ದೇಶದಲ್ಲಿ ಕೊರೊನಾ ರುದ್ರನರ್ತನ: 2021ರಲ್ಲೇ ಮೊದಲ ಬಾರಿಗೆ 72,000ಕ್ಕೂ ಹೆಚ್ಚು ಹೊಸ ಕೇಸ್!
ದೇಶದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದ್ದು, ಮತ್ತೆ ಜನರಲ್ಲಿ ಆತಂಕ ಹೆಚ್ಚಿಸಿದೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಸಾವಿರಾರು ಸಂಖ್ಯೆಯಲ್ಲಿ ಅಧಿಕವಾಗುತ್ತಿದೆ.
ಕಳೆದ 24 ಗಂಟೆಯಲ್ಲಿ 2021ರಲ್ಲೇ ಮೊದಲ ಬಾರಿಗೆ 72,330 ಹೊಸ ಪ್ರಕರಣಗಳು ದೇಶದಲ್ಲಿ ದಾಖಲಾಗಿವೆ. 159 ದಿನಗಳ ಬಳಿಕ ಅಂದರೆ ಕಳೆದ 5 ತಿಂಗಳ ಅವಧಿಯಲ್ಲೇ ಒಂದೇ ದಿನ ಇಷ್ಟೊಂದು ಮಂದಿಯಲ್ಲಿ ಸೋಂಕು ಕಾಣಸಿಕೊಳ್ಳುತ್ತಿರುವುದು ಇದೇ ಮೊದಲಾಗಿದೆ.
ಮತ್ತೊಂದೆಡೆ ಕೊರೋನಾ ಸೋಂಕಿಗೆ 459 ಮಂದಿ ಬಲಿಯಾಗಿದ್ದಾರೆ.ಇದರೊಂದಿಗೆ ಈ ವರೆಗೆ ಮಾರಕ ವೈರಾಣು ದಾಳಿಯಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆ 1,62,927ಕ್ಕೆ ಏರಿಕೆಯಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,22,21,665ಕ್ಕೆ ತಲುಪಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5,84,055ಕ್ಕೆ ಏರಿಕೆಯಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ (ಮೊಹೆಚ್‌ಎಫ್‌ಡಬ್ಲ್ಯು) ಪ್ರಕಾರ, ಭಾರತದಲ್ಲಿ 5,52,566 ಸಕ್ರಿಯ ಸೋಂಕು ಪ್ರಕರಣಗಳಿದ್ದು, 1,14,34,301 ರೋಗಿಗಳು ಚೇತರಿಸಿಕೊಂಡಿದ್ದಾರೆ ಮತ್ತು 1,62,468 ಜನರು ದೇಶದಲ್ಲಿ ಕೋವಿಡ್ -19 ಗೆ ಬಲಿಯಾಗಿದ್ದಾರೆ. ಕೋವಿಡ್ -19 ವಿರುದ್ಧ ಒಟ್ಟು 6,30,54,353 ಭಾರತೀಯರಿಗೆ ಲಸಿಕೆ ನೀಡಲಾಗಿದೆ.45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ -19 ವಿರುದ್ಧ ವ್ಯಾಕ್ಸಿನೇಷನ್ ಇಂದು ಪ್ರಾರಂಭವಾಗುತ್ತದೆ.
ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 39,000 ಹೊಸ ಪ್ರಕರಣಗಳು ದಾಖಲಾಗಿವೆ ಮತ್ತು 227 ವೈರಸ್ ಸಂಬಂಧಿತ ಸಾವುಗಳು ದಾಖಲಾಗಿವೆ.

