ಸಿಡಿ ಲೇಡಿ ಎಲ್ಲಿದ್ದಾಳೆ? ಎಸ್ಐಟಿ ಟೀಂಗೆ ಸ್ಪೋಟಕ ಮಾಹಿತಿ ಲಭ್ಯ…
ಸಾಹುಕಾರ್ ಸಿಡಿ ಯುವತಿ ಪತ್ತೆಗೆ ಎಸ್ಐಟಿ ಬಲೆ ಬೀಸಿದ್ದು ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಮೊಬೈಲ್ ಟ್ರಾಕ್ ಮೂಲಕ ಯುವತಿಯ ಹಡಗು ಪ್ರಯಾಣ ಲಭ್ಯವಾಗಿದೆ.
ಸಿಡಿ ಸ್ಪೋಟಗೊಂಡಾಗಿನಿಂದಲೂ ತಲೆಮರಿಸಿಕೊಂಡು ಸುತ್ತಾಡುತ್ತಿರುವ ಯುವತಿ ಯಾರ ಕೈಗೂ ಸಿಗುತ್ತಿಲ್ಲ. ಈಕೆಯೊಂದಿಗೆ ಮೂವರು ಆರೋಪಿಗಳನ್ನು ಎಸ್ಐಟಿ ಹುಡುಕುತ್ತಿದೆ.
ಹೈದರಾಬಾದ್, ಗೋವಾ ಬಳಿಕ ಯುವತಿ ದೆಹಲಿಯಲ್ಲಿ ಇದ್ದಾಳೆ ಎನ್ನುವ ಮಾಹಿತಿ ಮೊಬೈಲ್ ಟ್ರಾಕ್ ಮೂಲಕ ಲಭ್ಯವಾಗಿದೆ. ಎರಡು ದಿನಗಳ ಹಿಂದೆ ಯುವತಿಯ ಮೊಬೈಲ್ ದೆಹಲಿಯಲ್ಲಿ ಆನ್ ಆಂಡ್ ಆಫ್ ಆಗಿದೆ. ಹೀಗಾಗಿ ಎಸ್ ಐಟಿ ದೆಹಲಿಗೆ ದೌಡಾಯಿಸಿದೆ. ಮಾತ್ರವಲ್ಲದೇ ಕೊಚ್ಚಿ ಕಡೆ ಯುವತಿ ಮತ್ತು ಕಿಂಗ್ ಪಿನ್ ಗಳು ಓಡಾಡಿರುವ ಶಂಕೆ ವ್ಯಕ್ತವಾಗಿದೆ. ರಾತ್ರಿ ಹೊತ್ತು ಟ್ರಾವೆಲ್ ಮಾಡುವ ಜೋಡಿ ಹಗಲೊತ್ತು ರೂಂ ನಲ್ಲಿ ಇರುವ ಶಂಕೆ ಇದೆ.
ಇತ್ತ ಎಪಿಎಮ್ ಸಿ ಪೊಲೀಸ್ ಠಾಣೆ ಪೊಲೀಸರು ಯುವತಿ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣ ಮಾಡುತ್ತಿರುವ ಸಿಡಿ ಗ್ಯಾಂಗ್ ಪತ್ತೆ ಎಸ್ಐಟಿಗೆ ತಲೆ ನೋವಾಗಿ ಪರಿಣಮಿಸಿದೆ.
ಯಾಕಂದರೆ ಸಾಹುಕಾರ್ ಮುಂದಿನ ನಡೆ ನೋಡಿ ಸಿಡಿ ಗ್ಯಾಂಗ್ ಆಟವಾಡುತ್ತಿದ್ದು ಸಾಕಷ್ಟು ಅನುಮಾನಗಳನ್ನು ಸೃಷ್ಟಿ ಮಾಡಿದೆ. ಈ ಹಿಂದೆ ಸಾಹುಕಾರ್ ಯುವತಿ ಬಗ್ಗೆ ಹೇಳಿದ್ದ ಎಲ್ಲಾ ಮಾತುಗಳು ಸುಳ್ಳಾ? ಯುವತಿ ಇಲ್ಲೇ ಬೇರೆ ಬೇರೆ ರಾಜ್ಯಗಳನ್ನು ಸುತ್ತಾಡಿಕೊಂಡು ಇದ್ದಾಳೆ. ಆದರೂ ಸಾಹುಕಾರ್ ವಿದೇಶದಲ್ಲಿದ್ದಾಳೆ ಎನ್ನುವ ಮಾತನ್ನು ಆಡಿದರು. ಸಿಡಿ ಬಿಡುಗಡೆಗೆ ಕೋಟಿ ಕೋಟಿ ಹಣ ಡೀಲ್ ಆಗಿದೆ ಎಂದರು. ಆದರೆ ಇಲ್ಲಿ ರಮೇಶ್ ಜಾರಕಿಹೊಳಿಯವರೇ ಸಿಡಿ ಬಿಡುಗಡೆ ಮಾಡದಂತೆ ಹಣ ನೀಡಿದ್ದರು ಎನ್ನುವ ಮಾಹಿತಿ ಎಸ್ಐಟಿಯಿಂದ ಲಭ್ಯವಾಗಿದೆ. ಹೀಗಾಗಿ ಸಿಡಿ ಗ್ಯಾಂಗ್ ಗೂ ರಮೇಶ್ ಜಾರಕಿಹೊಳಿಗೂ ಯಾವುದೋ ಒಂದು ರೀತಿಯಲ್ಲಿ ಲಿಂಕ್ ಇದೆ ಎನ್ನುವ ಸಾಕಷ್ಟು ಅನುಮಾನಗಳು ಹುಟ್ಟಿಕೊಳ್ಳುತ್ತಿವೆ.
ಆದರೆ ಈ ಎಲ್ಲಾ ಅನುಮಾನಗಳು ಹಾಗೂ ಹೇಳಿಕೆಗಳಿಗೆ ತೆರೆ ಬೀಳುವುದು ಸಿಡಿ ಗ್ಯಾಂಗ್ ಸಿಕ್ಕಾಗ ಮಾತ್ರ. ಅಲ್ಲಿಯವರೆಗೂ ನಾವು ಕಾಯಲೇಬೇಕು.

