ಛಲವಿದ್ದರೆ ಪರ್ವತವೂ ಚಿಕ್ಕದೇ; ಕನಸಿನ ಬೆನ್ನುಹತ್ತಿ 50ನೇ ವಯಸ್ಸಿಗೆ ವಕೀಲೆಯಾದ ಮಹಿಳೆ!

ವಕೀಲರಾಗಬೇಕು ಎಂದು ಕನಸುಹೊತ್ತಿದ್ದ ಕೇರಳದ ಕುಟ್ಟಿಚಾಲ್ ಮೂಲದ ವಿ ಜಯಶ್ರೀ, ತಮ್ಮ 50ನೇ ವಯಸ್ಸಿನಲ್ಲಿಯೂ ಅವರ ಕನಸುಗಳನ್ನು ಬದಿಗೊತ್ತದೇ ಕನಸನ್ನು ನನಸು ಮಾಡಿದ್ದಾರೆ. ಕೇರಳ ವಿಶ್ವವಿದ್ಯಾಲಯದ ಎಲ್‌ಎಲ್‌ಬಿ ಪರೀಕ್ಷೆಯಲ್ಲಿ ಮೂರನೇ ರ್ಯಾಂಕ್ ಪಡೆದಿರುವ ಅವರು ತಿರುವನಂತಪುರಂನ ವಂಚಿಯೂರ್ ಜಿಲ್ಲಾ ನ್ಯಾಯಾಲಯದಲ್ಲಿ ಕಿರಿಯ ವಕೀಲರಾಗಿ ಅಭ್ಯಾಸ ಮಾಡುತ್ತಿದ್ದಾರೆ.

ಖಾಸಗಿ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಜಯಶ್ರೀ ಅವರಿಗೆ ವಕೀಲರಾಗಬೇಕು ಎಂಬ ಬಯಕೆ ಕಳೆಗುಂದಿರಲಿಲ್ಲ. ಅವರು ತಮ್ಮ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಬೇಕಾದ ಪರಿಸ್ಥಿತಿ ಎದುರಾಗಿದ್ದರಿಂದಾಗಿ ಅವರು ತಮ್ಮ ಕನಸಿನ ವೃತ್ತಿಯನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ಮದುವೆಯ ನಂತರವೂ ವೃತ್ತಿಯನ್ನು ಮುಂದುವರೆಸಿದೆ. “ನನ್ನ ತಾಳ್ಮೆ ಮತ್ತು ಕಠಿಣ ಪರಿಶ್ರಮ ಫಲ ​​ನೀಡಿತು. ಇಂದು ನಾನು ವಕೀಲೆಯಾಗಿದ್ದೇನೆ” ಎಂದು ಅವರು ಹೇಳಿದ್ದಾರೆ.

ವೃತ್ತಿಯನ್ನು ಮಾಡುತ್ತಿದ್ದ ಅವರು ತಮ್ಮ ಜೀವನವನ್ನು ಬದಲಾಯಿಸುವ ನಿರ್ಧಾರವನ್ನು ತೆಗೆದುಕೊಂಡರು. ಅದಕ್ಕಾಗಿ 2017 ರಲ್ಲಿ ಪೆರೂರ್‌ಕಾಡಾದ ಕೇರಳ ಕಾನೂನು ಅಕಾಡೆಮಿಯಲ್ಲಿ ಮೂರು ವರ್ಷದ ಎಲ್ಎಲ್‌ಬಿ ಸಂಜೆ ಕೋರ್ಸ್‌ಗೆ ಸೇರಿದರು. ಅವರ ವಿದ್ಯಾಭ್ಯಾಸಕ್ಕೆ ಅವರ ಪತಿಯೂ ಬೆಂಬಲವಾಗಿ ನಿಂತರು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಡವರಿಗಾಗಿ ಪ್ರತಿದಿನ 20 ಕಿ.ಮೀ ಓಡುತ್ತಿದ್ದಾರೆ ನಟಿ ಸುಮನ್ ನಗರ್‌ ಕರ್

ಅವರು ಕಾಲೇಜು ಸೇರಿದರೂ, ಕುಟುಂಬದವರು ಅವರಿಗೆ ಪ್ರೋತ್ಸಾಹ ನೀಡಿದರೂ, ಅವರ ಪ್ರಯಾಣ ಸುಲಭದ್ದಾಗಿರಲಿಲ್ಲ. ದಿನದ ಕೆಲಸ ಮುಗಿದ ನಂತರ ಸಂಜೆ 06 ಗಂಟೆಯ ವೇಳೆಗೆ ಅವರು ತರಗತಿಗೆ ಹೋಗಬೇಕಿತ್ತು. ಕುಟ್ಟಿಚಾಲ್‌ನಿಂದ ಅವರ ಕಾಲೇಜಿಗೆ ತೆರಳಲು ಸಂಪರ್ಕ ಕಲ್ಪಿಸುವ ಬಸ್‌ ಇರಲಿಲ್ಲ. ಅದಕ್ಕಾಗಿ ಅವರ ಪತಿ ಕಾಲೇಜು ಮುಗಿಯುವ ತನಕವೂ ಕಾಲೇಜಿನ ಬಳಿ ಕಾಯುತ್ತಿದ್ದರು. ತರಗತಿ ಮುಗಿದ ನಂತರ ರಾತ್ರಿ 9.30 ರ ಹೊತ್ತಿಗೆ ಅವರು ಮನೆಗೆ ತಲುಪುತ್ತಿದ್ದರು ಎಂದು ಅವರು ಹೇಳಿದರು.

ಫಲಿತಾಂಶ ಪ್ರಕಟವಾದ ಎರಡು ವಾರಗಳ ನಂತರ ಅವರಿಗೆ ತಮ್ಮ ಶ್ರೇಣಿ ಬಗ್ಗೆ ತಿಳಿಯಿತು. ಅವರು ರಾಜ್ಯಕ್ಕೆ ಮೂರನೇ ಸ್ಥಾನ ಪಡೆದುಕೊಂಡಿದ್ದರು. ನಾನು ಎಂದಿಗೂ ಮೊದಲ ಶ್ರೇಣಿ ನಿರೀಕ್ಷಿಸಿರಲಿಲ್ಲ. ನಾನು ಶೇ.100ರಷ್ಟು ಶ್ರಮ ಹಾಕಿದ್ದೆ. ಅದರ ಫಲಶೃತಿ ದೊರೆತಿದೆ. ಈಗ ನಾನು ಹಿರಿಯ ವಕೀಲ ಆರ್ ವಿನೋದ್ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದ್ದೇನೆ” ಎಂದು ಜಯಶ್ರೀ ತಿಳಿಸಿದ್ದಾರೆ.

ಅವರು ಭವಿಷ್ಯದಲ್ಲಿ ಸ್ವತಂತ್ರ ಕ್ರಿಮಿನಲ್ ವಕೀಲರಾಗಬೇಕೆಂದು ಬಯಸಿದ್ದಾರೆ. “ವಕೀಲರು ಪ್ರಾಮಾಣಿಕರಾಗಿರಬೇಕು ಮತ್ತು ಕ್ಲೈಂಟ್‌ಗೆ ಏಜೆಂಟರಾಗಿ ಕೆಲಸ ಮಾಡಬೇಕು. ನನ್ನ ಕೆಲಸವನ್ನು ಸತ್ಯ-ನಿಷ್ಠೆಯಿಂದ ಮಾಡಲು ಮತ್ತು ನ್ಯಾಯವನ್ನು ಒದಗಿಸಲು ಶ್ರಮಿಸುತ್ತೇನೆ” ಎಂದು ಅವರು ಹೇಳಿದ್ದಾರೆ.

ವಯಸ್ಸನ್ನು ಲೆಕ್ಕಿಸದೆ ಯಾರು ಬೇಕಾದರೂ ತಮ್ಮ ಕನಸುಗಳನ್ನು ಮುಂದುವರಿಸಬಹುದು. “ನಮ್ಮ ಕುಟುಂಬದ ದೃಢ ನಿಶ್ಚಯ, ಕಠಿಣ ಪರಿಶ್ರಮ ಮತ್ತು ಬೆಂಬಲ ವಿದ್ದರೆ ಏನು ಬೇಕಾದರೂ ಸಾಧಿಸಬಹುದು. ನೀವು ಕನಸು ಕಾಣುತ್ತಿರಿ, ಆ ಕನಸಿನ ಗುರಿಯನ್ನು ಸಾಧಿಸಲು ಶ್ರಮಿಸಬೇಕು”ಎಂದು ಅವರು ಹೇಳಿದರು.

ಜಯಶ್ರೀ ಅವರ ಪತಿ ಗೋಪಾಕುಮಾರ್ ಬಡಗಿ ಕೆಲಸ ಮಾಡುತ್ತಿದ್ದಾರೆ. ಅವರ ಮಕ್ಕಳಾದ ಗೋಕುಲ್ ಮತ್ತು ಗೋಪಿಕಾ ಪ್ರಸ್ತುತ ಪದವಿ ಓದುತಿದ್ದಾರೆ.


ಇದನ್ನೂ ಓದಿ: ಸಾವಿರ ಪದಗಳ ಮೌಲ್ಯ ಹೊಂದಿದ ವಿವಿಧ ರೀತಿಯಲ್ಲಿ ಮಡಿಕೆ ಹೊತ್ತ 3 ಮಹಿಳೆಯರ ವರ್ಣಚಿತ್ರ…

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights