಿದ್ದಾರೆ. ಆರ್ಟ್ಸ್ ಕಾಲೇಜು ಕಟ್ಟಡದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ.
ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (ಕೆಸಿಆರ್) ಅವರ ಆದೇಶದ ಮೇರೆಗೆ ಕ್ಯಾಂಪಸ್‌ನಲ್ಲಿ ಪೊಲೀಸರು ತಮ್ಮ ಪ್ರವೇಶವನ್ನು ನಿರ್ಬಂಧಿಸಿದ್ದಾರೆ ಎಂದು ಸೂರ್ಯ ಆರೋಪಿಸಿದ್ದರು.
“ನಾವು ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ತೆಲಂಗಾಣ ಚಳವಳಿಯ ಹುತಾತ್ಮರಿಗೆ ಗೌರವ ಸಲ್ಲಿಸಲು ಬಯಸಿದ್ದೆವು. ಆದರೆ ಕೆಸಿಆರ್ ವಿವಿಯ ದ್ವಾರಗಳನ್ನು ಮುಚ್ಚಿಸಿದ್ದರು” ಎಂದು ಸೂರ್ಯ ಹೇಳಿದ್ದಾರೆ.
ತೇಜಸ್ವಿ ಸೂರ್ಯ ಮಾಡಿರುವ ಆರೋಪವನ್ನು ತಿರಸ್ಕರಿಸಿರುವ ಪೊಲೀಸರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗಷ್ಟೇ ಪ್ರವೇಶ ನೀಡಲು ವಿಶ್ವವಿದ್ಯಾನಿಲಯವೇ ಬ್ಯಾರಿಕೇಡ್ ಹಾಕಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಏಷ್ಯಾದಲ್ಲೇ ಅತ್ಯಂತ ಭ್ರಷ್ಟ ರಾಷ್ಟ್ರ ಭಾರತ: ಸಮೀಕ್ಷಾ ವರದಿ

