FACT CHECK | ವಿಮಾನದಲ್ಲಿ ಸಿಗರೇಟ್‌ ಸೇದಿ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸುವ ಮಹಿಳೆಯ ವಿಡಿಯೋದ ಅಸಲೀಯತ್ತೇನು?

ವಿಮಾನದೊಳಗೆ ಕುಳುತಿರುವ ಮಹಿಳೆಯೊಬ್ಬರು ಸಿಗರೇಟ್ ಸೇದಿ, ವಿಮಾನವನ್ನು ಬೆಂಕಿಯಿಂದ ಸುಡಲು ಪ್ರಯತ್ನಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಳ್ಳುವ ಮೂಲಕ ಮುಸ್ಲಿಮೇತರರನ್ನು ಕೊಲ್ಲಲು ಮಹಿಳೆಯೊಬ್ಬರು ಈ ರೀತಿ ಕೃತ್ಯ ಎಸಗಿದ್ದಾರೆ ಎಂದು ಪ್ರತಿಪಾದಿಸುತ್ತ, ಕೋಮು ದ್ವೇಷದ ಹಿನ್ನಲೆಯಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದಾರೆ.


“(ಟರ್ಕಿ)ಇಸ್ತಾಂಬುಲ್‌ನಿಂದ ಸೈಪ್ರಸ್‌ಗೆ ಹೋಗುತ್ತಿದ್ದ ವಿಮಾನದಲ್ಲಿ ಫಾತಿಮಾ ವಿಮಾನಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸಿದಳು,” ಎಂದು ಫ್ರಂಟಲ್‌ ಫೋರ್ಸ್‌ (FrontalForce) ಎಂಬ ಎಕ್ಸ್‌ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

OliLondonTV ಎಕ್ಸ್ ಬಳಕೆದಾರ ಒಲಿ ಲಂಡನ್‌  ಎನ್ನುವವರೂ ಇದೇ ರೀತಿಯ ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. “ಟರ್ಕಿಯ ವಿಮಾನದಲ್ಲಿ ಮಹಿಳೆಯೊಬ್ಬಳು ಧೂಮಪಾನ ಮಾಡಿ, ವಿಮಾನವನ್ನು ‘ಉಡಾಯಿಸುವ’ ಬೆದರಿಕೆ ಹಾಕಿದಳು. ಆದರೆ ಪ್ರಯಾಣಿಕರು ಮತ್ತು ಸಿಬ್ಬಂದಿ ಆಕೆಯನ್ನು ತಡೆದರು,” ಎಂದು ಅವರು ಬರೆದುಕೊಂಡಿದ್ದಾರೆ.

ರಿಯಲ್‌ ಬಾಬಾ ಬನಾರಸ್‌ (RealBababanaras) ಹೆಸರಿನ ಇನ್ನೋರ್ವ ಎಕ್ಸ್‌ ಬಳಕೆದಾರರು ಕೂಡ ಇದೇ ವಿಡಿಯೋವನ್ನು ಹಂಚಿಕೊಂಡಿದ್ದಾರೆ. “ಇಸ್ತಾಂಬುಲ್‌ನಿಂದ ಸೈಪ್ರಸ್‌ಗೆ ಹೋಗುತ್ತಿದ್ದ ವಿಮಾನದಲ್ಲಿ ಫಾತಿಮಾ ಮುಸ್ಲಿಮೇತರರು ತುಂಬಿದ್ದ ವಿಮಾನಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸಿದಳು. ಅವರು ಭಯ ಹುಟ್ಟಿಸಲು ಎಲ್ಲವನ್ನೂ ಆಯುಧವಾಗಿ ಬಳಸುತ್ತಿದ್ದಾರೆ,” ಎಂದು ಹೇಳಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದು ಇದರ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದ ಸತ್ಯಾಸತ್ಯತೆಗಳನ್ನು ಪರಿಶೀಲಿಸಲು ಗೂಗಲ್ ಲೆನ್ಸ್ ಮೂಲಕ ರಿವರ್ಸ್‌ ಇಮೇಜಸ್‌ನಲ್ಲಿ ಸರ್ಚ್‌ ಮಾಡಿದಾಗ, ಇದೇ ವಿಡಿಯೋ ಇರುವ 2019ರ ಟ್ವೀಟ್‌ವೊಂದು ಲಭ್ಯವಾಗಿದೆ. ಇದರಿಂದ ವೈರಲ್ ಆಗಿರುವ ಘಟನೆಯು ಇತ್ತೀಚೆಗೆ ನಡೆದಿದ್ದಲ್ಲ ಎಂಬುದು ಸ್ಪಷ್ಟವಾಗಿದೆ.

ಈ ಘಟನೆಗೆ ಸಂಬಂಧಿಸಿದ ವಿಡಿಯೋಗಳು ಲಭ್ಯವಿದೆಯೆ ಎಂದು ಪರಿಶೀಲಿಸಲು ಕೀವರ್ಡ್‌ಗಳ ಮೂಲಕ ಸರ್ಚ್ ಮಾಡಿದಾಗ, ದುವಾರ್‌ ಇಂಗ್ಲಿಷ್‌ (Duvar English) ಎಂಬ ವೆಬ್‌ಸೈಟ್‌ನಲ್ಲಿ 2019ರಲ್ಲಿ ಪ್ರಕಟವಾದ ವರದಿಯೊಂದು ಲಭ್ಯವಾಗಿದೆ. ವರದಿಯ ಪ್ರಕಾರ, ಇಸ್ತಾಂಬುಲ್‌ನಿಂದ ಉತ್ತರ ಸೈಪ್ರಸ್‌ಗೆ ಹೋಗುತ್ತಿದ್ದ ವಿಮಾನದಲ್ಲಿ ಮಹಿಳೆಯೊಬ್ಬಳು ವಿಮಾನವನ್ನು ‘ಉಡಾಯಿಸುವುದಾಗಿ’ ಬೆದರಿಕೆ ಹಾಕಿದ್ದಳು. ಆಕೆ 2016ರ ದಂಗೆ ಪ್ರಯತ್ನದ ಪ್ರಮುಖ ಶಂಕಿತ ಸಂಘಟನೆ ಗುಲೆನ್‌ನ ಸದಸ್ಯೆ ಎಂದು ಹೇಳಿಕೊಂಡಿದ್ದಳು.

ಈ ಎಲ್ಲ ಆಧಾರಗಳ ಮೇಲೆ ವಿಮಾನದಲ್ಲಿ ಸಿಗರೇಟ್‌ ಹಚ್ಚಿ, ವಿಮಾನಕ್ಕೆ ಬೆಂಕಿ ಹಚ್ಚುವುದಾಗಿ ಬೆದರಿಸಿದ ಮಹಿಳೆಯ ವಿಡಿಯೋ ಹಳೆಯದು ಎಂದು ತಿಳಿದುಬಂದಿದೆ. ಈ ವಿಡಿಯೋ 2019ರಲ್ಲಿ ಇಸ್ತಾಂಬುಲ್‌ನಿಂದ ಉತ್ತರ ಸೈಪ್ರಸ್‌ಗೆ ಹೋಗುತ್ತಿದ್ದ ವಿಮಾನದಲ್ಲಿ ನಡೆದ ಘಟನೆಯಾಗಿದ್ದು, ಇದನ್ನು ಮತ್ತೊಮ್ಮೆ ಎಲ್ಲೆಡೆ ಹಂಚಿಕೊಳ್ಳಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 6 ವರ್ಷದ ಹಿಂದೆ ಅಂದರೆ 2019ರಲ್ಲಿ ಟರ್ಕಿಯ ವಿಮಾನದಲ್ಲಿ ಮಹಿಳೆಯೊಬ್ಬಳು ಧೂಮಪಾನ ಮಾಡಿ, ವಿಮಾನಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸಿದಳು ಎಂಬುದು ನಿಜ. ಆದರೆ ಮುಸ್ಲಿಮೇತರರನ್ನು ತುಂಬಿದ್ದ ವಿಮಾನಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸಿದಳು ಎಂಬುದು ಸುಳ್ಳು. ವಾಸ್ತವವಾಗಿ ಗುಲೆನ್ ಸಂಘಟನೆಯ ಸದಸ್ಯೆಯಾಗಿರುವ ಆಕೆ, ಬೆದರಿಕೆ ಹಾಕುವ ಸಲುವಾಗಿ ಹೀಗೆ ಮಾಡಿದ್ದಳು ಎಂದು ತಿಳಿದು ಬಂದಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ  ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ನಟ ವಿಜಯ್ ಇಫ್ತಾರ್‌ನಲ್ಲಿ ಭಾಗವಹಿಸಿದಕ್ಕೆ ತಮ್ಮ ಪಕ್ಷದ ಕಚೇರಿಯನ್ನು ಧ್ವಂಸ ಮಾಡಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights