ಬಂಗಾಳ ಚುನಾವಣೆ: ‘ಹೆಣ್ಣು ಹುಲಿ’ ಮಮತಾಗೆ ಬೆಂಬಲ ಘೋಷಿಸಿದ ಶಿವಸೇನಾ!
ಮಾರ್ಚ್ 27ರಿಂದ ಪಶ್ಚಿಮ ಬಂಗಾಳ ಚುನಾವಣೆ ನಡೆಯಲಿದ್ದು, ಬಂಗಾಳ ಚುನಾವಣೆಯಲ್ಲಿ ಶಿವಸೇನಾ ಸ್ಪರ್ಧಿಸುವುದಿಲ್ಲ. ಬದಲಿಗೆ, ರಾಜ್ಯದಲ್ಲಿ ಘರ್ಜಿಸುತ್ತಿರುವ ಬಂಗಾಳದ ಹೆಣ್ಣು ಹುಲಿ ಸಿಎಂ ಮಮತಾ ಬ್ಯಾನರ್ಜಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.
ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಟಿಎಂಸಿಗೆ ಬೆಂಬಲ ನೀಡುವುದಾಗಿ ನಿರ್ಧರಿಸಲಾಗಿದ್ದು, ಬಂಗಾಳ ಚುನಾವಣೆಯಲ್ಲಿ ಮಮತಾಗೆ ಅತ್ಯಧಿಕ ಯಶಸ್ಸು ಸಿಗಲಿ ಎಂದು ಸೇನಾ ಆರೈಸುತ್ತದೆ ಎಂದು ರಾವತ್ ತಿಳಿಸಿದ್ದಾರೆ.
ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಶಿವಸೇನಾ ತನ್ನ ನೆಲೆಯನ್ನು ಸ್ಥಾಪಿಸಲಿದ್ದು, ಚುನಾವಣೆಯಲ್ಲಿ ಸೇನಾ ಸ್ಪರ್ಧಿಸಲಿದೆ ಎಂದು ಜನವರಿ 17ರಂದು ರಾವತ್ ಘೋಷಿಸಿದ್ದರು. ಆದರೆ, ಇದೀಗ ಪಕ್ಷದ ನಿಲುವನ್ನು ಬದಲಾಯಿಸಿರುವ ಸೇನಾ ಮಮತಾ ಜೊತೆ ನಿಲ್ಲಲಿದೆ. ಈ ಮೂಲಕ ಒಗ್ಗಟ್ಟು ಪ್ರದರ್ಶಿಸಲಿದೆ ಎಂದು ಹೇಳಿದ್ದಾರೆ.
ಈಗಾಗಲೇ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಬಂಗಾಳ ಚುನಾವಣೆಯಲ್ಲಿ ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿ ಬೆಂಬಲ ಘೋಷಿಸಿದೆ. ಅಲ್ಲದೆ, ಇನ್ನಿತರ ಪಕ್ಷಗಳೂ ಬೆಂಬಲಿಸುವುದಾಗಿ ತಿಳಿಸಿವೆ.
ಬಂಗಾಳದಲ್ಲಿ ಮಾರ್ಷ್ 27ರಿಂದ ಚುನಾವಣೆ ಆರಂಭವಾಗಲಿದ್ದು, 08 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೇ 02ರಂದು ಫಲಿತಾಂಶ ಹೊರಬೀಳಲಿದೆ.
ಇದನ್ನೂ ಓದಿ: ಬಂಗಾಳದಲ್ಲಿ ಮಮತಾಗೆ ಮತ್ತಷ್ಟು ಬಲ; TMCಗೆ ಬೆಂಬಲ ಘೋಷಿಸಿದ RJD ನಾಯಕ ತೇಜಸ್ವಿ ಯಾದವ್!

