ಪೊಲೀಸ್ ಭದ್ರತೆ ವಾಪಸ್ ಪಡೆದು ಯತ್ನಾಳ್ ಗೆ ಬಿಸಿಮುಟ್ಟಿಸಿದ ಸಿಎಂ..!

ಸಿಡಿ ಕೋಟಾದಲ್ಲಿ ಕೆಲವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಆರೋಪಿಸಿದ್ದ ಶಾಸಕ ಬಸನಗೌಡ ಯತ್ನಾಳ್ ಗೆ  ಸಿಎಂ ಯಡಿಯೂರಪ್ಪ ಸೈಲೆಂಟಾಗಿ ಪಾಠ ಕಲಿಸಿದ್ದಾರೆ.

ಹೌದು.. ಬಿಜೆಪಿ ಶಾಸಕರ ಮುನಿಸಿಗೆ ಕಾರಣವಾದ ಸಚಿವ ಸ್ಥಾನದ ವಿಚಾರ ಆರೋಪ ಮತ್ತು ಪ್ರತ್ಯಾರೋಪಕ್ಕೆ ನಾಂದಿ ಹಾಡಿದೆ. ಪಕ್ಷಕ್ಕೆ ಬದ್ಧರಾಗಿದ್ದ ಸಚಿವಾಕಾಂಕ್ಷಿಗಳಿಗೆ ನಿರಾಸೆ ಮೂಡಿಸಿ ಸಿಡಿ ಬೆದರಿಕೆ ಹಾಕಿದವರಿಗೆ ಮತ್ತು ಹಣ ನೀಡಿದವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಶಾಸಕ ಬಸನಗೌಡ ಯತ್ನಾಳ್ ಆರೋಪ ಮಾಡಿದ್ದರು. ಮಾತ್ರವಲ್ಲದೇ ಈ ಸಿಡಿ ಹಾಗೂ ಹಣವನ್ನು ಯಡಿಯೂರಪ್ಪನ ಪುತ್ರ ವಿಜಯೇಂದ್ರನಿಗೆ ನೀಡಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲಾಗಿದೆ ಎಂದು ಯತ್ನಾಳ್ ಹೇಳಿದ್ದರು.

ಯತ್ನಾಳ್ ಹೇಳಿಕೆಗೆ ಸ್ವಪಕ್ಷದವರೇ ಬಿಜೆಪಿ ಬಗ್ಗೆ ಮಾತನಾಡುತ್ತಿದ್ದಾರೆ ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದರು. ಯತ್ನಾಲ್ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಸಿಎಂ ಎಚ್ಚೆತ್ತುಕೊಂಡಿದ್ದಾರೆ. ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವಂತಹ ಇಂತಹ ಹೇಳಿಕೆಗಳಿಗೆ ಕಡಿವಾಣ ಹಾಕಲು ಸಿಎಂ ಮುಂದಾಗಿದ್ದಾರೆ.

ಇದರ ಬೆನ್ನಲ್ಲೇ ಯತ್ನಾಳ್ ಗೆ ನೀಡಿದ್ದ ಪೊಲೀಸ್ ಭದ್ರತೆಯನ್ನು ಹಿಂಪಡೆಯಲಾಗಿದೆ. ಇದರಿಂದ ಕೆಂಡವಾದ ಯತ್ನಾಳ್ ನನಗೆ ಏನಾದ್ರು ಸಮಸ್ಯೆ ಆದರೆ ಅದಕ್ಕೆ ನೇರವಾಗಿ ಸರ್ಕಾರವೇ ಹೊಣೆ ಎಂದಿದ್ದಾರೆ. ಭದ್ರತೆ ಹಿಂದಕ್ಕೆ ಪಡೆದಿರುವ ಬಗ್ಗೆ ಸಿಎಂ ಯಡಿಯೂರಪ್ಪ, ಗೇಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಯತ್ನಾಳ್ ಪತ್ರ ಬರೆದಿದ್ದಾರೆ. “ನನ್ನ ಹಿಂದೂಪರ, ಜನಪರ, ಅನ್ಯಾಯದ ವಿರುದ್ಧದ ಹೋರಾಟವನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಪತ್ರದಲ್ಲಿ ಬರೆದಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights