ಯುಪಿಯ ಏಳು ವರ್ಷದ ಹಿಂದಿನ ಫೋಟೋ ರೈತರ ಪ್ರತಿಭಟನೆಯದೆಂದು ವೈರಲ್!

ದೆಹಲಿ ಗಡಿ ಭಾಗದಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ರೈತರ ಪ್ರತಿಭಟನೆಯ ಶಾಂತಿ ಕದಡುವಂತಹ ಕೆಲಸ ಕಾಣದ ಕೈಗಳು ಮಾಡುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವೊಂದು ವೈರಲ್ ಆಗಿದೆ.

ದೆಹಲಿಯಲ್ಲಿ ಮೂರು ಕೃಷಿ ಕಾನೂನುಗಳ ವಿರುದ್ಧ ನಡೆಸುತ್ತಿರುವ ರೈತರ ಪ್ರತಿಭಟನೆ ಮಧ್ಯೆ, ಮೋದಿ ಟೀ ಶರ್ಟ್ ಧರಿಸಿದ ವ್ಯಕ್ತಿಯೊಬ್ಬರು ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸುತ್ತಿರುವ ಚಿತ್ರ ವೈರಲ್ ಆಗಿದೆ. ಮಾತ್ರವಲ್ಲದೇ ನಡೆಯುತ್ತಿರುವ ರೈತರ ಪ್ರತಿಭಟನೆಯೊಂದಿಗೆ ಚಿತ್ರವನ್ನು ಲಿಂಕ್ ಮಾಡಲಾಗಿದೆ.

ಬಹು ಟ್ವಿಟರ್ ಮತ್ತು ಫೇಸ್‌ಬುಕ್ ಬಳಕೆದಾರರು ಈ ಚಿತ್ರವನ್ನು ಬಾಂಗ್ಲಾ, ಹಿಂದಿ ಮತ್ತು ಇಂಗ್ಲಿಷ್ ಶೀರ್ಷಿಕೆಗಳೊಂದಿಗೆ ಪೋಸ್ಟ್ ಮಾಡಿದ್ದಾರೆ.

ಬಾಂಗ್ಲಾ ಶೀರ್ಷಿಕೆಯೊಂದಿಗೆ ಕೆಲವು ಪೋಸ್ಟ್‌ಗಳ ಪ್ರಕಾರ, ಚಿತ್ರದಲ್ಲಿರುವ ವ್ಯಕ್ತಿಯು ಕೃಷಿಕನ ವೇಷ ಧರಿಸಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಯನ್ನು ಕೆಣಕಲು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಅವರ ಗುರುತು ಅವರು ಧರಿಸಿರುವ ಮೋದಿ ಟೀ ಶರ್ಟ್‌ನಲ್ಲಿದೆ ಎಂದು ಶೀರ್ಷಿಕೆ ತಿಳಿಸಿದೆ.

ಆದರೆ ಈ ವೈರಲ್ ಚಿತ್ರ ಏಳು ವರ್ಷ ಹಳೆಯದು. ಜೊತೆಗೆ ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು ಸದ್ಯ ನಡೆಯುತ್ತಿರುವ ರೈತರ ಪ್ರತಿಭಟನೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. 2014 ರ ಜೂನ್ 30 ರಂದು ರಾಜ್ಯದಲ್ಲಿ ಅಪರಾಧ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ಅಖಿಲೇಶ್ ಯಾದವ್ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತರು ಯುಪಿ ಯಲ್ಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದರು. ಈ ವೇಳೆ ಕ್ಲಿಕ್ಕಿಸಿದ ಫೋಟೋ ಇದು.

ಕಳೆದ ವರ್ಷ ಇದೇ ಫೋಟೋ ಸುಳ್ಳು ಹೇಳಿಕೆಯೊಂದಿಗೆ ವೈರಲ್‌ ಆಗಿತ್ತು. ಇಲ್ಲಿ ಮತ್ತೆ ಚಿತ್ರ ವೈರಲ್ ಆಗಿದ್ದು, ಇದು ನಡೆಯುತ್ತಿರುವ ರೈತರ ಆಂದೋಲನಕ್ಕೆ ಸಂಬಂಧಿಸಿದ್ದಲ್ಲ ಎನ್ನುವುದು ದೃಢಪಟ್ಟಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights