ರಾಜಸ್ಥಾನ ಚುನಾವಣೆ: ಅತಿ ಹೆಚ್ಚು ಸ್ಥಾನಗಳನ್ನು ಗೆದ್ದ ಬಿಜೆಪಿ; ಕಾಂಗ್ರೆಸ್ಗೆ ನಿರಾಸೆ!
ರಾಜಸ್ಥಾನದ 33 ಜಿಲ್ಲೆಗಳ ಪೈಕಿ 21 ಜಿಲ್ಲೆಗಳಲ್ಲಿ ನಡೆದ ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡಿದೆ. ರಾಜಸ್ಥಾನ ಆತಡಳಿತಾರೂಢ ಕಾಂಗ್ರೆಸ್ ಪಕ್ಷವು ಎರಡನೇ ಸ್ಥಾನಕ್ಕೆ ಕುಸಿದಿದ್ದು, ನಿರಾಸೆಯನ್ನು ಅನುಭವಿಸಿದೆ.
ಹಳ್ಳಿಗಳ ಪಂಚಾಯತ್ ಸಮಿತಿ ಚುನಾವಣೆಯಲ್ಲಿ 4,371 ಸ್ಥಾನಗಳ ಪೈಕಿ ಬಿಜೆಪಿ 1,989 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ 1,852 ಸ್ಥಾನಗಳಲ್ಲಿ ಜಯಗಳಿಸಿದೆ. ಸ್ವತಂತ್ರ ಅಭ್ಯರ್ಥಿಗಳು 439 ಸ್ಥಾನಗಳಲ್ಲಿ ಗೆದ್ದಿದ್ದರೆ, ಆರ್ಎಲ್ಪಿ ಪಕ್ಷ 60, ಸಿಪಿಎ 26 ಮತ್ತು ಬಿಎಸ್ಪಿ 05 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಚುನಾವಣೆ ನಡೆದ ಒಟ್ಟು 222 ಪಂಚಾಯತ್ ಸಮಿತಿಗಳಲ್ಲಿ, 93 ಪಂಚಾಯತ್ ಸಮಿಟಿಗಳಲ್ಲಿ ಬಿಜೆಪಿ ಸಂಪೂರ್ಣ ಬಹುಮತವನ್ನು ಗಳಿಸಿದರೆ, ಕಾಂಗ್ರೆಸ್ ಕೇವಲ 81 ಸಮಿತಿಗಳಲ್ಲಿ ಬಹುಮತ ಪಡೆದುಕೊಂಡಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೆ, 21 ಜಿಲ್ಲಾ ಪರಿಷತ್ಗಳಿಗೂ ಚುನಾವಣೆ ನಡೆಸಿದ್ದು, ಪರಿಷತ್ಗಳ 636 ಸ್ಥಾನಗಳ ಪೈಕಿ ಬಿಜೆಪಿ 353 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 252 ಸ್ಥಾನಗಳನ್ನು ಗೆದ್ದಿದೆ. ಸ್ವತಂತ್ರ ಅಭ್ಯರ್ಥಿಗಳು 18, ಆರ್ಎಲ್ಪಿ 10 ಮತ್ತು ಸಿಪಿಎಂ ಎರಡು ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ. ಒಂದು ಜಿಲ್ಲಾ ಪರಿಷತ್ ಫಲಿತಾಂಶವನ್ನು ಇನ್ನೂ ಘೋಷಿಸಲಾಗಿಲ್ಲ.
13 ಜಿಲಾ ಪರಿಷತ್ಗಳಲ್ಲಿ ಬಿಜೆಪಿ ಬಹುಮತದಲ್ಲಿದೆ ಮತ್ತು ಮಿತ್ರಪಕ್ಷ ಆರ್ಎಲ್ಪಿ ಸಹಾಯದಿಂದ ನಾಗೌರ್ ಮತ್ತು ಬಾರ್ಮರ್ನಲ್ಲಿಲ್ಲೂ ಬಿಜೆಪಿ ನೇತೃತ್ವದ ಆಡಳಿತ ರಚನೆಯಾಗಲಿದೆ. ಉಳಿದ ಐದು ಜಿಲ್ಲಾ ಪರಿಷತ್ಗಳನ್ನು ಕಾಂಗ್ರೆಸ್ ಗೆದ್ದಿದೆ.
ರಾಜಸ್ಥಾನದ 21 ಜಿಲ್ಲೆಗಳಲ್ಲಿ ಚುನಾವಣೆಯು ನವೆಂಬರ್ 23 ಮತ್ತು 29, ಡಿಸೆಂಬರ್ 1 ಮತ್ತು 5 ರಂದು ನಾಲ್ಕು ಹಂತಗಳಲ್ಲಿ ನಡೆದಿತ್ತು. ನಿನ್ನೆ ಚುನಾವಣಾ ಫಲಿತಾಂಶ ಹೊರಬಿದ್ದಿದೆ.
ಇದನ್ನೂ ಓದಿ: ಗೋಹತ್ಯೆ ನಿಷೇಧ ಮಸೂದೆ: ವಿಧಾನಸಭೆಯಲ್ಲಿ ಚರ್ಚೆಗೆ ತರದೇ ಅಂಗೀಕರಿಸಿದ ಬಿಜೆಪಿ ಸರ್ಕಾರ!

