ಟ್ರಂಪ್ ಮತ್ತು ಬಿಜೆಪಿ ಬೆಂಬಲಿಗರಿಗೆ ವ್ಯತ್ಯಾಸವಿಲ್ಲ; BJP ಸೋತರೆ ಇವರೂ ಹಾಗೆ ವರ್ತಿಸುತ್ತಾರೆ: ಮಮತಾ ಬ್ಯಾನರ್ಜಿ
ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಸೋತಿದ್ದರೂ ಅದನ್ನು ಟ್ರಂಪ್ ಬೆಂಬಲಿಗರು ಒಪ್ಪಿಕೊಳ್ಳದೆ ದಾಂದಲೆ ನಡೆಸಿದ್ದಾರೆ. ಅಮೆರಿಕಾ ಸಂಸತ್ ಭವನದ ಮೇಲೆ ದಾಳಿ ನಡೆಸಿರುವ ಟ್ರಂಪ್ ಬೆಂಬಲಿಗರಿಗೂ, ಭಾರತದ ಬಿಜೆಪಿ ಬೆಂಬಲಿಗರಿಗೂ ಯಾವುದೇ ವ್ಯತ್ಯಾಸವಿಲ್ಲ. ದೇಶದಲ್ಲಿ ಬಿಜೆಪಿ ಸೋತರೆ, ಅವರ ವರ್ತನೆಗಳೂ ಹೀಗೆ ಇರಲಿವೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.
ಅಮೆರಿಕಾ ಚುನಾವಣೆಯಲ್ಲಿ ಜೋ ಬೈಡೆನ್ ಗೆಲುವು ಸಾಧಿಸಿದ್ದಾರೆ ಎಂದು ಅಮೆರಿಕಾದ ಸಂಸತ್ನಲ್ಲಿ ಘೋಷಣೆಯಾದ ಸಂದರ್ಭದಲ್ಲಿ ಟ್ರಂಪ್ ಬೆಂಬಲಿಗರು ಸಂಸತ್ ಭವನದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ನಾಲ್ವರು ಸಾವನ್ನಪ್ಪಿದ್ದಾರೆ.
ಈ ಘಟನೆಯ ಬಗ್ಗೆ ಮಾತನಾಡಿರುವ ಬ್ಯಾನರ್ಜಿ, “ನೀವು ಅವರನ್ನು ನೋಡಲಿಲ್ಲವೇ? ಸೋತರೂ ತಾನು ಗೆದ್ದಿದ್ದೇನೆ ಎಂದು ಟ್ರಂಪ್ ಹೇಳುತ್ತಲೇ ಇದ್ದಾರೆ. ಅವರ ಬೆಂಬಲಿಗರು ಸಂಸತ್ ಮೇಲೆ ದಾಳಿ ಮಾಡಿದ್ದಾರೆ. ಅದೇ ರೀತಿ ಇಲ್ಲಿ ನಾವು ಗೆದ್ದಿದ್ದೇವೆ-ಗೆದ್ದಿದ್ದೇವೆ ಎಂದು ಬಿಜೆಪಿಗರು ಅಂತದ್ದೇ ವರ್ತನೆ ತೋರುತ್ತಾರೆ. ಅಮೆರಿಕಾದ ಟ್ರಂಪ್ ಬೆಂಬಲಿಗರಿಗೂ, ಭಾರತದ ಬಿಜೆಪಿ ಬೆಂಬಲಿಗರಿಗೂ ಯಾವುದೇ ರೀತಿಯ ವ್ಯತ್ಯಾಸವಿಲ್ಲ ಎಂದು ಹೇಳಿದ್ದಾರೆ.
“ಬಿಜೆಪಿ ಪಕ್ಷವು ನನ್ನ ಬಗ್ಗೆ ಭಯಭೀತವಾಗಿದೆ. ನನ್ನನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿದಿದೆ. ನಾನು ಹೋರಾಟದಲ್ಲಿ ಮುಂದೆ ನಿಲ್ಲುತ್ತೇನೆ. ಅವರಿಗೆ ಬಂಗಾಳವನ್ನು ಮಾರಾಟ ಮಾಡಲು ನಾನು ಬದುಕಿರುವವರೆಗೆ ಬಿಡುವುದಿಲ್ಲ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ‘ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವವರೆಗೂ ನಿದ್ದೆ ಮಾಡುವುದಿಲ್ಲ’ – ಸುವೆಂದು ಅಧಿಕಾರಿ

