ಕೃಷಿ ಕಾಯ್ದೆಗಳ ಸಮರ್ಥನೆಗಾಗಿ 8 ಕೋಟಿ ಖರ್ಚು ಮಾಡಿದೆ ಮೋದಿ ಸರ್ಕಾರ!
ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ಮಧ್ಯೆ, ತನ್ನ ಕಾನೂನುಗಳನ್ನು ಸಮರ್ಥಿಸಿಕೊಂಡು ಅಭಿಯಾನ ನಡೆಸಲು 8 ಕೋಟಿ ರೂಗಳನ್ನು ಖರ್ಚು ಮಾಡಿದೆ. ಈ ಮೊತ್ತವನ್ನು ವಿವಿಧ ಸರ್ಕಾರಿ ಇಲಾಖೆಗಳು ಸೆಪ್ಟೆಂಬರ್ 2020 ಮತ್ತು ಜನವರಿ 2021 ರ ನಡುವೆ ಖರ್ಚು ಮಾಡಿವೆ. ರೈತರ ಆಂದೋಲನವನ್ನು ಎದುರಿಸಲು ಸರ್ಕಾರ ಭಾರೀ ಕಸರತ್ತು ನಡೆಸುತ್ತಿದೆ. ಆದರೆ, ಅವು ಫಲ ನೀಡುತ್ತಿಲ್ಲ.
ಪತ್ರಿಕಾಗೋಷ್ಠಿಗಳು ಮತ್ತು ಮಾಹಿತಿ ಪ್ರಸಾರವನ್ನು ಮಂತ್ರಿಗಳು ಮತ್ತು ಸರ್ಕಾರಿ ಕಾರ್ಯಕರ್ತರು ಮಾಡುತ್ತಿರುವುದನ್ನೂ ಹೊರತುಪಡಿಸಿ, ಕಳೆದ ನಾಲ್ಕು-ಐದು ತಿಂಗಳಲ್ಲಿ ವಿವಿಧ ಮಾಧ್ಯಮ ವೇದಿಕೆಗಳ ಮೂಲಕ ಜಾಹೀರಾತುಗಳಿಗಾಗಿ ಗಣನೀಯ ಮೊತ್ತವನ್ನು ಖರ್ಚು ಮಾಡಲಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಬ್ಯೂರೋ ಆಫ್ ಔಟ್ರೀಚ್ ಅಂಡ್ ಕಮ್ಯುನಿಕೇಷನ್ (ಬಿಒಸಿ)ಯು ಜಾಹೀರಾತುಗಳಿಗಾಗಿ ಗರಿಷ್ಠ 7.25 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಸಂಸತ್ತಿನಲ್ಲಿ ಶುಕ್ರವಾರ ತಿಳಿಸಿದ್ದಾರೆ.
ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ರೈತರು ಮತ್ತು ಇತರ ಜನರಿಗೆ ಜಾಗೃತಿ ಮೂಡಿಸಲು ಮುದ್ರಣ ಜಾಹೀರಾತುಗಳನ್ನು ಹಿಂದಿ, ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಯ ಪತ್ರಿಕೆಗಳಲ್ಲಿ ಬಿಒಸಿ ಮೂಲಕ ಪ್ರಕಟಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಎಲೆಕ್ಟ್ರಾನಿಕ್ ಮತ್ತು ಸೋಷಿಯಲ್ ಮೀಡಿಯಾ ಪ್ರಚಾರ ಹಾಗೂ ವೆಬ್ನಾರ್ಗಳ ಮೂಲಕ ಪ್ರಚಾರಕ್ಕಾಗಿ ಕೃಷಿ ಕಾನೂನುಗಳ ಕುರಿತು ಮೂರು ಪ್ರಚಾರ ಮತ್ತು ಎರಡು ಶೈಕ್ಷಣಿಕ ಚಲನಚಿತ್ರಗಳನ್ನು ನಿರ್ಮಿಸಲು ಸುಮಾರು 68 ಲಕ್ಷ ರೂಗಳನ್ನು ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯು ಖರ್ಚು ಮಾಡಿದೆ.
“ಅಲ್ಲದೆ, ಮುದ್ರಣ ಜಾಹೀರಾತುಗಳಿಗಾಗಿ ಕ್ರಿಯೇಟಿವ್ ಕಂಟೆಂಟ್ಗಳನ್ನು ರೂಪಿಸಲು 1,50,568 ರೂ.ಗಳನ್ನು ಖರ್ಚು ಮಾಡಲಾಗಿದೆ.”
ಇದನ್ನೂ ಓದಿ: TMC ಭ್ರಷ್ಟಾಚಾರ ಮಾಡಿದೆ ಎಂದು BJP ಸಾಬೀತುಪಡಿಸದಿದ್ದರೆ ಮೋದಿ ಸರ್ಕಾರ ರಾಜೀನಾಮೆ ನೀಡಬೇಕು: ಮಮತಾ

