ಯೋಗೇಶ್ವರ್ ಮಂಡ್ಯದಿಂದ ಗೆದ್ದಿಲ್ಲ; ಮಂಡ್ಯ ಉಸ್ತುವಾರಿ ನಾನೇ: ಸಚಿವ ನಾರಾಯಣಗೌಡ
ಮಂಡ್ಯದಿಂದ ಗೆದ್ದು ಬಂದಿರುವ ನಾನು. ಸಿಪಿ ಯೋಗೇಶ್ವರ್ ಅಲ್ಲ. ಮಂಡ್ಯ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ನಾನು ಯಾರಿಗೂ ಬಿಟ್ಟುಕೊಡುವುದಿಲ್ಲ. ನೂತನ ಸಚಿವ ಸಿ.ಪಿ. ಯೋಗೇಶ್ವರ್ ಗೆ ಈ ಉಸ್ತುವಾರಿ ನೀಡಲು ಸಾಧ್ಯವೇ ಇಲ್ಲ ಎಂದು ಯುವಜನಸೇವೆ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಹೇಳಿದ್ದಾರೆ.
ಖಾತೆ ಹಂಚಿಕೆ ನಂತರ ಎದ್ದಿರುವ ಜಿಲ್ಲಾ ಉಸ್ತುವಾರಿ ವಿಚಾರದಲ್ಲಿ ತಾಕಲಾಟ ನಡೆದಿರುವ ಬೆನ್ನಲ್ಲೇ ಇದೀಗ ಸಚಿವ ನಾರಾಯಣ ಗೌಡ ನೇರವಾಗಿಯೇ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಮಂಡ್ಯದಿಂದ ನಾನು ಗೆದ್ದು ಬಂದಿದ್ದೇನೆ. ಸಿ.ಪಿ. ಯೋಗೇಶ್ವರ್ ಏನಾದರೂ ಮಂಡ್ಯದಿಂದ ಗೆದ್ದಿ ಬಂದಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಈಗಲೂ ನಾನೇ ಮಂಡ್ಯ ಉಸ್ತುವಾರಿ, ಮುಂದೆಯೂ ನಾನಾ ಆಗಿರುತ್ತೇನೆ. ಯಾವುದೇ ಕಾರಣಕ್ಕೂ ಮಂಡ್ಯ ಉಸ್ತುವಾರಿ ಬದಲಾವಣೆಯಾಗುವುದಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ನನ್ನನ್ನು ಕೇಳದೆ ಹೇಗೆ ಉಸ್ತುವಾರಿ ಬದಲಾವಣೆ ಮಾಡುತ್ತಾರೆ. ಯೋಗೇಶ್ವರ್ ಅವರನ್ನು ಮಂಡ್ಯ ಉಸ್ತುವಾರಿ ಮಾಡಲು ಹೇಗೆ ಸಾಧ್ಯ? ಎಂದು ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಪಿ ಯೋಗೇಶ್ವರ್ ಅವರ ಇಲಾಖೆಗೆ ಸಂಬಂಧಿಸಿದಂತೆ ಏನು ಕೆಲಸ ಇದೆಯೋ ಅದನ್ನು ಮಾಡಿಕೊಂಡು ಹೋಗಲಿ. ಆದರೆ ಅವರಿಗೆ ಮಂಡ್ಯ ಉಸ್ತುವಾರಿ ಕೊಡುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: RSS, BJP ನಾಯಕರ ಹೆಸರಲ್ಲಿ ವಂಚನೆ; ಯುವರಾಜ್ ಆಸ್ತಿ ಮುಟ್ಟುಗೋಲು ಹಾಕಲು ಕೋರ್ಟ್ ಆದೇಶ!

